'ಕಾವೇರಿ' ನಿವಾಸಕ್ಕಾಗಿ ನಾನು ಕಾಯುತ್ತೇನೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-21 14:20 GMT

ಬೆಂಗಳೂರು, ಅ.21: ಮುಖ್ಯಮಂತ್ರಿಯ ಗೃಹ ಕಚೇರಿ ಸಮೀಪದಲ್ಲೆ, ನಿವಾಸ ಇದ್ದರೆ ಆಡಳಿತ ನಡೆಸುವುದಕ್ಕೂ ಸಹಕಾರಿಯಾಗುತ್ತದೆ. ನಾನು ಈ ಬಗ್ಗೆ ಹೆಚ್ಚು ಏನು ಹೇಳುವುದಿಲ್ಲ, ಸಿದ್ದರಾಮಯ್ಯನವರೇ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸೋಮವಾರ ನಗರದ ಶಕ್ತಿ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನಿವಾಸಕ್ಕಾಗಿ ನಾನು ಇನ್ನೂ ಕಾಯುತ್ತೇನೆ. ಸಿದ್ದರಾಮಯ್ಯ ಯಾವಾಗ ಕಾವೇರಿ ನಿವಾಸ ಬಿಟ್ಟುಕೊಡುತ್ತಾರೋ, ಆಗ ನಾನು ಆ ಮನೆಗೆ ಹೋಗುತ್ತೇನೆ. ಯಾವುದೇ ಕಾರಣಕ್ಕೂ ಅವರ ಮೇಲೆ ಒತ್ತಡ ಹೇರುವುದಿಲ್ಲ ಎಂದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನನಗೆ ನಿಗದಿಗೊಳಿಸಿರುವ ರೇಸ್‌ವ್ಯೆ ಕಾಟೇಜ್ ಎಲ್ಲ ಬಗೆಯ ವ್ಯವಸ್ಥೆ, ಸವಲತ್ತುಗಳನ್ನು ಹೊಂದಿದೆ. ಆ ನಿವಾಸಕ್ಕೆ ಸಿದ್ದರಾಮಯ್ಯ ಹೋದರೆ ನಮ್ಮದೇನು ತಕರಾರಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮನೆ ಖಾಲಿ ಮಾಡುವಂತೆ ಸಿದ್ದರಾಮಯ್ಯಗೆ ಪತ್ರ ಬರೆದಿತ್ತು. ಮನೆ ಖಾಲಿ ಮಾಡಲು ಒಂದು ತಿಂಗಳು ಕಾಲಾವಕಾಶವನ್ನು ಅವರು ಕೋರಿದ್ದರು. ಆದರೆ, ನನಗೆ ಮಾಹಿತಿ ನೀಡದೆ ಕಾವೇರಿ ನಿವಾಸದ ಮುಂದೆ ಅಳವಡಿಸಲಾಗಿದ್ದ ಸಿದ್ದರಾಮಯ್ಯ ನಾಮಫಲಕವನ್ನು ತೆರವುಗೊಳಿಸಲಾಗಿತ್ತು. ಆದರೆ, ಈಗ ಮತ್ತೆ ನಾಮಫಲಕವನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಹುಬ್ಬಳ್ಳಿ ಸ್ಫೋಟ ಪ್ರಕರಣ: ಹುಬ್ಬಳಿಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯನ್ನು ನೋಡಿದ್ದೇನೆ. ಒಬ್ಬ ವ್ಯಕ್ತಿಗೆ ಗಾಯವಾಗಿದೆ. ಯಾರೋ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿರಬಹುದು. ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News