ಪ್ರೀತಿ ಪ್ರೇಮದ ಬದುಕಿನಲ್ಲಿ ನೋವು-ನಲಿವು

Update: 2019-10-21 11:29 GMT

‘ನಿನ್ನ ಪ್ರೀತಿಯ ನೆರಳಿನಲ್ಲಿ...’’ ಲೇಖಕಿ ಎನ್. ಆರ್. ರೂಪಶ್ರೀ, ಶಿರಸಿ ಅವರೇ ಹೇಳುವಂತೆ ‘ನೋವು ನಲಿವಿನ ಸ್ಪಂದನ’. ‘ನಿಮ್ಮೆಲ್ಲರ ಮಾನಸ’ ಮಾಸ ಪತ್ರಿಕೆಯಲ್ಲಿ ಬರೆದ ಆಯ್ದ ಬರಹಗಳ ಸಂಕಲನ ಇದು. ಬದುಕಿನ ಪ್ರೀತಿಯ ಘಮವನ್ನು ತುಂಬಿಕೊಂಡ ಸಂಕಲನವಿದು. ಒಂದು ರೀತಿಯಲ್ಲಿ ಕತೆಯಂತೂ, ಪ್ರಬಂದತೆಯೂ, ಲೇಖನದಂತೆಯೂ ಇರುವ ಇಲ್ಲಿನ ಲೇಖನಗಳು ಅಂತಿಮವಾಗಿ ಮನುಷ್ಯ ಘನತೆಯನ್ನು ಎತ್ತಿ ಹಿಡಿಯುವಂಥವುಗಳು. ಮನುಷ್ಯನಲ್ಲಿ ಮಾನವೀಯ ಗುಣಗಳೇ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯಗಳೆಂಬ ಹುಟ್ಟನ್ನ ಹಿಡಿದು ದಾಟುವ ಪ್ರಯತ್ನವಿದು. ದುಡ್ಡು, ಅಧಿಕಾರ, ದರ್ಪದ ಮುಂದೆ ಸೋತರೂ ಆಂತರ್ಯದಲ್ಲಿ ಗೆಲುವಿನ ಸಂಭ್ರಮ, ಭಾವನೆಗಳ ಬೆಸುಗೆಯಲ್ಲಿ ನಿರಂತರ ಹಂಬಲಿಕೆ, ತುಡಿತ, ಕನಸಿಗಾಗಿ ಕನವರಿಸಿದ ಸುಂದರ ಕ್ಷಣಗಳು...ಹೀಗೆ ಹೃದಯದ ಪ್ರೀತಿಯ ಸ್ಫುರಣಗಳೆಲ್ಲ ‘ನಿನ್ನ ಪ್ರೀತಿಯ ನೆರಳಿನಲ್ಲಿ....’ ಪುಸ್ತಕದಲ್ಲಿ ಪಿಸುಗುಡುತ್ತಿವೆ.

 ಇಲ್ಲಿ ಒಟ್ಟು 27 ಬರಹಗಳಿವೆ. ಹೆಚ್ಚಿನವುಗಳು ಕಥನರೂಪದಲ್ಲಿದೆ. ನಿನ್ನ ಪ್ರೀತಿಯ ನೆರಳಿನಲ್ಲಿ ಪ್ರಬಂಧವೂ ಅದೇ ರೂಪದವು. ಅರಣ್ಯ, ಹೆಣ್ಣು, ಕಾಡು, ಪರಿಸರ ಪ್ರೀತಿ ಇವುಗಳನ್ನು ಇಟ್ಟುಕೊಂಡು ಬರೆಯಲಾಗಿದೆ. ವೌನ ಮುರಿಯದ ಪ್ರೀತಿ ಕೂಡ ಇದೇ ದಾಟಿಯದು. ಇದು ಕೂಡ ಸಿನೆಮಾ ದಾಟಿಯ ಅಥವಾ ಸಾಯಿಸುತೆ ಕಾದಂಬರಿಗಳಲ್ಲಿ ಬರುವ ಪ್ರೀತಿಯ ತರಹದ್ದು. ‘ಪ್ರೀತಿಯ ಪಾರಿಜಾತ ಪಸರಿಸುತ್ತಿದೆ...’ ದುರಂತ ಪ್ರೀತಿಗೆ ಸಂಬಂಧಪಟ್ಟುದು. ಪ್ರೀತಿಸಿದವಳ ನಿರೀಕ್ಷೆಯನ್ನು ಹುಸಿಯಾಗಿಸಿದವನ ಕತೆ. ಭಾವೋತ್ಕಟತೆಯಿಂದ ಹೊರಬಂದು, ವಾಸ್ತವವನ್ನು ಒಪ್ಪಿ ಹೊಸ ಬದುಕನ್ನು ಕಟ್ಟುವ ಹೆಣ್ಣಿನ ಕತೆ ಇದಾಗಿದೆ. ‘ಹೊಸ ವರ್ಷದ ಹೊಸ ಜೀವಂತಿಕೆಯಲ್ಲಿ’ ಮಹಿಳಾ ಹೋರಾಟಗಾರ್ತಿಯೊಬ್ಬಳ ವೈಯಕ್ತಿಕ ಬದುಕಿನ ತುಯ್ದಿಟಗಳನ್ನು ಇದುಹೇಳುತ್ತದೆ. ಇಲ್ಲೂ ಪುರುಷನ ಸ್ವಾರ್ಥವನ್ನು ಮೀರಿ, ಭಾವುಕತೆಗೆ ಬಲಿಯಾಗದೆ ಹೊಸ ಸೂರ್ಯನನ್ನು ಹುಡುಕಿಕೊಂಡು ಹೋಗುವ ಮಹಿಳೆಯನ್ನು ಕಾಣಬಹುದು. ಬಹುಶಃ ಇಲ್ಲಿರುವ ಹೆಚ್ಚಿನ ಕತೆಯಂತಹ ಬರಹಗಳು ಪ್ರೀತಿ, ಪ್ರೇಮ, ಹರೆಯ, ವಿರಹಗಳನ್ನು ಹೇಳುತ್ತಲೇ ಅವುಗಳನ್ನು ಮೀರಲು ಯತ್ನಿಸುವ ಮಹಿಳೆಯ ಕುರಿತಂತೆ ಹೇಳುತ್ತದೆ.

ಬೆನಕ ಬುಕ್ಸ್ ಬ್ಯಾಂಕ್ ಶಿವಮೊಗ್ಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 136. ಮುಖಬೆಲೆ 120 ರೂ. ಆಸಕ್ತರು 73384 37666 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News