ಮೂರನೇ ಟೆಸ್ಟ್:ದಕ್ಷಿಣ ಆಫ್ರಿಕಾ 162 ರನ್‌ಗೆ ಆಲೌಟ್, ಫಾಲೋ-ಆನ್ ಹೇರಿದ ಕೊಹ್ಲಿ ಪಡೆ

Update: 2019-10-21 08:38 GMT

ರಾಂಚಿ,ಅ.21:ವೇಗದ ಬೌಲರ್ ಉಮೇಶ್ ಯಾದವ್ ನೇತೃತ್ವದ ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 162 ರನ್‌ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 335 ರನ್ ಮುನ್ನಡೆ ಪಡೆದ ಭಾರತದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಆಫ್ರಿಕಾ ತಂಡಕ್ಕೆ ಫಾಲೋ-ಆನ್ ವಿಧಿಸಿದರು.

ಭಾರತದ ಮೊದಲ ಇನಿಂಗ್ಸ್ ಮೊತ್ತ 497ಕ್ಕೆ ಉತ್ತರಿಸಹೊರಟಿದ್ದ ದಕ್ಷಿಣ ಆಫ್ರಿಕಾ 2ನೇ ದಿನದಾಟವಾದ ರವಿವಾರ ಆಟ ಕೊನೆಗೊಂಡಾಗ 9 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಇಂದು ಬ್ಯಾಟಿಂಗ್ ಮುಂದುವರಿಸಿದ ಆಫ್ರಿಕಾ 56.2 ಓವರ್‌ಗಳಲ್ಲಿ 162 ರನ್ ಗಳಿಸಿ ಗಂಟುಮೂಟೆ ಕಟ್ಟಿತು.

ಆಫ್ರಿಕಾದ ಪರ ಝುಬೆರ್ ಹಂಝಾ(62, 79 ಎಸೆತ, 10 ಬೌಂಡರಿ, 1 ಸಿಕ್ಸರ್)ಅಗ್ರ ಸ್ಕೋರರ್ ಎನಿಸಿಕೊಂಡರು. ಲಿಂಡೆ(37) ಹಾಗೂ ಬವುಮ(32)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಪರ ಯಾದವ್(3-40)ಯಶಸ್ವಿ ಬೌಲಿಂಗ್ ಸಂಘಟಿಸಿದರೆ, ಮುಹಮ್ಮದ್ ಶಮಿ(2-22), ಎಸ್.ನದೀಮ್(2-22) ಹಾಗೂ ರವೀಂದ್ರ ಜಡೇಜ(2-19) ತಲಾ ಎರಡು ವಿಕೆಟ್ ಪಡೆದರು.

ಚೊಚ್ಚಲ ಪಂದ್ಯದಲ್ಲಿ ಬವುಮಾ ಹಾಗೂ ನೊರ್ಟ್ಜೆ ವಿಕೆಟನ್ನು ಕಬಳಿಸಿದ ನದೀಮ್ ತನಗೆ ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News