"ಐಎಂಎ, ಆಂಬಿಡೆಟ್‌ ಕಂಪೆನಿಗಳಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುವುದು ತಡವಾಗಬಹುದು"

Update: 2019-10-19 17:11 GMT

ಬೆಂಗಳೂರು, ಅ.19: ಐಎಂಎ, ಆಂಬಿಡೆಟ್‌ನಂತಹ ವಂಚಕ ಕಂಪನಿಗಳಿಂದ ಅನ್ಯಾಯಕ್ಕೊಳಗಾದವರಿಗೆ ಕಾನೂನಾತ್ಮಕವಾಗಿ ನ್ಯಾಯ ಒದಗಿಸಲು ಸ್ವಲ್ಪ ತಡವಾಗಬಹುದು ಹೊರತು ಅನ್ಯಾಯವಾಗುವುದಿಲ್ಲ ಎಂದು ವಕೀಲ ಎಂ.ನಾರಾಯಣರೆಡ್ಡಿ ಹೇಳಿದ್ದಾರೆ.

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಇಂಡಿಯನ್ ಮೀಡಿಯಾ ಬುಕ್ ವತಿಯಿಂದ ಜಂಟಿಯಾಗಿ ನಗರದ ಸುವರ್ಣ ಕೃಷಿ ಸಭಾಂಗಣದಲ್ಲಿ ಆಯೋಜಿಸಿದ್ದ ಐಎಂಎ, ಆಂಬಿಡೆಂಟ್ ಮೊದಲಾದ ವಂಚಕ ಕಂಪನಿಗಳಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತರಿಗೆ ನ್ಯಾಯ ಹೇಗೆ? ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಂಪನಿಗಳಲ್ಲಿ ಪಾಲುದಾರರು ಆಗುವ ಮೊದಲು ಹಣ ಪಾವತಿ ಮಾಡುವ ವೇಳೆ ಅವರು ನೀಡುವ ರಸೀದಿ ಹಾಗೂ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಂಡಿರಬೇಕು. ನ್ಯಾಯಾಲಯದಲ್ಲಿ ತೀರ್ಪು ಬಂದ ಬಳಿಕ ನಿಮಗೆ ಹಣ ಹಿಂತಿರುಗಿಸಲು ದಾಖಲೆಗಳನ್ನು ಕೇಳಿದಾಗ ಅದನ್ನು ಪ್ರಸ್ತುತಪಡಿಸಬೇಕಿರುತ್ತದೆ ಎಂದು ಹೇಳಿದರು.

ಸಂತ್ರಸ್ತರಿಗೆ ಹಣ ನೀಡುವ ಸಲುವಾಗಿ ದಾಖಲೆಗಳು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅಷ್ಟರೊಳಗೆ ಅಗತ್ಯದಾಖಲೆ ನೀಡದಿದ್ದಲ್ಲಿ, ಅವರನ್ನು ಪರಿಗಣಿಸುವುದಿಲ್ಲ. ನೀವು ನೀಡುವ ನೈಜ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹಣ ನೀಡಲಾಗುತ್ತದೆ ಎಂದರು. ಐಎಂಎ ಹಾಗೂ ಆಂಬಿಡೆಂಟ್‌ನಂತಹ ವಂಚಕ ಕಂಪನಿಗಳಿಂದ ಮೋಸಕ್ಕೆ ಒಳಗಾದವರು ಒಂದು ಲಕ್ಷಕ್ಕೂ ಅಧಿಕ ಜನರಿದ್ದಾರೆ. ಇದೀಗ ಇವರಿಂದ ದಾಖಲೆಗಳನ್ನು ಹೇಗೆ ಪಡೆಯಬೇಕು ಎಂಬುದು ಸವಾಲಿನ ಕೆಲಸವಾಗಿದೆ. ಹೀಗಾಗಿ, ದಾಖಲೆ ನೀಡುವ ವೇಳೆ ಸುಳ್ಳು ದಾಖಲೆ ನೀಡಬೇಡಿ. ಅದರಿಂದ ಈ ಪ್ರಕರಣ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿರುತ್ತದೆ ಎಂದು ನುಡಿದರು. ರಾಜ್ಯದಲ್ಲಿ 2014 ರಲ್ಲಿಯೇ ಕೆಪಿಐಡಿಎಫ್‌ಇ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಆದರೆ, ಇದನ್ನು ಎಲ್ಲಿಯೂ ಮುನ್ನೆಲೆಗೆ ತರುವ ಪ್ರಯತ್ನ ಮಾಡಿಲ್ಲ. ಐಎಂಎ ಪ್ರಕರಣದ ಬಳಿಕ ಈ ಕಾಯ್ದೆಯನ್ನು ಬಳಸಿಕೊಳ್ಳಲಾಗಿದೆ. ಇಂತಹ ಒಂದು ಕಾಯ್ದೆ ಇದೆ ಎಂಬುದೇ ಪೊಲೀಸರಿಗೆ, ವಕೀಲರಿಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ಐಎಂಎ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ನ್ಯಾಯಯುತವಾಗಿ ದುಡಿದಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿ, ವಿಚಾರಣೆ ನಡೆಸುವುದು ಸೇರಿದಂತೆ ಎಲ್ಲವನ್ನೂ ನ್ಯಾಯಯುತವಾಗಿ ನಡೆಸಿದ್ದಾರೆ. ಅಲ್ಲದೆ, ಈ ಪ್ರಕರಣವನ್ನು ನಡೆಸುತ್ತಿರುವ ನ್ಯಾಯಾಧೀಶರೂ ಸರಕಾರಕ್ಕೆ ಸೂಕ್ತ ಸಲಹೆ ನೀಡುತ್ತಿದ್ದು, ಶೀಘ್ರದಲ್ಲಿಯೇ ಅರ್ಹರಿಗೆ ನ್ಯಾಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಖಾಸಗಿ ವಂಚಕ ಕಂಪನಿಗಳನ್ನು ನಡೆಸಲು ಸರಕಾರಗಳೇ ಅನುಮತಿ ನೀಡುತ್ತಿವೆ. ಅದನ್ನು ಗ್ರಾಹಕರಿಗೆ ತೋರಿಸಿ, ನಮ್ಮದು ಕಾನೂನು ಬದ್ಧವಾಗಿದೆ ಎಂದು ಹೇಳಿ ಮೋಸ ಮಾಡುತ್ತಿವೆ. ಹೀಗಾಗಿ, ಸರಕಾರವೇ ಇದರ ಹೊಣೆ ಹೊರಬೇಕು ಎಂದು ಹೇಳಿದರು.

ವಂಚಕ ಕಂಪನಿಗಳ ಜಾಲಕ್ಕೆ ಕೋಟ್ಯಾಧಿಪತಿಗಳು ಬಲಿಯಾಗುತ್ತಿದ್ದಾರೆ. ಆದರೆ, ಇದರ ನಡುವೆಯೂ ಅಧಿಕ ಸಂಖ್ಯೆಯಲ್ಲಿ ಬಡವರು, ನಿರ್ಗತಿಕರು ಬಲಿಯಾಗುತ್ತಿದ್ದಾರೆ. ನಮ್ಮ ನಿವೇಶನ ಮಾರಾಟ ಮಾಡಿ, ಸ್ವಂತ ಮನೆ ಬಿಟ್ಟು, ಮಕ್ಕಳ ಮದುವೆಗೆ ಮೀಸಲಿಟ್ಟ ಹಣ, ವಿದ್ಯಾಭ್ಯಾಸಕ್ಕೆ ಇಟ್ಟ ಹಣ ಎಲ್ಲವನ್ನೂ ವಂಚಕ ಕಂಪನಿಗಳ ಜಾಲದಲ್ಲಿ ಸುರಿಯುತ್ತಿದ್ದಾರೆ ಎಂದರು.

ಅವಿದ್ಯಾವಂತರು, ಭಾಷೆ ಬರದವರೇ ಅತಿಹೆಚ್ಚು ವಂಚನೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೇರೆಯವರಿಗೆ ಮೋಸವಾಗದಂತೆ ತಡೆಯಲು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಶೇ.12ಕ್ಕಿಂತ ಅಧಿಕ ಬಡ್ಡಿ ನೀಡುವ ಕಂಪನಿಗಳನ್ನು ಜನರೇ ತಿರಸ್ಕಾರ ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಶರ್ಯಾರ್ ಖಾನ್, ಇಂಡಿಯನ್ ಮೀಡಿಯಾ ಬುಕ್‌ನ ಫರ್ಹಾನ್ ಹೂಡ, ಲಂಚಮುಕ್ತ ನಿರ್ಮಾಣ ವೇದಿಕೆಯ ಜಂಟಿ ಕಾರ್ಯದರ್ಶಿ ನರೇಂದ್ರ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯ ಸಿ.ಎನ್.ದೀಪಕ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News