ಚಿನ್ನ ಗೆದ್ದ ದ್ರೋಣ...

Update: 2019-10-20 10:55 GMT

ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ನಮ್ಮ ರಾಜ್ಯ ಪೊಲೀಸ್ ಇಲಾಖೆ ದೇಶ ದಲ್ಲಿಯೇ ಮೂಂಚೂಣಿಯಲ್ಲಿದೆ. ಸಾರ್ವಜನಿಕರೊಂದಿಗೆ ಜನಸ್ನೇಹಿ ಯಾಗಿ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಗ್ಗಿಸಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತ ಸಂವಿಧಾನದ ಧ್ಯೇಯೊದ್ದೇಶಗಳನ್ನು ಎತ್ತಿ ಹಿಡಿದು ಪೊಲೀಸ್ ಎಂದರೆ ಭಯ ಅಲ್ಲ ಭರವಸೆ ಎಂದು ಜನರಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸಿ, ಜನರ ಮನದಲ್ಲಿ ವಿಶಿಷ್ಟ ಮತ್ತು ಗೌರವದ ಸ್ಥಾನ ಪಡೆದಿದೆ.ಅದರಂತೆಯೇ ಸಶಸ್ತ್ರ ಮೀಸಲು (ಡಿಎಆರ್) ಅಥವಾ ಸಿಎಆರ್ ಪಡೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಪೊಲೀಸ್ ಶ್ವಾನದಳ ಇಲಾಖೆಯಲ್ಲಿ ವಿಶೇಷ ಮತ್ತು ವಿಶಿಷ್ಟವಾದ ಸ್ಥಾನಮಾನ ಪಡೆದಿದೆ.

1968ರಲ್ಲಿ ಸ್ಥಾಪಿತಗೊಂಡ ಕರ್ನಾಟಕ ರಾಜ್ಯ ಪೊಲೀಸ್ ಶ್ವಾನದಳ ಬೆಂಗಳೂರಿನ ಸಿಎಆರ್ (ದಕ್ಷಿಣ) ಆಡುಗೋಡಿಯಲ್ಲಿ ಇದು ತನ್ನ ಕೇಂದ್ರ ಸ್ಥಾನ ಹೊಂದಿದೆ. ರಾಜ್ಯದ ಪ್ರತಿ ಜಿಲ್ಲೆಯ ಡಿಎಆರ್ ಅಥವಾ ಸಿಎಆರ್ ಪೊಲೀಸ್ ಸಿಬ್ಬಂದಿ ಇಲ್ಲಿಯೇ ಬಂದು ಒಂಬತ್ತು ತಿಂಗಳುಗಳ ಕಾಲ ಶ್ವಾನಗಳ ತರಬೇತಿ ಪಡೆದುಕೊಂಡು ಹೋಗುತ್ತಾರೆ. ಇಲ್ಲಿ ಸ್ಫೋಟಕ ವಸ್ತುಗಳ ಕುರಿತು ಹಾಗೂ ಕೊಲೆ ಸುಲಿಗೆ, ದರೋಡೆ, ಕಳ್ಳತನ ಮತ್ತು ಮಾದಕ ಸೇವನೆಯ ಗಾಂಜಾ, ಅಫೀಮಗಳಂತಹ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶಿಷ್ಟ ಮತ್ತು ವಿನೂತನವಾದ ತರಬೇತಿಯನ್ನು ಕೊಡಲಾಗುತ್ತದೆ.

 ಕೇಂದ್ರ ಸ್ಥಾನ ಬೆಂಗಳೂರಿನಲ್ಲಿ ಲ್ಯಾಬ್ರಿಡರ್, ಜರ್ಮನ್ ಶೆಪರ್ಡ್, ಡಾಬರ್ ಮನ್ ತಳಿಯ ಒಟ್ಟು 58 ಶ್ವಾನಗಳು ಇದ್ದು ದೇಶ ವಿದೇಶಗಳಿಂದ ಬರುವ ಗಣ್ಯ ಅತಿ ಗಣ್ಯ ವ್ಯಕ್ತಿಗಳಿಗೆ ವಿಶೇಷ ಭದ್ರತೆ ಮತ್ತು ಸಿಎಂ ನಿವಾಸ, ರಾಜಭವನ, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ರೈಲು ನಿಲ್ದಾಣಗಳು, ಮೆಟ್ರೋ, ಬಸ್ ನಿಲ್ದಾಣಗಳು ಹಾಗೂ ರಾಜಧಾನಿಯ ಅತಿ ಸೂಕ್ಷ್ಮಸ್ಥಳಗಳು, ಪ್ರವಾಸಿ ತಾಣಗಳಲ್ಲಿ, ಮತ್ತು ರಾಜ್ಯಪಾಲರು, ಮುಖ್ಯಮಂತ್ರಿಗಳು ಭಾಗವಹಿಸುವ ಸ್ಥಳೀಯ ಕಾರ್ಯಕ್ರಮಗಳಲ್ಲಿ ವಿಶೇಷ ತಪಾಸಣಾ ಕಾರ್ಯವನ್ನು ರಾಜ್ಯ ಪೊಲೀಸ್ ಶ್ವಾನದಳ ಯಶಸ್ವಿಯಾಗಿ ನಿರ್ವಹಿಸುತ್ತಿದೆ.ಅಲ್ಲದೇ ಸಾಕಷ್ಟು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ರಾಜ್ಯ ಪೊಲೀಸ್ ಇಲಾಖೆಯ ಘನತೆ ಗೌರವ ಹೆಚ್ಚಿಸಿದೆ. ಗಣರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ ಸೇರಿದಂತೆ ವಿಶೇಷ ಕವಾಯಿತುಗಳಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರ ಮತ್ತು ಇಲಾಖೆಯ ಮೇಲಧಿಕಾರಿಗಳ ಪ್ರೀತಿ ಮತ್ತು ವಿಶ್ವಾಸಕ್ಕೆ ಕಾರಣವಾಗಿರುವ ರಾಜ್ಯ ಪೊಲೀಸ್ ಶ್ವಾನದಳ ಪ್ರತಿ ವರ್ಷ ವಿವಿಧ ರಾಜ್ಯಗಳಲ್ಲಿ ನಡೆಯುವ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ಇಲ್ಲಿಯವರೆಗೆ ಒಟ್ಟು 22 ಚಿನ್ನದ ಪದಕ, 12 ಬೆಳ್ಳಿಯ ಪದಕ, 8 ಕಂಚಿನ ಪದಕ, 3 ಪಾರಿತೋಷಕ ಪ್ರಶಸ್ತಿಗಳನ್ನು ಪಡೆದುಕೊಂಡು ರಾಷ್ಟ್ರದ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಗೈದಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಕಳೆದ ಜುಲೈ ತಿಂಗಳ 16 ನೇ ತಾರೀಖಿನಿಂದ 20 ನೇ ತಾರೀಖು ರವರಿಗೆ ನಾಲ್ಕು ದಿನಗಳ ಕಾಲ ನಡೆದ 62ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ದೇಶದ 29 ರಾಜ್ಯಗಳ ಪೊಲೀಸ್ ಶ್ವಾನಗಳು ಮತ್ತು ಅರೆ ಸೇನಾ ಪಡೆಗಳಾದ BSF, CRPF, CISF, SSB, RPF, ITBT ಮತ್ತು Assam Rifels ಶ್ವಾನಗಳ ತಂಡಗಳು ಭಾಗವಹಿಸಿದರೆ ನಮ್ಮ ಕರ್ನಾಟಕ ರಾಜ್ಯ ಪೊಲೀಸ್ ಶ್ವಾನದಳದಿಂದ ದ್ರೋಣ ಎಂಬ ಅಪರಾಧ ಪತ್ತೆಯ ಡಾಬರ್ ಮನ್ ತಳಿಯ ಶ್ವಾನ ಮತ್ತು ಇದರ (ಹ್ಯಾಂಡ್ಲರ್) ಪರಿಚಾರಕ ಪೊಲೀಸ್ ಪೇದೆ ರವಿ ದೇಶಭಂಡಾರಿ ಪ್ರತಿನಿಧಿಸಿದ್ದರು. ಅಣಕು ಅಪರಾಧ ಪತ್ತೆ ಕಾರ್ಯಚರಣೆಯ Obidiance Test, Refusal Food Test, Seak Find Test, Hurdels Jumping Test, Scent (ವಾಸನೆ ಗ್ರಹಿಕೆ) Test, Identification Test, Tracking Test ಒಟ್ಟು ಏಳು ವಿಭಾಗಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡು ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ರವರ ಕಡೆಯಿಂದ ಚಿನ್ನದ ಪದಕ, ಗೌರವ ಸನ್ಮಾನ ಮತ್ತು ಪ್ರಶಂಸನಾ ಪತ್ರ ತನ್ನದಾಗಿಸಿಕೊಂಡಿದೆ.

ರಾಜ್ಯ ಪೊಲೀಸ್ ಶ್ವಾನದಳದ ಗಣನೀಯ ಸಾಧನೆಯನ್ನು ಕಂಡು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು IPS ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಶ್ರೀ ಭಾಸ್ಕರ ರಾವ್ IPS, ಮತ್ತು ಶ್ವಾನದಳದ ಮುಖ್ಯಸ್ಥರೆನಿಸಿರುವ ಸಿಎಆರ್ ದಕ್ಷಿಣ ವಿಭಾಗದ ಡಿಸಿಪಿ ಯೋಗೇಶ, ಶ್ವಾನದಳದ ಇನ್‌ಸ್ಪ್ಪೆಕ್ಟರ್ ನಿಂಗಾರೆಡ್ಡಿ ಪಾಟೀಲ್ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಶ್ಲಾಘನೀಯ ಮತ್ತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಗೌರವ ಸನ್ಮಾನ, ನಗದು ಬಹುಮಾನ ನೀಡಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ರಾಜ್ಯ ಪೊಲೀಸ್ ಶ್ವಾನದಳವೂ ಪೊಲೀಸ್ ಇಲಾಖೆಗೆ ಮತ್ತು ಸಮಾಜದಲ್ಲಿ ನಡೆಯುವ ಅಪರಾಧ ತಡೆಗಟ್ಟಲು ಒಂದು ಪ್ರಮುಖ ಸಾಧನವಾಗಿದೆ.

Writer - ಮೌಲಾಲಿ ಕೆ ಆಲಗೂರ ಬೋರಗಿ

contributor

Editor - ಮೌಲಾಲಿ ಕೆ ಆಲಗೂರ ಬೋರಗಿ

contributor

Similar News