×
Ad

ರಾಜಧಾನಿಯಲ್ಲಿ ಹೆಚ್ಚುತ್ತಿದೆ ಪಟಾಕಿ ಸಿಡಿತದಿಂದಾಗುವ ಹಾನಿ !

Update: 2019-10-23 19:28 IST

ಬೆಂಗಳೂರು, ಅ.23: ಜನರಲ್ಲಿ ಪಟಾಕಿ ಹೊಡೆಯುವ ಮನಸ್ಥಿತಿ ಕಡಿಮೆಯಾಗುತ್ತಿದೆ ಎಂದರೂ ಪಟಾಕಿಯಿಂದ ಹಾನಿಗಳು ಮಾತ್ರ ರಾಜಧಾನಿಯಲ್ಲಿ ಹೆಚ್ಚಳವಾಗುತ್ತಲೇ ಇವೆ.

ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳ ಅಂಕಿ ಅಂಶದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಪ್ರಮಾಣ ಶೇ.20ರಷ್ಟು ಹೆಚ್ಚಾಗಿದೆ. ಈ ಪೈಕಿ ಚಿಕ್ಕ ಪುಟ್ಟ ಹಾನಿಗಳೇ ಹೆಚ್ಚಿದ್ದು, ತೀವ್ರವಾಗಿ ಹಾನಿ ಮಾಡಿಕೊಳ್ಳುತ್ತಿರುವವರ ಪ್ರಮಾಣ ಕಡಿಮೆ ಇದೆ.

ಕಳೆದ ಐದು ವರ್ಷಗಳಿಂದ ಸರಾಸರಿ 100 ಮಂದಿ ಪ್ರತಿ ವರ್ಷ ಪಟಾಕಿ ಹಾನಿಗೊಳಗಾಗುತ್ತಿದ್ದಾರೆ. ಈ ಪೈಕಿ ಶೇ.10 ಮಂದಿಯ ಕಣ್ಣಿಗೆ ತೀವ್ರ ಹಾನಿಯಾಗುತ್ತಿದ್ದು, ಕನಿಷ್ಠ ಮೂರು-ನಾಲ್ಕು ಮಂದಿ ಶಾಶ್ವತ ಅಂಧರಾಗುತ್ತಿದ್ದಾರೆ.

ಜಾಗೃತಿ ಕಾರ್ಯಕ್ರಮಗಳಿಂದ ಪಟಾಕಿ ಹೊಡೆಯುವ ಮನಸ್ಥಿತಿ ಕಡಿಮೆಯಾಗುತ್ತಿದೆ ಎಂದು ಹೇಳಿದರೂ ಪಟಾಕಿಯಿಂದ ಆಗುತ್ತಿರುವ ಹಾನಿಗಳ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ. 2015ರಲ್ಲಿ ಪಟಾಕಿ ಹಾನಿ ಪ್ರಮಾಣ ಒಂದಷ್ಟು ಇಳಿಕೆ ಕಂಡಿತ್ತಾದರೂ ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಗಾಯಕ್ಕೊಳಗಾದವರಲ್ಲಿ ಬಹುತೇಕರು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇವರಲ್ಲಿ ಶೇ.30 ಮಂದಿ ಒಳರೋಗಿಗಳಾಗಿ ದಾಖಲಾದರೆ, ಶೇ.70 ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳುತ್ತಿದ್ದಾರೆ.

ಶೇ.40ರಷ್ಟು ತನ್ನದಲ್ಲದ ತಪ್ಪಿನಿಂದ ಹಾನಿ: ಆಸ್ಪತ್ರೆಗಳ ಮಾಹಿತಿ ಪ್ರಕಾರ ಪಟಾಕಿಯಿಂದ ಹಾನಿಗೊಳಗಾದವರ ಪೈಕಿ ಶೇ.40ರಷ್ಟು ಮಂದಿ ಬೇರೆಯವರು ಹಚ್ಚಿದ ಪಟಾಕಿಯಿಂದ ಹಾನಿಗೊಳಗಾಗುತ್ತಿದ್ದಾರೆ. ರಸ್ತೆಯಲ್ಲಿ ಹಾದುಹೋಗುವಾಗ ಯಾರೋ ಹಚ್ಚಿದ ಪಟಾಕಿ ಸಿಡಿದು, ಬೈಕಲ್ಲಿ ಹೋಗುವಾಗ ಒಮ್ಮೆಗೆ ರಸ್ತೆಯಲ್ಲಿ ಪಟಾಕಿ ಸಿಡಿದು, ಮನೆ ಮುಂದೆ ನಿಂತಿರುವಾಗ ಯಾರೋ ಹಚ್ಚಿದ ರಾಕೆಟ್ ಒಮ್ಮೆಗೆ ಬಂದು ಕಣ್ಣಿಗೆ ಬಿದ್ದು ಹಾನಿಗೊಳಗಾಗುತ್ತಿರುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ.

14 ವರ್ಷದೊಳಗಿನ ಮಕ್ಕಳೇ ಹೆಚ್ಚು: ಹಿಂದಿನ ವರ್ಷಗಳಲ್ಲಿ ಪಟಾಕಿಯಿಂದ ಹಾನಿಗೊಳಗಾದವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟ್ಟಾರೆ ಹಾನಿಯಾದವರಲ್ಲಿ ಶೇ.40ರಷ್ಟು ಮಕ್ಕಳಿದ್ದಾರೆ. ಅದರಲ್ಲೂ 10ರಿಂದ 14 ವರ್ಷದ ಮಕ್ಕಳು ಹೆಚ್ಚಿದ್ದಾರೆ. ಕಳೆದ ಮೂರು ವರ್ಷದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಹಾನಿ ಚಿಕಿತ್ಸೆ ಪಡೆದ 127 ಮಂದಿಯಲ್ಲಿ 60ಕ್ಕೂ ಹೆಚ್ಚು ಮಕ್ಕಳಿದ್ದರು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಕಳೆದ ಮೂರು ವರ್ಷದಲ್ಲಿ (2016-18) ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡು ಮಿಂಟೋ ಸರಕಾರಿ ಕಣ್ಣಿನ ಆಸ್ಪತ್ರೆಯಲ್ಲಿ 127 ಮಂದಿ ಹಾಗೂ ನಾರಾಯಣ ನೇತ್ರಾಲಯದಲ್ಲಿ 130 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಪಟಾಕಿ ಸಿಡಿಸುವುದರಿಂದ ಆಗುವ ಸಮಸ್ಯೆ?: ವಾಯು, ಶಬ್ದಮಾಲಿನ್ಯ ಉಂಟಾಗುತ್ತದೆ. ಎಚ್ಚರಿಕೆ ಇಲ್ಲದೆ ಹಚ್ಚುವಾಗ ಕೈಗಳಿಗೆ ಗಾಯ ಆಗಬಹುದು. ಬಗ್ಗಿ ಹಚ್ಚಿದಾಗ ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾಗಿ ಕಣ್ಣುಗಳೇ ಕುರುಡಾಗಬಹುದು. ವಿಷಯುಕ್ತ ಗಾಳಿ ದೇಹವನ್ನ ಸೇರಿಕೊಳ್ಳುತ್ತದೆ. ಉಸಿರಾಟಕ್ಕೆ ತೊಂದರೆ ಆಗಬಹುದು. ಭಾರೀ ಸದ್ದುಗಳ ಪಟಾಕಿ ಹಚ್ಚುವುದು ಕಿವಿಗೆ ಹಾನಿಯಾಗುತ್ತದೆ. ಶಾಶ್ವತ ಕಿವುಡುತನವೂ ಉಂಟಾಗಬಹುದು. ವಾಯು ಮಾಲಿನ್ಯ ಉಂಟಾಗಿ, ಭವಿಷ್ಯದ ಶುದ್ಧಗಾಳಿಯೂ ಅಶುದ್ಧವಾಗುತ್ತದೆ. ಪಟಾಕಿಗೆ ಬಳಸಿದ ತ್ಯಾಜ್ಯದಲ್ಲಿನ ವಿಷಕಾರಕ ವಸ್ತುಗಳು ಭೂಮಿಗೆ ಸೇರಿ, ಭೂಮಿಯೂ ವಿಷಮಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News