ದೆಹಲಿ ವಿವಿ ಪ್ರಾಧ್ಯಾಪಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆ

Update: 2019-10-21 03:48 GMT

ಹೊಸದಿಲ್ಲಿ, ಅ.21: ದೆಹಲಿ ವಿವಿಯ ಸಂತ ಸ್ಟೀಫನ್ ಕಾಲೇಜಿನ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕನ ಮೃತದೇಹ ಸರಾಯ್ ರೊಹಿಲ್ಲಾ ರೈಲು ನಿಲ್ದಾಣದ ಬಳಿ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಇದಾದ ಅರ್ಧ ಗಂಟೆಯಲ್ಲಿ ಈತನ ತಾಯಿಯ ಮೃತದೇಹ ವಾಯವ್ಯ ದೆಹಲಿಯ ಪಿತಾಂಪುರದಲ್ಲಿರುವ ಮನೆಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ.

ಮೃತಪಟ್ಟ ತಾಯಿ ಹಾಗೂ ಮಗ ಮೂಲತಃ ಕೇರಳದವರು. ಇಬ್ಬರೂ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಸಂಬಂಧ ಪ್ರಕರಣ ಎದುರಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆಯ ಪತಿಯ ಮಾಜಿ ಪತ್ನಿಯ ಕುಟುಂಬದವರು ಈ ಬಗ್ಗೆ ದೂರು ನೀಡಿದ್ದರು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ತಾಯಿ- ಮಗ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆದರೆ ಈ ಪ್ರಕರಣದಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಆದರೆ ತಾಯಿ ಮಗನ ವಿರುದ್ಧ ಜಿಲ್ಲೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಕೊಟ್ಟಾಯಂ ಎಎಸ್ಪಿ ಹರಿಶಂಕರ್ ಹೇಳಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂತ ಸ್ಟೀಫನ್ಸ್ ಕಾಲೇಜಿನ ಪ್ರಾಧ್ಯಾಪಕ ತಾಯಿಯನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ತಾಯಿಯ ಬಾಯಿಗೆ ಬಟ್ಟೆ ತುರುಕಿ, ಕಾಲು ಕಟ್ಟಿ ಹಾಕಿರುವುದು ಕಂಡುಬಂದಿದೆ ಎಂದು ವಿವರಿಸಿದ್ದಾರೆ. ಎರಡು ಚಾಕು ಹಾಗೂ ಮಲೆಯಾಳಂನಲ್ಲಿ ಬರೆದ ನಾಲ್ಕು ಪುಟಗಳ ಆತ್ಮಹತ್ಯೆ ಟಿಪ್ಪಣಿಯನ್ನು ಮಹಿಳೆಯ ಮೃತದೇಹ ಕಂಡುಬಂದ ಫ್ಲಾಟ್‌ನ ಎರಡನೇ ಮಹಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ತಾಯಿಯ ಹತ್ಯೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗನ ಆತ್ಮಹತ್ಯೆ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸರಾಯ್ ರೊಹಿಲ್ಲಾ ರೈಲು ನಿಲ್ದಾಣದ 100 ಮೀಟರ್ ದೂರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಬಗ್ಗೆ ಶನಿವಾರ ಮಧ್ಯಾಹ್ನ 1ರ ಸುಮಾರಿಗೆ ಮಾಹಿತಿ ಬಂದಿತ್ತು ಎಂದು ರೈಲ್ವೆ ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News