ಪರವಾನಿಗೆಯುಳ್ಳವರಿಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ: ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

Update: 2019-10-19 18:18 GMT

ಬೆಂಗಳೂರು, ಅ. 19: ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿನ ಆಟದ ಮೈದಾನಗಳಲ್ಲಿ ಪೊಲೀಸ್ ಇಲಾಖೆಯಿಂದ ನೀಡಿರುವ ಪರವಾನಿಗೆ ಪಟ್ಟಿಯನ್ನಾಧರಿಸಿ ಪಟಾಕಿ ಮಳಿಗೆ ಮತ್ತು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಸೂಚನೆ ನೀಡಿದ್ದಾರೆ.

ಶನಿವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಲಯ ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ಲೋಕೇಶ್, ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ಹೇಮಂತ್ ನಿಂಬಾಳ್ಕರ್‌ರೊಂದಿಗೆ ಹಬ್ಬದ ಅಂಗವಾಗಿ ಪಟಾಕಿ ಮಳಿಗೆ ಮತ್ತು ಮಾರಾಟ ಕುರಿತು ಸಭೆ ನಡೆಸಲಾಯಿತು.

ನಿಯಮ ಬಾಹಿರವಾಗಿ ಮಳಿಗೆಗಳನ್ನು ನಿರ್ಮಿಸದಂತೆ ಎಚ್ಚರಿಕೆ ವಹಿಸಬೇಕು. ನಿಗದಿತ ಸಂಖ್ಯೆಯಲ್ಲಿ ಮಾತ್ರವೇ ಪಟಾಕಿ ಅಂಗಡಿ ಮಳಿಗೆಗಳಿಗೆ ಅನುಮತಿ ನೀಡಬೇಕು. ಆಟದ ಮೈದಾನಗಳ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಪಟಾಕಿ ಮಳಿಗೆಗಳನ್ನು ಇಡಬಾರದು. ಏನಾದರೂ ಅನಾಹುತ ಸಂಭವಿಸಿದಲ್ಲಿ ಅಗ್ನಿಶಾಮಕ ದಳದ ವಾಹನಗಳು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಷ್ಟು ಪ್ರವೇಶ ದ್ವಾರ ಇರಬೇಕು ಎಂದು ಅವರು ಹೇಳಿದರು.

ಪಟಾಕಿ ಮಳಿಗೆಗಳ ಸುತ್ತ ಬ್ಯಾರಿಕೇಡ್, ಬೀದಿ ದೀಪ ಹಾಗೂ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿರಬೇಕು. ಆದರೆ ಸಮೀಪದ ಸ್ಥಳೀಯ ಆಸ್ಪತ್ರೆಗಳು ಆಂಬುಲೆನ್ಸ್ ಅಗ್ನಿಶಾಮಕ ದಳ, ಪಾಲಿಕೆ ನಿಯಂತ್ರಣ ಕೊಠಡಿ ಸೇರಿದಂತೆ ಎಲ್ಲ ದೂರವಾಣಿ ಸಂಖ್ಯೆಗಳು ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.

ಮೈದಾನದಲ್ಲಿ ಎಲ್ಲೂ ಪ್ಲಾಸ್ಟಿಕ್ ಬಳಕೆ ಇರಕೂಡದು. ಮೈದಾನದಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ಸೂಕ್ತ ಜಾಗ ಗುರುತಿಸಿ ಅಲ್ಲಿಯೇ ಹಾಕುವಲ್ಲಿ ಕ್ರಮ ಕೈಗೊಳ್ಳಬೇಕು. ಮೈದಾನಗಳಲ್ಲಿ ಪಟಾಕಿ ಮಾರಾಟ ಸಮಯದಲ್ಲಿ ಸಂಚಾರದಟ್ಟಣೆ ಆಗದಂತೆ ಮುನ್ನಚ್ಚೆರಿಕೆ ವಹಿಸಬೇಕು. ಪಟಾಕಿ ಸಿಡಿಸಲು ಸಮಯವನ್ನು ನಿಗದಿ ಪಡಿಸಬೇಕು ಎಂದು ಅವರು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಅವರು ಮಾತನಾಡಿ, ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಹಾಗಾಗಿ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಿಗಳನ್ನು ಸಂಗ್ರಸಿಟ್ಟುಕೊಳ್ಳಬೇಕು ಹಾಗೂ ಪತ್ರಿಕೆ, ರೇಡಿಯೋಗಳ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಾಹೀರಾತು ನೀಡಬೇಕು ಎಂದು ಹೇಳಿದರು.

ಈ ಸಂಬಂಧ ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಪಾಲಿಕೆ ವ್ಯಾಪ್ತಿಗೆ ಒಳಪಡುವ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಔಷಧ ಸಂಗ್ರಹಿಸಿ ಇಟ್ಟುಕೊಳ್ಳಲು ದಿನದ 24 ಗಂಟೆ ಆಸ್ಪತ್ರೆ ತೆರೆದಿರಲು ಸೂಚನೆ ನೀಡಲಾಗುವುದು ಎಂದು ಹೇಳಿದರು. ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧಿಕಾರಿ ಸಯ್ಯದ್ ಖಾಜ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News