ತುಳುಕೂಟಕ್ಕಾಗಿ ಪ್ರತ್ಯೇಕ ಭೂಮಿ: ಕೇಂದ್ರ ಸಚಿವ ಸಂದನಂದ ಗೌಡ

Update: 2019-10-20 17:49 GMT

ಬೆಂಗಳೂರು, ಅ.20: ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೇರೆಪಿಸುವ ನಿಟ್ಟಿನಲ್ಲಿ ತುಳು ಕೂಟ ಸಂಘಕ್ಕೆ ಪ್ರತ್ಯೇಕ ಭೂಮಿ ನೀಡುವ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ರವಿವಾರ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ತುಳುಕೂಟ ಬೆಂಗಳೂರು ಹಮ್ಮಿಕೊಂಡಿದ್ದ, ತುಳುನಾಡಿನ ಸಾಂಪ್ರದಾಯಿಕ ಹೊಸ ಅಕ್ಕಿ ಊಟ(ಪುದ್ದಾರ್ ವುಣಸ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಮೇಲೆ ಹಲವು ಶತಮಾನಗಳ ಹಿಂದೆ ಹತ್ತಾರು ವಿದೇಶಿಯರು ದಾಳಿ ನಡೆಸಿದರೂ, ಸಹ ಇಂದಿಗೂ ವಿಶ್ವದಲ್ಲಿ ನಮ್ಮ ದೇಶ ಮೂಲತನವನ್ನು ಉಳಿಸಿಕೊಂಡಿದೆ. ಇದಕ್ಕೆ ನಮ್ಮಲ್ಲಿರುವ ನೂರಾರು ಸುಸಂಸ್ಕೃತಿಗಳು ಹಾಗೂ ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ಹೊಸ ಬೆಳೆಯ ಸಂಭ್ರಮದಿಂದ ಊಟ ಮಾಡುವ ಸಂಪ್ರದಾಯ ತುಳುನಾಡಿನಲ್ಲಿದೆ. ಸಾಮರಸ್ಯದ ಕೊರತೆಯಿರುವ ಈ ಕಾಲದಲ್ಲಿ, ಸಾಮರಸ್ಯವನ್ನು ಹೆಚ್ಚಿಸುವಂತ ಆಚರಣೆ ಪುದ್ದಾರ್ ವುಣಸ್. ಊರಿನಲ್ಲಿ ಬೇರೆ ಬೇರೆ ಜಾತಿಯವರಾಗಿದ್ದರೂ ಬೆಂಗಳೂರಿನಲ್ಲಿ ತುಳುವರು, ಕರಾವಳಿಯವರು ಎಂದು ಒಂದೇ ಭಾವನೆಯಿಂದ ನಮ್ಮ ಸಂಸ್ಕೃತಿಯನ್ನು ಯುವ ಜನತೆಗೆ ಹಾಗೂ ಬೆಂಗಳೂರಿಗರಿಗೂ ಪರಿಚಯಿಸುತ್ತಿರುವುದು ಸಂತಸದ ವಿಚಾರ ಎಂದರು.

ತುಳು ಧಾರ್ಮಿಕ ಚಿಂತಕ ಪಿ.ಕೆ.ಸದಾನಂದ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳ ಮೂಲಕ ಸಂಪ್ರದಾಯಗಳನ್ನು ಯುವ ಜನತೆಗೆ ಪರಿಚಯಿಸಿದಾಗ ಮಾತ್ರ ನಮ್ಮ ಪೂರ್ವಿಕರ ಕಷ್ಟಗಳು ಅವರಿಗೆ ಅರಿವಾಗಲು ಸಾಧ್ಯ ಎಂದು ನುಡಿದರು.

ಈ ಸಂದರ್ಭದಲ್ಲಿ ತುಳುಕೂಟ ಅಧ್ಯಕ್ಷ ಬಿ.ದಿನೇಶ್ ಹೆಗ್ಡೆ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News