ಸುಲ್ತಾನ್ ಆಫ್ ಜೋಹೊರ್ ಕಪ್: ಭಾರತ-ಬ್ರಿಟನ್ ಪಂದ್ಯ ರೋಚಕ ಡ್ರಾ

Update: 2019-10-19 05:03 GMT

ಜೊಹೊರ್ ಬಹ್ರು(ಮಲೇಶ್ಯಾ), ಅ.18: ಒಂಬತ್ತನೇ ಆವೃತ್ತಿಯ ಸುಲ್ತಾನ್ ಆಫ್ ಜೋಹೊರ್ ಕಪ್‌ನಲ್ಲಿ ಶುಕ್ರವಾರ ನಡೆದ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ಭಾರತದ ಜೂನಿಯರ್ ಪುರುಷರ ಹಾಕಿ ತಂಡ ಹಾಗೂ ಬ್ರಿಟನ್ 3-3 ಅಂತರದಿಂದ ಡ್ರಾ ಸಾಧಿಸಿವೆ.

ಮೊದಲ ಕ್ವಾರ್ಟರ್‌ನಲ್ಲಿ ಭಾರತ ಪಂದ್ಯದ ವೇಗವನ್ನು ನಿಯಂತ್ರಿಸಿತು ಹಾಗೂ ಪ್ರತಿ ದಾಳಿಯಲ್ಲೂ ಮುಂಚೂಣಿಯಲ್ಲಿತ್ತು. ಆದರೆ, ಬ್ರಿಟನ್‌ನ ರಕ್ಷಣಾಕೋಟೆಯನ್ನು ಭೆೇದಿಸಲು ಸಾಧ್ಯವಾಗಲಿಲ್ಲ.

ಭಾರತ 11ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್‌ನ್ನು ಗೆದ್ದುಕೊಂಡಿತು. ದಿನಚಂದ್ರ ಸಿಂಗ್ ಬಾರಿಸಿದ ಗೋಲನ್ನು ಒಲಿವೆರ್ ಪೈನ್ ತಡೆದರು. ಬ್ರಿಟನ್ ಕೊನೆಗೂ 27ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಗಳಿಸಿತು. ಲೋನ್ ವ್ಯಾನ್ ಅವರ ಡ್ರಾಗ್‌ಫ್ಲಿಕ್ ನೆರವಿನಿಂದ ಬ್ರಿಟನ್ ಮೊದಲ ಗೋಲು ಗಳಿಸಿತು. ಭಾರತ ತಕ್ಷಣವೇ ತಿರುಗೇಟು ನೀಡಲು ಯತ್ನಿಸಿದ್ದು, ಶೀಲಾನಂದ ಲಾಕ್ರಾ ಗಳಿಸಿದ ಚೆಂಡನ್ನು ಪೈನ್ ತಡೆದರು.

ಮೊದಲಾರ್ಧದ ಅಂತ್ಯಕ್ಕೆ ಭಾರತ 0-1 ಹಿನ್ನಡೆಯಲ್ಲಿತ್ತು. ಬ್ರಿಟನ್ ಮೂರನೇ ಕ್ವಾರ್ಟರ್‌ನಲ್ಲಿ ಕ್ಷಿಪ್ರವಾಗಿ ಗೋಲು ಗಳಿಸಿದ್ದು, 23ನೇ ನಿಮಿಷದಲ್ಲಿ ಆ್ಯಂಡ್ರೂ ಮೆಕ್‌ಕಾನೆಲ್ ಗೋಲು ನೆರವಿನಿಂದ ಮುನ್ನಡೆಯನ್ನು 2-0ಗೆ ಏರಿಸಿತು.

ಮನ್‌ದೀಪ್ ಮೋರ್ ನೀಡಿದ ಪಾಸ್‌ನ ನೆರವಿನಿಂದ ಶೀಲಾನಂದ ಲಾಕ್ರಾ ಕೊನೆಗೂ ಭಾರತದ ಪರ ಮೊದಲ ಗೋಲು ಗಳಿಸಿದರು. 51ನೇ ನಿಮಿಷದಲ್ಲಿ ಮನ್‌ದೀಪ್ ಮೋರ್ ಗೋಲು ಗಳಿಸಿ ಸ್ಕೋರನ್ನು 2-2ರಿಂದ ಸಮಬಲಗೊಳಿಸಿದರು. ಬ್ರಿಟನ್‌ಗೆ ಫೈನಲ್ ತಲುಪಲು ಪಂದ್ಯ ಡ್ರಾಗೊಳಿಸುವ ಅಗತ್ಯವಿತ್ತು. 57ನೇ ನಿಮಿಷದಲ್ಲಿ ದಿಲ್‌ಪ್ರೀತ್ ನೀಡಿದ ಪಾಸ್ ನೆರವಿನಿಂದ ಶಾರ್ದಾ ನಂದ ತಿವಾರಿ ಭಾರತಕ್ಕೆ 3-2 ಮುನ್ನಡೆ ಒದಗಿಸಿಕೊಟ್ಟರು. 59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಮ್ಯಾಥ್ಯೂ ರೆನ್‌ಶಾ ಸ್ಕೋರನ್ನು 3-3ರಿಂದ ಸಮಬಲಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News