ಕಲೆ ಮನುಷ್ಯನ ಭಾವನೆಯನ್ನು ವ್ಯಕ್ತಪಡಿಸುವ ಮಾಧ್ಯಮ: ಕಲಾ ವಿಮರ್ಶಕ ಚಿ.ಸು.ಕೃಷ್ಣಶೆಟ್ಟಿ

Update: 2019-10-19 18:09 GMT

ಬೆಂಗಳೂರು, ಅ. 19: ‘ನೈಜ ಕಲೆಯು ವ್ಯಕ್ತಿಯ ಮನಸ್ಸನ್ನು ಅರಳಿಸುವ ಮೂಲಕ ಸಂತೃಪ್ತಿಗೊಳಿಸುತ್ತದೆ. ಅಲ್ಲದೆ ಕಲೆಯು ಮನುಷ್ಯನ ಭಾವನೆಯನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮವಾಗಿದೆ ಎಂದು ಚಿತ್ರ ಕಲಾವಿದ ಹಾಗೂ ವಿಮರ್ಶಕ ಚಿ.ಸು.ಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಇಲ್ಲಿನ ಬನಶಂಕರಿ ಎರಡನೆ ಹಂತದಲ್ಲಿರುವ ಬ್ರಿಗೇಡ್ ಸಾಫ್ಟ್‌ವೇರ್ ಪಾರ್ಕ್‌ನ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ಕಲಾವಿದ ದಿ.ಎಂ.ಬಿ.ಪಾಟೀಲ್ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಮತ್ತು ಪಾಟೀಲ್ ಅವರ ಸಂಬಂಧ ಸುಮಾರು 40 ವರ್ಷಗಳಷ್ಟು ಹಳೆಯದು. ಪಾಟೀಲರ ಸೃಜನಶೀಲತೆಯಲ್ಲಿ ತಮ್ಮ ಬಾಲ್ಯ ಹಾಗೂ ಗ್ರಾಮೀಣ ಪ್ರದೇಶದ ಸಂಸ್ಕೃತಿಯ ಅಂಶಗಳನ್ನ ಕಾಣಬಹುದು ಎಂದರು.

ಪಾಟೀಲ್ ಅವರು ಬೆಂಗಳೂರು ನಗರದಲ್ಲಿ ವಾಸವಿದ್ದವರಾದರೂ ನಡೆ-ನುಡಿ ಹಾಗು ಕಲಾಕೃತಿಗಳಲ್ಲಿ ಉತ್ತರ ಕರ್ನಾಟಕದ ಶೈಲಿಯನ್ನು ಕಾಣಬಹುದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವರೊಬ್ಬ ಅಜಾತಶತ್ರುವಾಗಿದ್ದರು ಎಂದು ಕೃಷ್ಣ ಶೆಟ್ಟಿ ಸ್ಮರಿಸಿದರು. ಕೆಲವು ದಶಕಗಳ ಹಿಂದೆ ದಕ್ಷಿಣ ಕರ್ನಾಟಕದ ಕಲಾವಿದರು ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್ ಹಾಗೂ ಉತ್ತರ ಕರ್ನಾಟಕ ಕಲಾವಿದರು ಬಾಂಬೆಯ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಪ್ರವೇಶ ಪಡೆಯುತ್ತಿದ್ದರು. ಆದರೆ ಎಂ.ಬಿ.ಪಾಟೀಲರಿಗೆ ಅಂದು ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ಗೆ ಸೇರಲು ಸಾದ್ಯವಾಗಿರಲಿಲ್ಲ. ಅದಕ್ಕಾಗಿ ಅವರು ಬಡವರ ಜೆ.ಜೆ. ಎನ್ನಿಸಿಕೊಂಡಿದ್ದ ನೂತನ ಕಲಾಮಂದಿರವನ್ನು ಸೇರಬೇಕಾಯಿತು. ಆದರೂ ಅವರ ಕಲಾಕೃತಿಗಳಲ್ಲಿ ಜೆ.ಜೆ.ಸ್ಕೂಲ್ ನ ಪ್ರಭಾವ ಕಾಣಬಹುದಾಗಿದೆ ಎಂದರು.

ಪಾಟೀಲ್ ವಾರ್ತಾ ಇಲಾಖೆಯಲ್ಲಿದ್ದಾಗ ಗಣರಾಜ್ಯೋತ್ಸವ ದಿನದಂದು ನಡೆಯುವ ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ 5 ಬಾರಿ ಪ್ರಶಸ್ತಿ ವಿಜೇತರಾಗಿದ್ದರು. ಇಂದು ಪಾಟಿಲ್ ರವರ ಚರಿತ್ರೆ ರಾಜ್ಯದ ಶಾಲೆಗಳಲ್ಲಿ ಪಠ್ಯ-ಪುಸ್ತಕದಲ್ಲಿ ಪಾಠವಾಗಬೇಕು. ಆ ಮೂಲಕ ಇಂತಹ ಕಲಾವಿದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ಮಾಡಿದರು.

ಪ್ರೋತ್ಸಾಹ ಅಗತ್ಯ: ನಂತರ ಮಾತನಾಡಿದ ಅಚ್ಚುತ್ ಗೌಡ, ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿ. ನಮ್ಮ ಗ್ಯಾಲರಿಯು ಹಲವು ಕಲಾ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ತನ್ನ ಅಳಿಲು ಸೇವೆಯನ್ನು ಕಲಾವಲಯಕ್ಕೆ ಸಲ್ಲಿಸುತ್ತಿದೆ.

ಕಲಾವಿದರ ಗೌರವಾರ್ಥ ಆಯೋಜಿಸಿರುವ ಕಲಾ ಪ್ರದರ್ಶನದಲ್ಲಿ ಮಾರಾಟ ಆಗುವ ಕಲಾಕೃತಿಗಳ ಒಟ್ಟು ಮೊತ್ತದಲ್ಲಿ ಶೇ.25ರಷ್ಟು ಹಣವನ್ನು ಶಿಲ್ಪಾ ಫೌಂಡೇಶನ್ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಸಲುವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News