ಮೊಬೈಲ್ ಆ್ಯಪ್ ಆಧಾರಿತ ಸಂಸ್ಥೆಗಳ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಮಿತಿ ರಚನೆ

Update: 2019-10-21 17:01 GMT

ಬೆಂಗಳೂರು, ಅ.21: ಮೊಬೈಲ್ ಆ್ಯಪ್ ಆಧಾರಿತ ಸೇವೆಗಳಾಗಿರುವ ಓಲಾ, ಊಬರ್, ಸ್ವಿಗ್ಗಿ, ರೊಮ್ಯಾಟೊ ಸೇರಿದಂತೆ ಇನ್ನಿತರ ಕಂಪೆನಿಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು, ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮುಖಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳು ಹಾಗೂ ಕೈಗಾರಿಕೋದ್ಯಮಿಗಳ ಜೊತೆ ಇಂದು ಸುದೀರ್ಘವಾದ ಸಭೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಲಹೆಗಳನ್ನು ಪಡೆಯಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು. 9 ರಾಷ್ಟ್ರೀಯಮಟ್ಟದ ಕಾರ್ಮಿಕ ಸಂಘಟನೆಗಳು ಹಾಗೂ ಕಟ್ಟಡ ನಿರ್ಮಾಣ, ಗಾರ್ಮೆಂಟ್ಸ್ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಘಟನೆಗಳ ಪ್ರಮುಖರು ಹಾಗೂ ಬಾಷ್, ಕ್ರೆಡಾಯ್, ಎಫ್‌ಕೆಸಿಸಿಐ, ಸಿಐಐ, ಎಂಎಸ್‌ಎಂಇ, ಶೋಭಾ ಡೆವಲಪರ್ಸ್‌ ಸೇರಿದಂತೆ 33 ಉದ್ದಿವೆುಗಳ ಪ್ರತಿನಿಧಿಗಳು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈ ಹಿಂದೆ ಇದ್ದ 'ಕಾರ್ಮಿಕ-ಮಾಲಕ-ಸರಕಾರ' ವ್ಯವಸ್ಥೆಯನ್ನು ಪುನಃ ಜಾರಿಗೆ ತರುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆಯಾಗಿದೆ. ಗುತ್ತಿಗೆ ಆಧಾರಿತ ಕಾರ್ಮಿಕ ಶೋಷಣೆಯನ್ನು ತಪ್ಪಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಗುತ್ತಿಗೆ ನೌಕರರ ಕಾಯ್ದೆಯನ್ನು ಪರಿಶೀಲಿಸಿ, ನಮ್ಮ ರಾಜ್ಯದಲ್ಲಿಯೂ ಸುಧಾರಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಕಾರ್ಮಿಕರು ಹಾಗೂ ಆಡಳಿತ ಮಂಡಳಿಗಳು ನಡುವೆ ಯಾವುದಾದರೂ ಸಮಸ್ಯೆಗಳು ಉದ್ಭವಿಸಿದಾಗ ಅವರ ಜೊತೆ ಮಾತುಕತೆ ನಡೆಸಲು ಇದ್ಧ ಮಾರ್ಗ ದುರ್ಬಲವಾಗಿದೆ. ಅದಕ್ಕೆ ಮತ್ತಷ್ಟು ಶಕ್ತಿ ತುಂಬಿ ಸಂಧಾನಕ್ಕೆ ಹೊಸ ನಿಯಮ ಜಾರಿಗೊಳಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ಒದಗಿಸುವ ಕುರಿತು ಈಗಿರುವ ವಿಧಾನವನ್ನು ಮತ್ತಷ್ಟು ಸರಳೀಕರಣಗೊಳಿಸಲು ಚರ್ಚೆ ಮಾಡಲಾಗಿದೆ. ಕಾರ್ಮಿಕ ಸಂಘಟನೆಗಳು ಹಾಗೂ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ. ಅದೇ ರೀತಿ, ಅಸಂಘಟಿತ ಕಾರ್ಮಿಕರಿಗೆ 2011ರ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಅವರಿಗೆ ರಕ್ಷಣೆ ಹಾಗೂ ಹೆಚ್ಚಿನ ಸೌಲಭ್ಯ ನೀಡಲು ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ನವೆಂಬರ್ ಎರಡನೇ ವಾರದಲ್ಲಿ ಗಾರ್ಮೆಂಟ್ಸ್ ಕಾಖಾನೆಗಳು ಹಾಗೂ ಕಾರ್ಮಿಕ ಪ್ರತಿನಿಧಿಗಳ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ಸಮಾವೇಶದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮತ್ತಷ್ಟು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು. ಅಲ್ಲದೆ, ರಾಜ್ಯದ ಪ್ರಮುಖ ಉದ್ದಿಮೆಗಳ ಪ್ರತಿನಿಧಿಗಳ ಸಭೆ ಮಾಡುತ್ತೇವೆ. ಅಲ್ಲಿ ಕಾರ್ಮಿಕರ ಹಿತ ಕಾಪಾಡಲು ಹಾಗೂ ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ರಾಷ್ಟ್ರಮಟ್ಟದಲ್ಲಿ ನಡೆಯುವಂತೆ ನಮ್ಮ ರಾಜ್ಯದಲ್ಲಿಯೂ ಕಾರ್ಮಿಕರ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಬಹುಶಃ ಡಿಸೆಂಬರ್ ತಿಂಗಳಲ್ಲಿ ಸಮಾವೇಶ ನಡೆಸಲಾಗುವುದು. ಮಹಿಳಾ ಕಾರ್ಮಿಕರು ಯಂತ್ರೋಪಕರಣಗಳು ಇರುವ ವಿಭಾಗ ಹಾಗೂ ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಬೇಡಿಕೆ ಇಡಲಾಗಿದೆ. ಈ ಸಂಬಂಧ ಸಂಬಂಧಪಟ್ಟ ಇತರ ಇಲಾಖೆಗಳ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿಯಲ್ಲಿನ ಅನುದಾನದ ಸದ್ಭಳಕೆ ಕುರಿತು ಹಲವು ಸಲಹೆಗಳು ಬಂದಿವೆ. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ. ಕಾರ್ಮಿಕರಿಗಾಗಿ 155214 ಟೋಲ್ ಫ್ರೀ ಸಂಖ್ಯೆಯ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News