ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ : 3 ತಿಂಗಳ ಮಗು ಮೃತ್ಯು, ನಾಲ್ವರಿಗೆ ಗಾಯ

Update: 2019-10-21 07:15 GMT

ಹೈದರಾಬಾದ್, ಅ.21: ಇಲ್ಲಿನ ಎಲ್‌ಬಿ ನಗರದಲ್ಲಿ ಸೋಮವಾರ ಬೆಳಗ್ಗಿನ ಜಾವ ಖಾಸಗಿ ಮಕ್ಕಳ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ಘಟನೆಯಲ್ಲಿ ಮೂರು ತಿಂಗಳ ಗಂಡುಮಗು ಮೃತಪಟ್ಟಿದ್ದು, ಇತರ ನಾಲ್ವರಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ 2:55ರ ಸುಮಾರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಒಂದು ಹಸುಳೆ ಸಾವನ್ನಪ್ಪಿದ್ದು, ಇತರ ನಾಲ್ಕು ಹಸುಳೆಗಳು ಗಾಯಗೊಂಡಿವೆ. ಈ ಮಕ್ಕಳನ್ನು ಹೆತ್ತವರು ಹಾಗೂ ಪೊಲೀಸರು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ. ಎಲ್ಲ ಮಕ್ಕಳು ಆರೋಗ್ಯವಾಗಿವೆ ಎಂದು ಎಲ್‌ಬಿನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿ.ಅಶೋಕ್ ರೆಡ್ಡಿ ಪಿಟಿಐಗೆ ತಿಳಿಸಿದ್ದಾರೆ.

ಅಗ್ನಿ ಶಾಮಕ ದಳ ಬೆಂಕಿಯನ್ನು ತಹಬಂದಿಗೆ ತಂದಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದುಬಂದಿದೆ ಎಂದು ರೆಡ್ಡಿ ತಿಳಿಸಿದರು.

ಘಟನೆಯ ವೇಳೆ ಆಸ್ಪತ್ರೆಯಲ್ಲಿ 42 ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದವು.ಐದು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಆಸ್ಪತ್ರೆಯ ನಿರ್ಲಕ್ಷತನ ಖಂಡಿಸಿ ಗಾಯಗೊಂಡ ಮಕ್ಕಳ ಹೆತ್ತವರು ಹಾಗೂ ಸಂಬಂಧಿಕರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News