ಬೆಂಗಳೂರು: ಚಿತ್ರಕಲಾ ಪರಿಷತ್‌ನಲ್ಲಿ ಮೂರು ದಿನ ಕಲಾಕೃತಿಗಳ ಕಲರವ

Update: 2019-10-19 17:51 GMT

ಬೆಂಗಳೂರು, ಅ.19: ನಾಡು ನುಡಿಯ ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ವಿದ್ಯಾರ್ಥಿಗಳು ತಾವು ಹೊಂದಿರುವ ಅನುಭವಗಳನ್ನು ಕಲಾಕೃತಿಗಳ ರೂಪದಲ್ಲಿ ಮೂಡಿಸಿದ್ದು, ಶಾಂತಿ ಸಂದೇಶ ಹೊತ್ತ ಬುದ್ಧ, ನಾಡಿನ ಸಾಂಸ್ಕೃತಿಕ ಸಿರಿವಂತಿಕೆ ಬಿಂಬಿಸುವ ಸ್ಮಾರಕಗಳು ಸೇರಿದಂತೆ ಗ್ರಾಮೀಣ ಭಾಗದ ಸೊಬಗನ್ನು ಕಲಾಕೃತಿಗಳಲ್ಲಿ ಉಣ ಬಡಿಸಲಾಗಿದೆ.

ಶನಿವಾರ ದಿ ಕಲರ್ ಫ್ಯಾಕ್ಟರಿ ಸ್ಟುಡಿಯೋ ಹಾಗೂ ಆರ್ಟ್ ಸ್ಕೂಲ್ ವತಿಯಿಂದ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿರುವ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ರಚಿಸಿದ ನೂರಾರು ಬಗೆಯ ಕಲಾಕೃತಿಗಳು ಚಿತ್ರ ರಸಿಕರ ಕಣ್ಮನ ಸೆಳೆಯುತ್ತಿವೆ. ಜಾಗತೀಕರಣದ ಪರಿಣಾಮವಾಗಿ ನಗರಗಳು ವಿಸ್ತಾರಗೊಳ್ಳುತ್ತಿವೆ. ಹಳ್ಳಿಗಳು ಸ್ವರೂಪ ಕಳೆದುಕೊಳ್ಳುತ್ತಿವೆ. ನಗರ ಪ್ರದೇಶದಲ್ಲಿ ಬೆಳೆದ ಅದೆಷ್ಟೋ ಮಂದಿ ಹಳ್ಳಿ ಮುಖವನ್ನೇ ನೋಡಿರುವುದಿಲ್ಲ. ಅಂಥವರಿಗಾಗಿಯೇ ವಿದ್ಯಾರ್ಥಿಗಳು ತಮ್ಮ ಕುಂಚದ ಮೂಲಕ ಹಳ್ಳಿಯ ಪರಿಸರ, ಸಂಸ್ಕೃತಿಯಯನ್ನು ಚಿತ್ರಿಸಿ ನೋಡುಗರಲ್ಲಿ ಹಳ್ಳಿಗಳ ಕುರಿತು ಆಸಕ್ತಿ ಮೂಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರ ಪ್ರದರ್ಶನ ಉದ್ಘಾಟಿಸಿದ ಹಿರಿಯ ಕಲಾವಿದ ಕಾಂತರಾಜು ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸೃಜನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳಲ್ಲಿ ಮೂಡುವ ನಾನಾ ವಿಷಯಗಳ ಕುರಿತು ತಮ್ಮ ಮನಸಿನಲ್ಲಿರುವ ಪ್ರಶ್ನೆಗಳು ಹಾಗೂ ಜಗತ್ತಿನ ಸಮಸ್ಯೆಗಳ ಕುರಿತ ಚಿತ್ರಕಲೆಯ ಮೂಲಕ ತಮ್ಮ ಅಭಿಪ್ರಾಯವನ್ನು ಯಶಸ್ವಿಯಾಗಿ ಅಭಿವ್ಯಕ್ತಿಸಬಹುದಾಗಿದೆ ಎಂದರು.

ಇಂದಿನಿಂದ ಆರಂಭ: ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಚಿತ್ರಕಲಾ ಪ್ರದರ್ಶನದಲ್ಲಿ 300ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಕ್ಕಿಡಲಾಗಿದೆ. ಒಂದನೇ ತರಗತಿಯ ಮಕ್ಕಳು ಸೇರಿದಂತೆ ವಯೋವೃದ್ಧರು ಸಹ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ತಾವು ಕಂಡುಂಡ ಅನುಭವಗಳನ್ನು ಚಿತ್ರಕಲೆಯ ಮೂಲಕ ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News