2 ವರ್ಷದ ಬಳಿಕ ಪ್ರಥಮ ಬಾರಿಗೆ ಫೈನಲ್ ಹಂತಕ್ಕೇರಿದ ಆ್ಯಂಡಿ ಮರ್ರೆ

Update: 2019-10-20 17:57 GMT

ಆ್ಯಂಟ್ವೆಪ್, ಅ.20: ಬ್ರಿಟನ್‌ನ ಆ್ಯಂಡಿ ಮರ್ರೆ ಯುರೋಪಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸುವುದರೊಂದಿಗೆ 2017ರ ಮಾರ್ಚ್ ಬಳಿಕ ಪ್ರಪ್ರಥಮ ಬಾರಿಗೆ ಎಟಿಪಿ ಟೂರ್ ಟೂರ್ನಿಯ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದ್ದಾರೆ. ಯುರೋಪಿಯನ್ ಟೂರ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಯುಗೊ ಹಂಬರ್ಟ್‌ರನ್ನು 2 ಗಂಟೆ 22 ನಿಮಿಷ ನಡೆದ ಹೋರಾಟದಲ್ಲಿ 3-6, 7-5, 6-2ರಲ್ಲಿ ಸೋಲಿಸಿದ ಮರ್ರೆ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ಅವರು ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸ್ಟಾನ್ ವಾವ್ರಿಂಕಾರನ್ನು ಎದುರಿಸಲಿದ್ದಾರೆ. ವಾವ್ರಿಂಕಾ ಮತ್ತೊಂದು ಸೆಮಿಫೈನಲ್‌ನಲ್ಲಿ ಇಟಲಿಯ 18 ವರ್ಷದ ಆಟಗಾರ ಜಾನಿಕ್ ಸಿನರ್ ಎದುರು 6-3,6-2 ನೇರ ಸೆಟ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಜನವರಿಯಲ್ಲಿ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮರ್ರೆ, ಒಂದು ಹಂತದಲ್ಲಿ ನಿವೃತ್ತಿ ಘೋಷಿಸುವ ನಿರ್ಧಾರಕ್ಕೂ ಬಂದಿದ್ದರು. ‘‘ಮರಳಿ ಆಟದ ಮೈದಾನಕ್ಕೆ ಇಳಿದ ಬಳಿಕ ಸುದೀರ್ಘಾವಧಿಯ ನಂತರ ಫೈನಲ್ ಹಂತ ತಲುಪಿರುವುದು ನಿಜಕ್ಕೂ ಖುಷಿ ತಂದಿದೆ. ಈ ಸಾಧನೆ ಒಂದು ಅಚ್ಚರಿಯಂತೆ ಕಾಣಿಸುತ್ತದೆ ಎಂದು ಮರ್ರೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News