ಸಿಎಂ ಯಡಿಯೂರಪ್ಪರನ್ನು ಭೇಟಿಯಾದ 'ಮುಸ್ಲಿಮ್ ಜಮಾಅತ್' ನಾಯಕರು

Update: 2019-10-21 14:08 GMT

ಬೆಂಗಳೂರು, ಅ.21: ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ನಾಯಕರ ನಿಯೋಗವು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ, ರಾಜ್ಯದಲ್ಲಿ ಮುಸ್ಲಿಮ್ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಿತು.

ರಾಜ್ಯದಲ್ಲಿ ಶೇ.14ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಮರ ಶ್ರೇಯೋಭಿವೃದ್ಧಿಗಾಗಿ ಮುಂದಿನ ಬಜೆಟ್‌ನಲ್ಲಿ ಜನಸಂಖ್ಯಾ ಅನುಪಾತದ ಆಧಾರದಲ್ಲಿ ಕನಿಷ್ಠ ಶೇ.10ರಷ್ಟು ಅನುದಾನ ಮೀಸಲಿಡಬೇಕು, ಕೆಪಿಎಸ್ಸಿ, ವಿವಿ, ಮಾನವಹಕ್ಕು ಆಯೋಗ ಮುಂತಾದ ಶಾಸನಬದ್ಧ ಸಮಿತಿಗಳಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಬೇಕು.

ಸಿದ್ದರಾಮಯ್ಯ ನೇತೃತ್ವದ ಸರಕಾರದ ಆಡಳಿತಾವಧಿಯಲ್ಲಿ ಮಾಡಲಾದ ಜಾತಿಗಣತಿಯ ವರದಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು, ಕಬಳಿಕೆಯಾಗಿರುವ ವಕ್ಫ್ ಆಸ್ತಿಗಳನ್ನು ಮರುವಶಪಡಿಸಿ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸಬೇಕು, ನೂತನ ಸರಕಾರದ ಸಚಿವ ಸಂಪುಟದಲ್ಲಿ ಮುಸ್ಲಿಮ್ ಸಮುದಾಯದ ಕನಿಷ್ಠ ಒಬ್ಬರಿಗಾದರೂ ಸ್ಥಾನ ನೀಡಬೇಕು ಎಂದು ಮುಸ್ಲಿಮ್ ಜಮಾಅತ್ ಮನವಿ ಮಾಡಿತು.

ಎನ್‌ಆರ್‌ಸಿ ಬಗ್ಗೆ ಸಮುದಾಯಕ್ಕಿರುವ ಆತಂಕ ಮತ್ತು ಸಮಸ್ಯೆಗಳನ್ನು ನಿವಾರಿಸಬೇಕು, ನಿಗಮ ಮಂಡಳಿಗಳ ನೇಮಕದಲ್ಲಿ ಮುಸ್ಲಿಮ್ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವುದು ಮುಂತಾದ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ನಿಯೋಗವು ಮುಖ್ಯಮಂತ್ರಿಗೆ ಸಲ್ಲಿಸಿತು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಯಾವುದೇ ಕಾನೂನುಗಳ ಬಗ್ಗೆ ಮುಸ್ಲಿಮರು ಆತಂಕಪಡಬೇಕಾಗಿಲ್ಲ, ಮುಂದಿನ ಬಜೆಟ್‌ನಲ್ಲಿ ಗರಿಷ್ಠ ಪ್ರಮಾಣದ ಅನುದಾನ ನೀಡಲಾಗುವುದು, ಕಬಳಿಕೆಯಾದ ಆಸ್ತಿ ವಿಷಯದಲ್ಲಿ ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯನ್ನು ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಮುಂದಿನ ಅಧಿವೇಶನದಲ್ಲಿ ಸಮುದಾಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು. ಅಲ್ಲದೇ, ಮುಸ್ಲಿಮ್ ಜಮಾಅತ್ ಸಲ್ಲಿಸಿರುವ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹೀಮ್ ಉಪಸ್ಥಿತರಿದ್ದರು.

ಮುಸ್ಲಿಮ್ ಜಮಾಅತ್ ನಿಯೋಗದಲ್ಲಿ ರಾಜ್ಯಾಧ್ಯಕ್ಷ ಮೌಲಾನ ಮುಫ್ತಿ ಅನ್ವರಲಿ ಸಾಹೇಬ್ ರಾಮನಗರ, ಉಪಾಧ್ಯಕ್ಷರಾದ ಮೌಲಾನ ಶಬ್ಬೀರ್ ಅಲಿ ನೂರಿ, ಮೌಲಾನ ಅಬೂಸುಫ್ಯಾನ್ ಮದನಿ, ಮುಫ್ತಿ ಮುಹಮ್ಮದ್ ಅಸ್ಲಮ್ ಮಿಸ್ಬಾಹಿ, ಖಾರಿ ಝುಲ್ಫಿಕರ್ ಅತ್ತಾರಿ, ಮುಫ್ತಿ ಝುಲ್ಫಿಕರ್ ರಝ್ವಿ, ಮೌಲಾನ ವೈಝುದ್ದೀನ್ ರಝಾ, ರಾಜ್ಯ ಪ್ರ.ಕಾರ್ಯದರ್ಶಿ ಮೌಲಾನ ಎನ್‌ಕೆಎಂ ಶಾಫಿ ಸಅದಿ, ಹಾಜಿ ಮುಮ್ತಾಝ್ ಅಲಿ, ಹಬೀಬ್ ಕೋಯ ಕಾರವಾರ್, ಉಮರ್ ಹಾಜಿ ಯಾಕೂಬ್ ಯೂಸುಫ್ ಶಿವಮೊಗ್ಗ ಸಹಿತ 25 ಮಂದಿ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News