ಬೆಂಗಳೂರು: ಜೂಜಾಟ ಕ್ಲಬ್‌ಗಳ ಮೇಲೆ ಸಿಸಿಬಿ ದಾಳಿ; 67 ಮಂದಿ ಬಂಧನ
ಬೆಂಗಳೂರು, ಅ.23: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಕ್ಲಬ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 67 ಜನರನ್ನು ಬಂಧಿಸಿ, ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿವೇಕನಗರದ ಈಜಿಪುರ ಮುಖ್ಯ ರಸ್ತೆಯ ನಂದೀಶ್ವರ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್‌ನಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಬಾಂಬೆ ಕಲ್ಯಾಣಿ ಮಟ್ಕಾ ಎಂಬ ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಜೂಜಾಟದಲ್ಲಿ ತೊಡಗಿದ್ದ 18 ಮಂದಿಯನ್ನು ಬಂಧಿಸಿ ಇದಕ್ಕೆ ಸಂಬಂಧಿಸಿದ 1.4 ಲಕ್ಷ ರೂ. ನಗದು, ಮಟ್ಕಾ ಬರೆದಿರುವ 12 ಚಿಕ್ಕ ಪುಸ್ತಕಗಳು, ಮೊಬೈಲ್ ಜಪ್ತಿ ಮಾಡಿ, ಇಲ್ಲಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.
ಅದೇ ರೀತಿ, ರಾಮಯ್ಯ ಕಾಲೇಜು ಬಸ್ ನಿಲ್ದಾಣ ಮುಂಭಾಗದ ವೈಎಂಎಸ್ ಕಾಂಪ್ಲೆಕ್ಸ್‌ನ, 1ನೇ ಮಹಡಿಯಲ್ಲಿರುವ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್‌ನಲ್ಲಿ ಸದಸ್ಯರಲ್ಲದ ಸುಮಾರು 35-40 ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಜೂಜಾಟವನ್ನು ಆಡುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ 49 ಜನರನ್ನು ಬಂಧಿಸಲಾಗಿದೆ.
ಇವರಿಂದ 1.65 ಲಕ್ಷ ರೂ. ನಗದು ಜಪ್ತಿ ಮಾಡಿ, ಇಲ್ಲಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.