ಬೆಂಗಳೂರು: ಅಗ್ನಿ ಅವಘಡ ಪ್ರಕರಣಕ್ಕೆ ತಿರುವು; ಪತ್ನಿ, ಮಕ್ಕಳಿಗೆ ಬೆಂಕಿ ಹಚ್ಚಿದ್ದು ತಂದೆ !

Update: 2019-10-21 13:08 GMT

ಬೆಂಗಳೂರು, ಅ.21: ನಗರದಲ್ಲಿ ನಡೆದ ಅಗ್ನಿ ಅವಘಡ ಪ್ರಕರಣ ತಿರುವು ಪಡೆದಿದ್ದು, ಕೌಟುಂಬಿಕ ಕಲಹದ ಕಾರಣಕ್ಕಾಗಿ ತಂದೆಯೇ ಮನೆಯ ಸದಸ್ಯರಿಗೆ ಬೆಂಕಿ ಹಚ್ಚಿದ್ದಾನೆ ಎಂದು ತನಿಖೆಯಿಂದ ಗೊತ್ತಾಗಿದೆ. ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಬಳಿಕ ತಂದೆ ತನಗೆ ತಾನೇ ಬೆಂಕಿ ಹಚ್ಚಿ ಆತ್ಮಹತ್ಯೆಗೈದ ಘಟನೆ ಇಲ್ಲಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಭಕ್ಷಿ ಗಾರ್ಡನ್ ನಿವಾಸಿಯಾದ ಮುರಳಿ(45) ಎಂಬಾತ ಬೆಂಕಿ ಹಚ್ಚಿದ ತಂದೆಯಾಗಿದ್ದು, ಮಕ್ಕಳಾದ ಕಾವೇರಿ(21), ಶ್ರೀಕಾಂತ್(15) ಹಾಗೂ ಮುರಳಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಪತ್ನಿ ಗೀತಾ(42)ರ ಸ್ಥಿತಿ ಚಿಂತಾಜನಕವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುರುಳಿ ಬಡಗಿ ಕೆಲಸ ಮಾಡಿಕೊಂಡಿದ್ದರೆ ಪತ್ನಿ ಗೀತಾ ಹೂವು ಕಟ್ಟಿ ಮಾರಿ ಜೀವನ ನಿರ್ವಹಿಸುತ್ತಿದ್ದರು. ಪುತ್ರಿ ಕಾವೇರಿ ಬಿಕಾಂ ವ್ಯಾಸಂಗ ಮುಗಿಸಿದ್ದರು. ಮಗ 9ನೆ ತರಗತಿ ಓದುತ್ತಿದ್ದ. ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮದ್ಯ ಸೇವನೆ ಮಾಡುತ್ತಿದ್ದ ಮುರಳಿ ಸರಿಯಾಗಿ ಕೆಲಸಕ್ಕೆ ಹೋಗದೆ ಪತ್ನಿ ಜೊತೆ ಜಗಳವಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ಇದೇ ವಿಚಾರವಾಗಿ ರವಿವಾರ ರಾತ್ರಿ ದಂಪತಿ ನಡುವೆ ಜಗಳವಾಗಿದೆ. ಬಳಿಕ, ಮುಂಜಾನೆ ಮುರಳಿ ಪತ್ನಿ, ಮಕ್ಕಳ ಮೇಲೆ ಪೆಟ್ರೋಲ್ ಸುರಿದು, ಆತನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಕೆಲ ಸಮಯದ ನಂತರ, ಬೆಂಕಿಯ ಹೊಗೆ ಮನೆಯನ್ನು ಆವರಿಸಿದ್ದನ್ನು ಕಂಡು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಿ ಸುಟ್ಟ ಗಾಯಗಳಾಗಿದ್ದ ನಾಲ್ವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುರಳಿ ಹಾಗೂ ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಮುರಳಿಯವರ ಮತ್ತೊಬ್ಬ ಪುತ್ರ ಕಾರ್ತಿಕ್ ಪಕ್ಕದ ಮನೆಯಲ್ಲಿ ಮಲಗಿದ್ದರಿಂದ ದುರಂತದಿಂದ ಪಾರಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಾಟನ್‌ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News