ಸನ್ನಡತೆಯ ಆಧಾರದ ಮೇಲೆ ಮಹಿಳೆ ಸೇರಿ 141 ಕೈದಿಗಳ ಬಿಡುಗಡೆ

Update: 2019-10-21 16:39 GMT

ಬೆಂಗಳೂರು, ಅ.21: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೆ ಜಯಂತಿ ಅಂಗವಾಗಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಸಜಾಬಂದಿ ಕೈದಿಗಳ ಪೈಕಿ ಮಹಿಳೆಯೊಬ್ಬಾಕೆ ಸೇರಿ 141 ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಸೋಮವಾರ ಬಿಡುಗಡೆ ಮಾಡಲಾಯಿತು.

ನಗರದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಆಯೋಜಿಸಿದ್ದ, ಸನ್ನಡತೆ ಬಂದಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೈದಿಗಳಿಗೆ ಬಿಡುಗಡೆ ಪತ್ರ ವಿತರಿಸಿದರು.

ಬಳಿಕ ಕೈದಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷ ಜೈಲು ವಾಸ ಅನುಭವಿಸುವ ವೇಳೆ ಸನ್ನಡತೆ ತೋರಿದ ಕೈದಿಗಳಿಗೆ ಅವಧಿಗೂ ಮುನ್ನವೇ ಅವರನ್ನು ಬಿಡುಗಡೆ ಮಾಡಲಾಗಿದೆ. ಹೊಸ ಬದುಕನ್ನು ಕಟ್ಟಿಕೊಳ್ಳಲು ಹೊರಟವರಿಗೆ ಶುಭವಾಗಲಿ. ಮನುಷ್ಯ ಹೊರಗಡೆ ಇದ್ದು ಪರಿವರ್ತನೆ ಆಗುವುದಕ್ಕೂ ಜೈಲಿನಲ್ಲಿ ಇದ್ದು ಪರಿವರ್ತನೆ ಆಗುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದರು.

ಮನುಷ್ಯನಿಗೆ ಹಸಿವು, ಬಟ್ಟೆ, ಮನೆ ಇವುಗಳ ಜತೆಗೆ ಸ್ವತಂತ್ರವಾಗಿ ಬದುಕಬೇಕು ಎಂಬುದು ಆಸೆಯಾಗಿರುತ್ತದೆ. ಅಲ್ಲದೇ, ಮನುಷ್ಯ ಈಗ ಲಾಭ-ನಷ್ಟವನ್ನಷ್ಟೆ ತೂಗುತ್ತಿದ್ದಾರೆ. ಆದರೆ, ಪಾಪ ಪುಣ್ಯ ಕೈಬಿಟ್ಟಿದ್ದಾರೆ. ಹೀಗಾಗಿ, ಮನಪರಿವರ್ತನೆ ಆಗಬೇಕು. ಅದು ನಮ್ಮ ಮನಸ್ಸಿನಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬ ವ್ಯಕ್ತಿ ಯಾವುದೇ ಬಂಧನದಲ್ಲಿ ಇರದಂತೆ ಬದುಕ ಬೇಕೆಂದುಕೊಳ್ಳುತ್ತಾರೆ. ಆದರೆ, ಇವತ್ತಿನ ಸಮಾಜದಲ್ಲಿ ನಕಾರಾತ್ಮಕ ಶಕ್ತಿಗಳು ಇರುವುದರಿಂದ ತನ್ನ ಸ್ವಾತಂತ್ರ್ಯದ ನಿಯಂತ್ರಣ ಕಳೆದುಕೊಂಡು ಮನಸಿನ ಮೇಲಿನ ಹತೋಟಿ ಕಳೆದುಕೊಂಡು ಈ ರೀತಿ ಅಪರಾಧ ಕೃತ್ಯಗಳು ನಡೆದುಹೋಗುತ್ತವೆ. ಹೀಗಾಗಿ, ಮಾನಸಿಕ ಹತೋಟಿ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ರೇಡಿಯೋ ಪ್ರಾರಂಭ ಹಾಗೂ ನೂತನ ಸಭಾಂಗಣವನ್ನು ಗೃಹ ಸಚಿವರು ಉದ್ಘಾಟಿಸಿದರು. ಶಾಸಕ ಎಂ.ಕೃಷ್ಣಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಕಾರಾಗೃಹದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಡುಗಡೆಯಾದ ಕೈದಿಗಳ ಸಂಖ್ಯೆ

* ಬೆಂಗಳೂರು-71

* ಮೈಸೂರು-23

* ಬೆಳಗಾವಿ-06

* ಕಲಬುರ್ಗಿ-13

* ವಿಜಯಪುರ-06

* ಬಳ್ಳಾರಿ-11

* ಧಾರವಾಡ-11

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News