ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು: ಉತ್ತರ ಪ್ರದೇಶ ದೇಶದಲ್ಲೇ ನಂ. 1 !

Update: 2019-10-22 08:50 GMT

ಹೊಸದಿಲ್ಲಿ, ಅ.22: ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ 2017ರಲ್ಲಿ ಭಾರತದಲ್ಲಿ ನಡೆದ ಅಪರಾಧ ಪ್ರಕರಣಗಳ ವರದಿ ಬಿಡುಗಡೆಯಾಗಿದ್ದು, ದೇಶದಲ್ಲಿ ಈ ವರ್ಷ ಮಹಿಳೆಯರ ವಿರುದ್ಧ ನಡೆದ 3,59,849 ಅಪರಾಧ ಪ್ರಕರಣಗಳ ಪೈಕಿ ಗರಿಷ್ಠ 56,011 ಪ್ರಕರಣಗಳು ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದಿದ್ದು ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ.

ಮಹಿಳೆಯರ ವಿರುದ್ಧದ 31,979 ಅಪರಾಧ ಪ್ರಕರಣಗಳು ವರದಿಯಾದ ಮಹಾರಾಷ್ಟ್ರ ಹಾಗೂ 30,002 ಪ್ರಕರಣಗಳು ವರದಿಯಾದ ಪಶ್ಚಿಮ ಬಂಗಾಳ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು (ಶೇ.27.9) ಗಂಡ ಅಥವಾ ಆತನ ಸಂಬಂಧಿಕರಿಂದ ನಡೆದ ಹಿಂಸೆಯ ಪ್ರಕರಣಗಳಾಗಿದ್ದರೆ ಶೇ.21.7ರಷ್ಟು ಪ್ರಕರಣಗಳು ಮಾನಭಂಗ ನಡಸುವ ಉದ್ದೇಶದಿಂದ ನಡೆದ ಹಲ್ಲೆ ಪ್ರಕರಣಗಳಾಗಿವೆ. ಉಳಿದಂತೆ ಶೇ.20.5ರಷ್ಟು ಅಪಹರಣ ಪ್ರಕರಣಗಳಾಗಿದ್ದರೆ, ಶೇ.7ರಷ್ಟು ಪ್ರಕರಣಗಳು ಅತ್ಯಾಚಾರ ಪ್ರಕರಣಗಳಾಗಿವೆ ಎಂದು ವರದಿ ತಿಳಿಸಿದೆ.

2016ಗೆ ಹೋಲಿಸಿದಾಗ 2017ರಲ್ಲಿ ದಾಖಲಾದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದರೆ ಅತ್ಯಾಚಾರ ಪ್ರಕರಣಗಳು 2013ರಿಂದ ಈ ವರ್ಷ ಕನಿಷ್ಠವಾಗಿದೆ. 2017ರಲ್ಲಿ ದಾಖಲಾದ ಒಟ್ಟು ಅತ್ಯಾಚಾರ ಪ್ರಕರಣಗಳು 32,559 ಆಗಿದ್ದರೆ, ಇವುಗಳ ಪೈಕಿ 10,221 ಮಂದಿ ಅಪ್ರಾಪ್ತ ವಯಸ್ಕರಾಗಿದ್ದರು ಎಂದು ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿ ತಿಳಿಸಿದೆ.

ಅಪರಾಧಗಳು ಸಾಬೀತಾದ ಪ್ರಕರಣಗಳು 2017ರಲ್ಲಿ ಶೇ.24.5ರಷ್ಟಾಗಿತ್ತು. ಇವುಗಳ ಪೈಕಿ ಶೇ.35ರಷ್ಟು ಪ್ರಕರಣಗಳು ದಿಲ್ಲಿಯಿಂದ ವರದಿಯಾದ ಪ್ರಕರಣಗಳಾಗಿದ್ದರೆ ಅಪರಾಧ ಸಾಬೀತಾದ ಪ್ರಕರಣಗಳ ಪೈಕಿ ಶೇ.3.1ರಷ್ಟು ಪ್ರಕರಣಗಳು ಗುಜರಾತ್ ರಾಜ್ಯದಿಂದ ಹಾಗೂ ಶೇ.3.2ರಷ್ಟು ಪ್ರಕರಣಗಳು ಪಶ್ಚಿಮ ಬಂಗಾಳದಿಂದ ವರದಿಯಾದ ಪ್ರಕರಣಗಳಾಗಿದ್ದವು.

ಭಾರತೀಯ ದಂಡ ಸಂಹಿತೆಯನ್ವಯ ದಾಖಲಾದ ಒಟ್ಟು ಅಪರಾಧ ಪ್ರಕರಣಗಳ ಪೈಕಿ ಶೇ.10.1ರಷ್ಟು ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ. ಈ ಬಾರಿ ಡೆಬಿಟ್/ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳನ್ನು ಹಾಗೂ ನಕಲಿ ಸುದ್ದಿ ಪ್ರಕರಣಗಳನ್ನೂ ಸೇರಿಸಲಾಗಿದೆ. ಆದರೆ ನಕಲಿ ಸುದ್ದಿ ಹಾಗೂ ವದಂತಿಯ ಹೆಚ್ಚು ಪ್ರಕರಣಗಳು ಮಧ್ಯಪ್ರದೇಶದಿಂದ (138) ವರದಿಯಾಗಿದ್ದರೆ, ನಂತರದ ಸ್ಥಾನಗಳು ಉತ್ತರ ಪ್ರದೇಶ (32) ಹಾಗೂ ಕೇರಳಕ್ಕೆ (18) ಹೋಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News