2019ನೆ ಸಾಲಿನ ಕೃಷಿ ಮೇಳ ಅ.24ಕ್ಕೆ ಚಾಲನೆ: ಆಕರ್ಷಣೀಯ ಕೃಷಿ ಮೇಳಕ್ಕೆ ಜಿಕೆವಿಕೆ ಸಿದ್ಧತೆ

Update: 2019-10-19 17:29 GMT

ಬೆಂಗಳೂರು, ಅ.19: ಪ್ರಸಕ್ತ ಸಾಲಿನ ಕೃಷಿ ಮೇಳ-2019 ಅನ್ನು ಅ.24 ರಿಂದ ನಾಲ್ಕು ದಿನಗಳ ಕಾಲ ರಾಜ್ಯ ಸರಕಾರ ಹಾಗೂ ವಿವಿಧ ಇಲಾಖೆಗಳ ಜಂಟಿ ಆಶ್ರಯದೊಂದಿಗೆ ಹೆಬ್ಬಾಳದ ಬಳಿಯಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ನಡೆಯಲಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ರಾಜ್ಯ ಸರಕಾರ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳು ಸೇರಿದಂತೆ ಹಲವಾರು ಇಲಾಖೆಗಳ ಸಹಯೋಗದಲ್ಲಿ ಮೇಳ ನಡೆಯಲಿದೆ.

ಪ್ರಸಕ್ತ ವರ್ಷದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ನಿಖರ ಕೃಷಿ ಎಂಬ ಘೋಷಣೆಯೊಂದಿಗೆ ಮೇಳ ನಡೆಯಲಿದೆ. ನಿಖರ ಕೃಷಿ ಎಂದರೆ ಮಣ್ಣಿನ ಗುಣಧರ್ಮ, ಪೋಷಕಾಂಶಗಳ ಲಭ್ಯತೆ, ನೀರಿನ ಲಭ್ಯತೆ ಮತ್ತು ಗುಣಮಟ್ಟ, ಬೇಸಾಯ ಮಾಡುವ ಬೆಳೆಗೆ ನೀರಿನ ಅವಶ್ಯಕತೆ, ಪೋಷಕಾಂಶಗಳ ಅವಶ್ಯಕತೆ, ಕಳೆಗಳ ನಿರ್ವಹಣೆ, ಸಾಂಧ್ರತೆಯನ್ನು ಪ್ರತಿ ಹಂತದಲ್ಲೂ ನಿರ್ವಹಣೆ ಮಾಡುವುದಾಗಿದೆ.

* ನಿಖರ ಪ್ರಾತ್ಯಕ್ಷಿಕೆಗಳು:

- ನೀರಿನ ಸದ್ಬಳಕೆಗೆ ಸೂಕ್ಷ್ಮ ನೀರಾವರಿ ಪದ್ಧತಿಗಳಾದ ಹನಿ ಹಾಗೂ ತುಂತುರು ನೀರಾವರಿ.

- ನೀರಿನೊಂದಿಗೆ ಪೋಷಕಾಂಶ ಪೂರೈಸುವ ರಸಾವರಿ.

- ಬೆಳೆ ಹಾಗೂ ಮಣ್ಣಿನ ಆಧಾರದ ನೀರು ಹಾಗೂ ಪೋಷಕಾಂಶ ಪೂರೈಕೆಗೆ ಸಂವೇದನ ಆಧಾರಿತ ಸ್ವಯಂ ನೀರಾವರಿ ಪದ್ಧತಿ.

- ದಕ್ಷ ಉತ್ಪಾದನಾ ಕ್ರಮಗಳಾದ ಸಂರಕ್ಷಿತ ಬೇಸಾಯ, ಜಲಕೃಷಿ

- ಹನಿ ನೀರಾವರಿ

- ಪ್ಲಾಸ್ಟಿಕ್ ಹೊದಿಕೆ

- ಸಂರಕ್ಷಿತ ಬೇಸಾಯ (ಹಸಿರು ಮನೆ) - ಆಕಾರ ನೀಡುವಿಕೆ ಸೇರಿದಂತೆ ಮತ್ತಿತರೆ

ಮೇಳದ ಆಕರ್ಷಣೆಗಳು:

- ನೂತನವಾಗಿ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ - ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು

- ಜಲಾನಯನ ನಿರ್ವಹಣೆ - ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ

- ಸಿರಿಧಾನ್ಯಗಳು ಹಾಗೂ ಅವುಗಳ ಮಹತ್ವ - ಹವಾಮಾನ ವೈಪರೀತ್ಯ ಕೃಷಿ

- ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ - ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಸಾಕಣೆ ಹಾಗೂ ಮೀನು ಸಾಕಣೆ - ಸಾವಯವ ಕೃಷಿ ಪದ್ಧತಿಗಳು

- ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ - ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ - ಮಳೆ ಹಾಗೂ ಮೇಲ್ಛಾವಣಿ ನೀರಿನ ಕೊಯ್ಲು - ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ

- ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ - ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ - ಮಾರುಕಟ್ಟೆ ನೈಪುಣ್ಯತೆ ಮಾಹಿತಿ - ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ

- ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ

ನೂತನ ತಳಿಗಳ ಬಿಡುಗಡೆ

- ಭತ್ತ : ಗಂಗಾವತಿ ಸೋನಾ(ಅವಧಿ: 130-135 ದಿನಗಳು (ಮಧ್ಯಮಾವಧಿ))

- ಅಲಸಂದೆ : ಪಿ.ಜಿ.ಸಿ.ಪಿ-6(ಅವಧಿ: 70-75 ದಿನಗಳು )

- ಉದ್ದು : ಎಲ್‌ಬಿಜಿ 791(ಅವಧಿ : 75-85 ದಿನಗಳು )

- ಸೂರ್ಯಕಾಂತಿ : ಕೆಬಿಎಸ್‌ಹೆಚ್-78(ಅವಧಿ: 85 ದಿನಗಳು)

- ಕಬ್ಬು : ಸಿ.ಒ.ವಿ.ಸಿ -16061(ಅವಧಿ : 10-11 ತಿಂಗಳು)

- ಕಬ್ಬು : ಸಿ.ಒ.ವಿ.ಸಿ -16062(ಅವಧಿ: ಮಧ್ಯಮಾವಧಿ ತಳಿ)

- ಹಲಸು : ಲಾಲ್‌ಬಾಗ್ ಮಧುರ

ಪ್ರಶಸ್ತಿಗಳು

ರಾಜ್ಯ ಮಟ್ಟದ ಪ್ರಶಸ್ತಿಗಳು

ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ, ಸಿ.ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ, ಡಾ.ಎಂ.ಎಚ್.ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿ ನೀಡಲಾಗುತ್ತದೆ.

ಜಿಲ್ಲಾ ಮಟ್ಟದ ಪ್ರಶಸ್ತಿಗಳು: ಜಿಲ್ಲಾ ಮಟ್ಟದಲ್ಲಿ ಕೃಷಿ ವಿವಿ ವ್ಯಾಪ್ತಿಗೆ ಒಳಪಡುವ 10 ಜಿಲ್ಲೆಗಳಲ್ಲಿ 10 ಅತ್ಯುತ್ತಮ ರೈತ ಪ್ರಶಸ್ತಿ ಮತ್ತು 10 ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿ ನೀಡಲಾಗುವುದು.

ತಾಲೂಕು ಮಟ್ಟದ ಪ್ರಶಸ್ತಿ: ಕೃಷಿ ವಿವಿ ವ್ಯಾಪ್ತಿಗೆ ಒಳಪಡುವ 60 ತಾಲ್ಲೂಕುಗಳಲ್ಲಿ ಒಟ್ಟು 60 ಅತ್ಯುತ್ತಮ ಯುವ ರೈತ ಪ್ರಶಸ್ತಿ ಮತ್ತು 60 ಅತ್ಯುತ್ತಮ ಯುವ ರೈತ ಮಹಿಳಾ ಪ್ರಶಸ್ತಿ ನೀಡಲಾಗುತ್ತದೆ.

ಮೇಳಕ್ಕೆ ಉಚಿತ ಪ್ರವೇಶವಿದ್ದು, ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ದಾಖಲಾತಿ ಸ್ಥಳಕ್ಕೆ ತಲುಪಲು ವಿವಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಳದಲ್ಲಿ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆಯೂ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News