ಬೆಂಗಳೂರು: ಕೆಲಸದಿಂದ ವಜಾ ಖಂಡಿಸಿ ಕಾರ್ಮಿಕರ ಧರಣಿ; 53ನೇ ದಿನಕ್ಕೆ ಕಾಲಿಟ್ಟ ಹೋರಾಟ

Update: 2019-10-21 16:06 GMT

ಬೆಂಗಳೂರು, ಅ.21: ಸಂಘಟನೆ ಮಾಡಿಕೊಂಡಿದ್ದಾರೆ ಎಂಬ ನೆಪವೊಡ್ಡಿ 100 ಕ್ಕೂ ಅಧಿಕ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಇಲ್ಲಿನ ನೆಲಮಂಗಲದ ಬಳಿ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿಯಿರುವ ಎಬಿಬಿ ಎಂಬ ಕಂಪೆನಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ನೂರಾರು ಕಾರ್ಮಿಕರನ್ನು ಕಾರಣ ನೀಡದೇ ಕೆಲಸದಿಂದ ಬಿಡುಗಡೆ ಮಾಡಿದ್ದಾರೆ. ಮತ್ತೊಂದು ಕಡೆ ಇತ್ತೀಚಿನ ಆರ್ಥಿಕ ಹಿಂಜರಿತದ ನೆಪವನ್ನಿಟ್ಟುಕೊಂಡು ಮತ್ತಷ್ಟು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.

ಗುತ್ತಿಗೆಯಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕಾರ್ಮಿಕ ಸಂಘವಾದ ಸಿಐಟಿಯು ಅನ್ನು ಕಂಪೆನಿಯಲ್ಲಿ ಸ್ಥಾಪನೆ ಮಾಡಿದ್ದೆವು. ಇದನ್ನು ಸಹಿಸದ ಅಧಿಕಾರಿಗಳು ನಮ್ಮನ್ನು ಬೇರೆ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದರು. ಇದನ್ನು ಪ್ರತಿಭಟಿಸಿದ ಕಾರಣಕ್ಕೆ ಕೆಲಸದಿಂದ ತೆಗೆದಿದ್ದಾರೆ ಎಂದು ಕಾರ್ಮಿಕ ಮುಖಂಡ ರಂಗಸ್ವಾಮಿ ಹೇಳಿದರು.

ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆ ಮಾಡಿದ ಬಳಿಕ ಮತ್ತೆ ಗುತ್ತಿಗೆ ಅಡಿಯಲ್ಲಿ ಬೇರೆ ಕಾರ್ಮಿಕರನ್ನು ಅತಿ ಕಡಿಮೆ ವೇತನ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಇದನ್ನು ಖಂಡಿಸಿ 53 ದಿನಗಳಿಂದಲೂ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರೆ, ಇದುವರೆಗೂ ಕಾರ್ಮಿಕರ ಸ್ಥಿತಿ ಕುರಿತು ಅಧಿಕಾರಿಗಳು ಬಂದು ವಿಚಾರಿಸಿಲ್ಲ ಎಂದು ಆಪಾದಿಸಿದರು.

ಕೆಲಸದಿಂದ ತೆಗೆದು ಹಾಕಿರುವ ಕಾರ್ಮಿಕರನ್ನು ಮರು ನಿಯೋಜಿಸಿಕೊಳ್ಳಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ಕಾರ್ಮಿಕರ ಸಂಘಟನೆಯನ್ನು ಸ್ಥಾಪನೆಗೆ ಅವಕಾಶ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳಿಗಾಗಿ ನಾವು ಹೋರಾಟವನ್ನು ಮುನ್ನಡೆಸುತ್ತೇವೆ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ವಾರ್ತಾಭಾರತಿಯಿಂದ ಕಂಪೆನಿಯವರನ್ನು ಭೇಟಿಯಾಗಲು ಬಯಸಿದರೆ, ಅವರು ಪತ್ರಕರ್ತರನ್ನು ಭೇಟಿಯಾಗಲು, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News