ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ರೈತಪರವಾಗಿರಬೇಕು: ಸಚಿವ ವಿ.ಸೋಮಣ್ಣ

Update: 2019-10-19 18:07 GMT

ಬೆಂಗಳೂರು, ಅ.19: ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು ರೈತರಿಗೆ ಹತ್ತಿರವಾದ ಇಲಾಖೆಗಳಾಗಿದ್ದು, ರೈತ ಕಲ್ಯಾಣಕ್ಕಾಗಿ ಸರಕಾರ ರೂಪಿಸಿದ ಯೋಜನೆಗಳ ಲಾಭ ನಿಜವಾದ ರೈತರಿಗೆ ತಲುಪಬೇಕಾದರೆ ಇಲಾಖೆಗಳು ರೈತಪರ ಹಾಗೂ ಜನಪರವಾಗಿರಬೇಕು ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಶನಿವಾರ ವಿಕಾಸಸೌಧದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಜಿಲ್ಲಾ ಹಾಗೂ ವಿಭಾಗ ಮಟ್ಟದ ಅಧಿಕಾರಿಗಳೊಂದಿಗೆ ಇಲಾಖೆಯ ಕಾರ್ಯ ವೈಖರಿ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಎಲ್ಲ ಹಂತದ ಅಧಿಕಾರಿಗಳು ಇನ್ನೂ ಹೆಚ್ಚು ಬದ್ಧತೆಯಿಂದ ಹಾಗೂ ಭಾವನಾತ್ಮಕವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದರು.

ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಗೆ ಮಂಜೂರಾದ ಅನುದಾನ ಸಮರ್ಪಕವಾಗಿ ಖರ್ಚಾಗುತ್ತಿಲ್ಲವೆಂದು, ಸಹಾಯಧನ ಯೋಜನೆಗಳಡಿಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬ ಹಾಗೂ ಅಸಮರ್ಪಕ ವಿತರಣೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಇದನ್ನು ಸರಿಪಡಿಸುವಂತೆ ಅವರು ಸೂಚಿಸಿದರು.

ಎಂಪ್ಯಾನಲ್‌ಮೆಂಟ್ ಮಾಡಿರುವ ಸರಬರಾಜುದಾರರು ಒದಗಿಸುತ್ತಿರುವ ಉಪಕರಣಗಳ ಗುಣನಿಯಂತ್ರಣದ ಬಗ್ಗೆ ಗಮನ ನೀಡಬೇಕು. ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ರೂಪಿಸುವುದು, ರಫ್ತು ಸಾಮರ್ಥ್ಯ ಹೆಚ್ಚಿಸುವುದು, ತೋಟಗಾರಿಕೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಬಗ್ಗೆ ಆದ್ಯತೆ ನೀಡಲು ಸೂಚಿಸಿದ ಅವರು, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಹಾಗೂ ಪಕ್ಷಪಾತ ಧೋರಣೆಯನ್ನು ಸಹಿಸುವುದಿಲ್ಲವೆಂದು ಅಧಿಕಾರಿಗಳಿಗೆ ತಿಳಿಸಿದರು.

ರೈತರಿಗೆ ಹೆಚ್ಚು ಅನುಕೂಲವಾಗುವ ದೃಷ್ಟಿಯಿಂದ ಇಲಾಖೆಯಲ್ಲಿ ಆಡಳಿತಾತ್ಮಕವಾಗಿ ಹಾಗೂ ತಾಂತ್ರಿಕವಾಗಿ ಬದಲಾವಣೆಗಳಾಗಬೇಕಾದ ಅಗತ್ಯವಿದ್ದು, ಈ ಬಗ್ಗೆಯೂ ಪರಿಶೀಲಿಸಿ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವಂತೆ ಇಲಾಖಾ ಮುಖ್ಯಸ್ಥರಿಗೆ ಇದೇ ಸಂದರ್ಭದಲ್ಲಿ ಸೋಮಣ್ಣ ಸೂಚನೆ ನೀಡಿದರು.

ಸಭೆಯಲ್ಲಿ ರೇಷ್ಮೆ ಆಯುಕ್ತೆ ರೋಹಿಣಿ ಸಿಂಧೂರಿ, ತೋಟಗಾರಿಕೆ ನಿರ್ದೇಶಕ ವೆಂಕಟೇಶ್, ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್, ಕೆಎಸ್‌ಐಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ನೀಲಾ ಮಂಜುನಾಥ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News