ಭಾರತವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ 296ನೇ ಕ್ರಿಕೆಟಿಗ ನದೀಂ

Update: 2019-10-19 18:03 GMT

ರಾಂಚಿ,ಅ.19: ಜಾರ್ಖಂಡ್‌ನ ಎಡಗೈ ಸ್ಪಿನ್ನರ್ ಶಹಬಾಝ್ ನದೀಂ ಶನಿವಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ 296ನೇ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ನದೀಂ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತದ ಆಡುವ 11ರ ಬಳಗದಲ್ಲಿ ಇಶಾಂತ್ ಶರ್ಮಾ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡರು. ಶರ್ಮಾಗೆ ಮೂರನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ.

ನದೀಂ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಬೇಕೆಂಬ ಕನಸನ್ನು ತನ್ನ ತವರು ಪಟ್ಟಣದಲ್ಲಿಯೇ ನನಸು ಮಾಡಿಕೊಂಡಿದ್ದಾರೆ ಎಂದು ಟಾಸ್ ವೇಳೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದರು.

ಭಾರತದ ಎಡಗೈ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಭುಜನೋವಿಗೆ ತುತ್ತಾಗಿ ಮೂರನೇ ಪಂದ್ಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ನದೀಂ ಕೊನೆಯ ಕ್ಷಣದಲ್ಲಿ ಭಾರತ ತಂಡಕ್ಕೆ ಕರೆ ಪಡೆದಿದ್ದರು. ದೇಶೀಯ ಹಾಗೂ ಭಾರತ ಎ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ನದೀಂ ಟೆಸ್ಟ್ ಕ್ರಿಕೆಟ್‌ನಲ್ಲಿ ಕಾಲಿಟ್ಟಿರುವುದು ಯಾರಿಗೂ ಅಚ್ಚರಿ ಎನಿಸಿಲ್ಲ.

 ನದೀಂ ಈ ತನಕ 110 ಪ್ರಥಮ ದರ್ಜೆ ಪಂದ್ಯಗಳಲ್ಲಿ 424 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ 64 ಪಂದ್ಯಗಳನ್ನು ಆಡಿರುವ ಅವರು 42 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 30ರ ಹರೆಯದ ನದೀಂ ರಣಜಿ ಟ್ರೋಫಿಯಲ್ಲಿ ಸತತ ಎರಡು ಆವೃತ್ತಿಗಳಲ್ಲಿ 50ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಕ್ರಮವಾಗಿ 2015-16 ಹಾಗೂ 2016-17ರಲ್ಲಿ ನದೀಂ 51 ಹಾಗೂ 56 ವಿಕೆಟ್‌ಗಳನ್ನು ಪಡೆದಿದ್ದಾರೆ.

ಕಳೆದ ವರ್ಷ ರಾಜಸ್ಥಾನ ಹಾಗೂ ಜಾರ್ಖಂಡ್ ಮಧ್ಯೆ ನಡೆದಿದ್ದ ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ 10 ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 8 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು.

 ಭಾರತ ಎ ತಂಡದ ಖಾಯಂ ಸದಸ್ಯನಾಗಿರುವ ನದೀಂ ಭಾರತ ಎ ತಂಡದ ಪರ ಕಳೆದ ಮೂರು ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಫೆಬ್ರವರಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ 2 ಪಂದ್ಯಗಳಲ್ಲಿ ಭಾರತ ಎ ತಂಡದ ಪರ 7 ವಿಕೆಟ್‌ಗಳನ್ನು ಉರುಳಿಸಿದ್ದರು. ಭಾರತ ಎ ತಂಡ ಜುಲೈ-ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ 3 ಪ್ರಥಮದರ್ಜೆ ಪಂದ್ಯಗಳಲ್ಲಿ 2ರಲ್ಲಿ ಆಡಿದ್ದ ನದೀಂ 15 ವಿಕೆಟ್‌ಗಳನ್ನು ಕಬಳಿಸಿದ್ದರು. ಕಳೆದ ತಿಂಗಳು ದಕ್ಷಿಣ ಆಫ್ರಿಕಾ ಎ ವಿರುದ್ಧ ತವರಿನಲ್ಲಿ ನಡೆದ 2 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿದ್ದ ಭಾರತದ ಟಿ-20 ತಂಡದಲ್ಲಿ ನದೀಂ ಸ್ಥಾನ ಪಡೆದಿದ್ದರು. ಆದರೆ ಅವರು ಆಡುವ ಅಕಾಶ ಪಡೆದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News