×
Ad

ಶಾಲಾ ವಾಹನ ಚಾಲಕರ ಸಮಸ್ಯೆಗೆ ಸರಕಾರ ಸ್ಪಂದಿಸಲಿ: ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ರಾಧಾಕೃಷ್ಣ

Update: 2019-10-23 22:38 IST

ಬೆಂಗಳೂರು, ಅ.23: ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುವ ಸೇವೆಯಲ್ಲಿ ತೊಡಗಿರುವ ಖಾಸಗಿ ವಾಹನ ಚಾಲಕರಿಗೆ ಉಚಿತವಾಗಿ ಶಾಲಾ ಪರವಾನಿಗೆ ನೀಡುವ ಮೂಲಕ ಚಾಲಕರು ಸ್ವಾಭಿಮಾನ ಹಾಗೂ ಆತ್ಮವಿಶ್ವಾಸದಿಂದ ಬದುಕಲು ಅವಕಾಶ ಕಲ್ಪಿಸುವುದು ಸರಕಾರದ ಕರ್ತವ್ಯವೆಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ರಾಧಾಕೃಷ್ಣ ತಿಳಿಸಿದ್ದಾರೆ.

ಬುಧವಾರ ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘದ ನಗರದ ಮಲ್ಲೇಶ್ವರಂನ ಗುಂಡೂರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಲಾ ವಾಹನ ಚಾಲಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿರುವ ಶಾಲಾ ವಾಹನ ಚಾಲಕರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ರಾಜ್ಯ ಸರಕಾರ ಬಗೆಹರಿಸುವ ಮೂಲಕ ಚಾಲಕ ಸ್ನೇಹಿಯಾಗಲಿ ಎಂದು ತಿಳಿಸಿದರು.

ಇಂದು ಸರಕಾರಗಳು ಸಂಪೂರ್ಣವಾಗಿ ಏಕಸ್ವಾಮ್ಯ ಬಂಡವಾಳಶಾಹಿಗಳ ಸೇವೆಯಲ್ಲಿ ಮುಳುಗಿ ಹೋಗಿವೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಜನಸಾಮಾನ್ಯರ ಮನಸಿನಲ್ಲಿದೆ. ಹೀಗಾಗಿ ರಾಜ್ಯ ಸರಕಾರ ಜನಸಾಮನ್ಯರ ಸಮಸ್ಯೆಗಳನ್ನು ಬಗೆ ಹರಿಸಿ, ಅವರಿಗೆ ಮಾಡುವ ಕೆಲಸಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತಹ ಕೆಲಸಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.

ಶಾಲಾ ವಾಹನ ಚಾಲಕರ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 1200ಕ್ಕೂ ಹೆಚ್ಚು ಚಾಲಕರು ಭಾಗವಹಿಸಿದ್ದರು. ಈ ವೇಳೆ ಎಐಯುಟಿಯುಸಿ ರಾಜ್ಯಕಾರ್ಯದರ್ಶಿ ಕೆ.ಸೋಮಶೇಖರ್, ಎಐಯುಟಿಯುಸಿ ಉಪಾಧ್ಯಕ್ಷ ಕೆ.ವಿ.ಭಟ್, ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘದ ಎಂ.ಗೋವಿಂದರಾಜ್, ಕರ್ನಾಟ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಮಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News