ಚಿತ್ರಸಿರಿಯಲ್ಲಿ ಚಿತ್ತಾರ ಮೂಡಿಸಿದ ವಿಶಿಷ್ಟ ಕಲಾವಿದ ಚಂದ್ರಶೇಖರ್ ಸಿರಿವಂತೆ

Update: 2019-10-20 11:25 GMT

‘ಚಿತ್ರಸಿರಿ’ಯಲ್ಲಿ ಮೂಡುವ ಕಲೆಗಳಿಗೆ ಕಾಯಾ-ವಾಚಾ ಶ್ರಮಿಸುತ್ತ ಕಲಿಕೆಗೆ ಬರುವ ಶಿಬಿರಾರ್ಥಿಗಳಿಗೆ ಕಲೆಯ ತರಬೇತಿ ಮಾತ್ರವಲ್ಲದೆ ಬದುಕನ್ನು ರೂಪಿಸಿಕೊಳ್ಳುವ ಮಾನಸಿಕ ಸ್ಥೈರ್ಯವನ್ನು ನೀಡುತ್ತ ನಶಿಸಿ ಹೋಗುತ್ತಿರುವ ಜನಪದ ಕಲೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ದಂಪತಿಗಳಿಬ್ಬರು ಸಫಲರಾಗಿದ್ದಾರೆ.

ಹಲವು ಪ್ರಕಾರದ ಕಲೆಗಳಲ್ಲಿ ಜನಪದ ಕಲೆಯೂ ಒಂದು. ತಾಂತ್ರಿಕತೆಯ ವೇಗದ ಬದುಕಿಗೆ ಒಗ್ಗಿಕೊಂಡಿರುವ ಇಂದಿನ ದಿನಗಳಲ್ಲಿ ಜನಪದ ಕಲೆಗಳು ನಶಿಸುತ್ತಿವೆ. ಆ್ಯನಿಮೇಷನ್, ತ್ರಿಡಿ ಮುಂತಾದ ಗಣಕೀಕೃತ ಅಲಂಕಾರಗಳಿಗೆ ನೀಡುವ ಪ್ರಾತಿನಿಧ್ಯದ ಕಾಲಘಟ್ಟದಲ್ಲಿ ಜನಪದ ಕಲೆಗಳ ಮಹತ್ವ, ಅಳಿವಿನಂಚಿಗೆ ಸಾಗುತ್ತಿರುವ ಹೊತ್ತಿನಲ್ಲಿ ಕಲೆಗಳಿಗೆ ವ್ಯಕ್ತ ರೂಪವನ್ನು ನೀಡಿ, ಚೆಲುವಿನ ಚಿತ್ತಾರವನ್ನಾಗಿ ರೂಪಿಸುತ್ತಿರುವ ಹೆಗ್ಗಳಿಕೆ ಶ್ರೀಯುತ ಚಂದ್ರಶೇಖರ್‌ರವರಿಗೆ ಸಲ್ಲುತ್ತದೆ.

ಸಾಗರದಿಂದ ಸುಮಾರು ಐದು ಕಿ.ಮೀ. ದೂರದಲ್ಲಿ ಜೋಗಕ್ಕೆ ಸಾಗುವ ಮಾರ್ಗದಲ್ಲಿ ಸಿರಿವಂತೆ ಎಂಬ ಪುಟ್ಟ ಗ್ರಾಮದ ಎನ್.ಎಚ್. 206 ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚಿತ್ರಸಿರಿ ಚಿತ್ತಾರದ ಮನೆಯಿದೆ. ಹೆಸರಿಗೆ ತಕ್ಕಂತೆ ಚಿತ್ರಸಿರಿ ಪ್ರವೇಶಿಸಿದ ಚಿತ್ರರಸಿಕ ಹಲವು ಚಿತ್ತಾರ ಸವಿ ಸವಿಯದೇ ಹೊರಬರಲಾರನು.

ಮಲೆನಾಡಿನ ಅತ್ಯಂತ ಪ್ರಾಚೀನ ಹಲವು ಕಲೆಗಳಲ್ಲೊಂದಾದ ಹಸೆ ಚಿತ್ತಾರವೂ ಒಂದು. ಹಸೆ ಚಿತ್ತಾರವೆಂದರೆ ಗೋಡೆಗಳ ಮೇಲೆ ಚಿತ್ರವನ್ನು ಬಿಡಿಸುವುದು. ಅಲ್ಲದೇ, ಭೂಹುಣ್ಣಿಮೆಯ ದಿನದಂದು ಪೂಜೆಗೆ ಇಡಲ್ಪಡುವ ಬುಟ್ಟಿಗೆ ಸೆಗಣಿ, ಕೆಮ್ಮಣ್ಣಿನಿಂದ ಬಳಿದು ಅದರ ಮೇಲೆ ಚಿತ್ತಾರಗಳನ್ನು ಬಿಡಿಸುವ ಪರಿ. ಇದು ಕೇವಲ ಚಿತ್ರವಲ್ಲ. ಈ ಪರಿಯ ಚಿತ್ತಾರಗಳಲ್ಲಿ ಮನುಷ್ಯನ ಭಾವನೆ ಅಡಗಿದೆಯಲ್ಲದೇ, ಪ್ರಕೃತಿಯಲ್ಲಿ ಪಲ್ಲಟವಾಗುವ ಪ್ರಸಂಗಗಳು ಚಿತ್ತಾರದಲ್ಲಿ ಮೂಡಿಸುುದು ಈ ಕಲೆಯ ವೈಶಿಷ್ಟತೆಯಾಗಿದೆ.

ಸಾಂಪ್ರದಾಯಿಕ ವಿಶೇಷ ಕಲೆಯಲ್ಲಿ ಸಾಧನೆ ಮಾಡಿದ ಚಂದ್ರಶೇಖರ್‌ರವರು ಹಸೆ ಚಿತ್ತಾರದ ಸಾಂಪ್ರಾದಾಯಿಕ ಮೂಲಾಂಶಗಳನ್ನು ಉಳಿಸಿಕೊಂಡು, ಆಧುನಿಕ ಸಂದರ್ಭದಲ್ಲಿ ಉಳಿಸಿ, ಬೆಳೆಸುವ ಅವರ ಪ್ರಯತ್ನ ಶ್ಲಾಘನೀಯವಾದದ್ದು.

ಗೋಡೆಯ ಮೇಲೆ ಬರೆಯುವಂತಹ ಚಿತ್ತಾರಗಳನ್ನು ಪ್ರಾಕೃತಿಕ ಬಣ್ಣ ಹಾಗೂ ಆಧುನಿಕ ಬಣ್ಣಗಳನ್ನು ಉಪಯೋಗಿಸಿಕೊಂಡು ಕಾಗದ, ಬಟ್ಟೆ, ಗಾಜು ಮತ್ತು ಬಿದಿರಿನ ತಡಿಕೆಗಳ ಮೇಲೆ ಬಿಡಿಸಿ ಚಿತ್ತಾರಕ್ಕೆ ಹೊಸ ರಂಗನ್ನು ತಂದವರು.

ಅಲ್ಲದೇ ಭತ್ತದ ತೆನೆಗಳಿಂದ ಭತ್ತದ ಕಲಾಕೃತಿಗಳನ್ನು ರಚಿಸುವ ಹೊಸ ಆವಿಷ್ಕಾರ ಅವರ ಕಲೆಯಾಸಕ್ತಿಗೆ ಹಿಡಿದ ಮತ್ತೊಂದು ಕನ್ನಡಿಯಾಗಿದೆ. ನಶಿಸಿ ಹೋಗುತ್ತಿದ್ದ ಮಲೆನಾಡ ಗ್ರಾಮೀಣ ಕರಕುಶಲ ಕಲೆಯ ಭತ್ತದ ತೋರಣಗಳು, ಗೂಡುಗಳು, ಅರಳಿ, ಹಾಗೂ ವಿವಿಧ ಮಾದರಿಯ ಎಲೆಗಳಲ್ಲಿ ಕಲಾಕೃತಿಗಳನ್ನು ರಚಿಸುವುದು ಇವರ ಕಲಾ ನೈಪುಣ್ಯತೆಗೆ ಸಾಕ್ಷಿಯೆನಿಸಿದೆ.

ಸಾಮಾನ್ಯವಾಗಿ 3ರಿಂದ 4 ಅಡಿ ಉದ್ದ ಮಾತ್ರ ತಯಾರಿಸುತ್ತಿದ್ದ ಭತ್ತದ ಕದಿರಿನ ತೋರಣವನ್ನು 250 ಅಡಿಯವರೆಗೆ ವಿಸ್ತರಿಸಿ ತೋರಣ ನಿರ್ಮಾಣ ಮಾಡಿದರಲ್ಲದೇ, ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಮನೋಮೋಹಕವಾಗಿ ಅಲಂಕರಿಸುವ ಮತ್ತು ಬೆಂಗಳೂರು, ಧರ್ಮಸ್ಥಳ, ಶಿರಸಿ, ಚನ್ನಪಟ್ಟಣ, ಮುಂತಾದ ಕಡೆ ನಡೆದ ಸಾರ್ವಜನಿಕ ಸಮಾರಂಭಗಳ ವೇದಿಕೆ ಅಲಂಕಾರಕ್ಕೂ ಬಳಕೆ ಮಾಡಿದ ಹೆಮ್ಮೆ ಇವರದ್ದು.

ಈ ಕಲೆಯ ಉಳಿವಿಗಾಗಿ ಈ ವರೆಗೂ ಸುಮಾರು ನೂರಕ್ಕೂ ಹೆಚ್ಚಿನ ಕಲಾವಿದರುಗಳಿಗೆ ತರಬೇತಿ ಮತ್ತು ಅಧ್ಯಯನ ಶಿಬಿರಗಳನ್ನು ನಡೆಸಿದ್ದಾರಲ್ಲದೆ, ಸಿರಿವಂತೆ, ಸಾಗರ, ಶಿರಸಿ, ಶಿವಮೊಗ್ಗ, ಬೆಂಗಳೂರು, ಮೈಸೂರು, ಯಲ್ಲಾಪುರ, ಜೋಗಜಲಪಾತ, ಧರ್ಮಸ್ಥಳ, ಚಿತ್ರದುರ್ಗ ಮುಂತಾದ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ ಹಾೂ ಪ್ರದರ್ಶನಗಳನ್ನು ನೀಡಿದ್ದಾರೆ.

ಕೊಲ್ಕತ್ತಾ, ಮಧುರೈ, ಹೈದರಾಬಾದ್, ಕೊಚ್ಚಿನ್‌ಗಳಲ್ಲಿ ಅಂತರ್‌ರಾಜ್ಯ ಪ್ರದರ್ಶನ ನೀಡಿದ್ದಾರಲ್ಲದೆ, 2008ರ ಆಗಸ್ಟ್ 11ರಿಂದ 15ರ ವರೆಗೆ ಜಪಾನ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕದ ಏಕೈಕ ಗೋಡೆ ಚಿತ್ತಾರ ಕಲೆ ಹಸೆ ಚಿತ್ತಾರವನ್ನು ಭಾರತದ ಪರವಾಗಿ ಮನೋಜ್ಞ ಪ್ರದರ್ಶನ ನೀಡಿದ್ದಾರಲ್ಲದೆ, 2009ರಲ್ಲಿ ದುಬೈನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಸದರಿ ಚಿತ್ತಾರ ಕಲೆಯನ್ನು ಹಾಗೂ ಪಾರಂಪರಿಕ ಭತ್ತದ ಕಲಾಕೃತಿಗಳನ್ನು ಪ್ರದರ್ಶನ ವಾಡುವಲ್ಲಿ ಯಶಸ್ವಿ ಎನಿಸಿಕೊಂಡಿದ್ದಾರೆ. 2007ರ ರಲ್ಲಿ ಸತತ 8 ಜನರ ತಂಡದೊಂದಿಗೆ ದಿನವೊಂದಕ್ಕೆ ಹದಿನಾಲ್ಕು ತಾಸಿನಂತೆ ಕೆಲಸ ಮಾಡಿ, ಸಾವಿರದ ಒಂದುನೂರಾ ಹನ್ನೊಂದು ಅಡಿ ಉದ್ದನೆಯ (1111) ಭತ್ತದ ತೆನೆಯ ತೋರಣ ನಿರ್ಮಿಸಿ, ನಾಡಿನ ಮೆಚ್ಚುಗೆಗೆ ಪಾತ್ರರಾದವರು. ಅಲ್ಲದೇ, ಸಾಹಿತ್ಯದಲ್ಲಿ ಅತೀವ ಆಸಕ್ತಿ ಹೊಂದಿರುವ ಬತ್ತದ ಸಿರಿ ಎಂಬ ಕವನ ಸಂಕಲನ. ಗ್ರಾಮೀಣಾಭಿವೃದ್ಧಿಯ ಕುರಿತು ಅನೇಕ ಲೇಖನಗಳನ್ನು ಬರೆದ ಹೆಮ್ಮೆ ಇವರದ್ದಾಗಿದೆ.

ಮತ್ತು ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ. ಇವರ ಕಲೆಗೆ, ಸಾಹಿತ್ಯಾಸಕ್ತಿಗೆ ನೀರೆರೆದು ಪೋಷಿಸಿ, ಪ್ರೋತ್ಸಾಹ ನೀಡಿದವರು ಇವರ ಪತ್ನಿ ಗೌರಿಚಂದ್ರಶೇಖರ್. ‘ಚಿತ್ರಸಿರಿ’ಯಲ್ಲಿ ಮೂಡುವ ಕಲೆಗಳಿಗೆ ದಂಪತಿಗಳಿಬ್ಬರು ಕಾಯಾ-ವಾಚಾ ಶ್ರಮಿಸುತ್ತ ಕಲಿಕೆಗೆ ಬರುವ ಶಿಬಿರಾರ್ಥಿಗಳಿಗೆ ಕಲೆಯ ತರಬೇತಿ ಮಾತ್ರವಲ್ಲದೆ ಬದುಕನ್ನು ರೂಪಿಸಿಕೊಳ್ಳುವ ಮಾನಸಿಕ ಸ್ಥೈರ್ಯವನ್ನು ನೀಡುತ್ತ ನಶಿಸಿ ಹೋಗುತ್ತಿರುವ ಜನಪದ ಕಲೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ಸಫಲರಾಗಿದ್ದಾರೆ.

Writer - ಪಂಚಮಿ ಸಾಗರ

contributor

Editor - ಪಂಚಮಿ ಸಾಗರ

contributor

Similar News