×
Ad

ಪಟಾಕಿ ಸಿಡಿತದಿಂದಾಗುವ ಅನಾಹುತ ತಡೆಗೆ ಮಿಂಟೋ ಆಸ್ಪತ್ರೆ ಸಜ್ಜು: 24 ಗಂಟೆಯೂ ಕಾರ್ಯ ನಿರ್ವಹಿಸಲು ಅಗತ್ಯ ಸಿದ್ಧತೆ

Update: 2019-10-23 22:42 IST

ಬೆಂಗಳೂರು, ಅ.23 : ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ವೇಳೆಯಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಪಟಾಕಿ ಸಿಡಿತದ ಗಾಯಾಳುಗಳಿಗೆ ತುರ್ತು ಸೇವೆ ಒದಗಿಸಲು ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಎಲ್ಲ ವೈದ್ಯ ಹಾಗೂ ವೈದ್ಯೇತರ ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಪ್ರತಿ ವರ್ಷ 50ಕ್ಕೂ ಅಧಿಕ ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಮಿಂಟೋಗೆ ಚಿಕಿತ್ಸೆಗೆ ಬರುತ್ತಾರೆ. ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ. ಸಹಾಯವಾಣಿ 080-26707176 ಹಾಗೂ ಮೊ. 9481740137 ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದು ಎಂದು ಅವರು ವಿವರಿಸಿದರು.

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವುದು ಪಟಾಕಿ. ಆದರೆ, ಪಟಾಕಿ ಸಿಡಿತದ ವೇಳೆ ಅಜಾಗರೂಕತೆಯಿಂದ ಪ್ರತಿ ವರ್ಷ ನೂರಾರು ಮಂದಿ ಗಾಯಗೊಂಡು ಬದುಕನ್ನು ಕತ್ತಲೆಗೆ ತಳ್ಳುತ್ತಿದ್ದಾರೆ. ಹೀಗಾಗಿ ಪಟಾಕಿ ಹಚ್ಚುವ ಮುನ್ನ ಸಾಕಷ್ಟು ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ ಎಂದು ಸಲಹೆ ನೀಡಿದರು.

ಕಳೆದ ವರ್ಷ ರಾಜ್ಯದಲ್ಲಿ ದೀಪಾವಳಿ ಸಮಯದಲ್ಲಿ 100ಕ್ಕೂ ಅಧಿಕ ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದರು. ಹೀಗಾಗಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಮಾಡಿಕೊಂಡವರಿಗೆ ಚಿಕಿತ್ಸೆ ನೀಡಲು ಕಣ್ಣಿನ ಆಸ್ಪತ್ರೆಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ. ಸಹಾಯವಾಣಿ ಆರಂಭಿಸಲಾಗಿದೆ ಎಂದು ಹೇಳಿದರು.

ಮಿಂಟೊ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಆರಂಭಿಸುವ ಜತೆಗೆ 18ರಿಂದ 20 ವೈದ್ಯರು, ನರ್ಸ್ ಹಾಗೂ ತಂತ್ರಜ್ಞರು ಸೇವೆಗೆ ಅಣಿಯಾಗಿದ್ದಾರೆ. ಚಿಕಿತ್ಸೆಗೆ ಅಗತ್ಯ ಔಷಧ, ಶಸ್ತ್ರಚಿಕಿತ್ಸೆ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ನಾರಾಯಣ ನೇತ್ರಾಲಯ, ಶಂಕರ ಕಣ್ಣಿನ ಆಸ್ಪತ್ರೆ, ಫೊರ್ಟಿಸ್ ಆಸ್ಪತ್ರೆ, ಡಾ.ಅಗರವಾಲ್, ರೈನ್‌ಬೊ ಮಕ್ಕಳ ಆಸ್ಪತ್ರೆ ಸೇರಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಡಿಮೆ ತೀವ್ರತೆಯ ಪಟಾಕಿಗಳೆಂದು ಗುರುತಿಸಿರುವ ನಕ್ಷತ್ರ ಕಡ್ಡಿ, ನೆಲಚಕ್ರ ಸೇರಿದಂತೆ ಎಲ್ಲವೂ ಹೆಚ್ಚು ಅಪಾಯಕಾರಿ. ಇವುಗಳಲ್ಲಿ ಉಷ್ಣತೆ ಅಂದಾಜು 1,300 ಡಿಗ್ರಿ ಸೆ. ಇರುತ್ತದೆ. ಹೀಗಾಗಿ ಇವುಗಳೂ ಸಿಡಿಯುವ ಸಾಧ್ಯತೆ ಇರುತ್ತದೆ. ಆದುದರಿಂದಾಗಿ ಮಕ್ಕಳಿಗೆ ಆದಷ್ಟು ದೂರದಿಂದಲೇ ಬೆಂಕಿಯಿಡಲು ಅವಕಾಶ ನೀಡಬೇಕು ಎಂದರು.

ಅಧಿಕ ಉಷ್ಣಾಂಶದಿಂದ ಹೊರಬರುವ ಹೊಗೆ ಮಕ್ಕಳ ಶ್ವಾಸಕೋಶಗಳಿಗೆ ತೀವ್ರ ಅಪಾಯ. ಹೀಗಾಗಿ ಶಬ್ದರಹಿತ ಪಟಾಕಿಗಳಿಂದಲೂ ಅಂತರ ಕಾಯ್ದುಕೊಳ್ಳಲಿ. ಪಟಾಕಿ ಕಣ್ಣಿಗೆ ಮಾರಕವಾಗಿದ್ದು, ಅಂಧತ್ವ ತರುವ ಸಾಧ್ಯತೆಯಿರುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮ ಇಂದ್ರಿಯವಾಗಿದ್ದು, ಪಟಾಕಿ ಹಚ್ಚುವ ಮುನ್ನ ಎಚ್ಚರವಹಿಸಬೇಕು. ಪಟಾಕಿ ಸಿಡಿಸುವಾಗ ಬೆಂಕಿ ನಂದಿಸಲು ಪಕ್ಕದಲ್ಲೆ ನೀರು ಹಾಗೂ ಮರಳನ್ನು ಇಟ್ಟುಕೊಳ್ಳಿ ಎಂದು ಸೂಚನೆಗಳನ್ನು ನೀಡಿದರು.

ಸಹಾಯವಾಣಿ ಸಂಖ್ಯೆಗಳು: ಮಿಂಟೊ ಆಸ್ಪತ್ರೆ -08026701646, ಕಣ್ಣಿನ ಬ್ಯಾಂಕ್-94817 40137, ಶಂಕರ ಕಣ್ಣಿನ ಆಸ್ಪತ್ರೆ (ಮಾರತ್‌ಹಳ್ಳಿ)- 080-28542727/28, ರೈನ್‌ಬೊ ಮಕ್ಕಳ ಆಸ್ಪತ್ರೆ (ಬನ್ನೇರುಘಟ್ಟ)- 7349739080, ಮಾರತ್‌ಹಳ್ಳಿ- 8884436024, ಜಯನಗರದ ನೇತ್ರಧಾಮ 080- 26088000 / 9845195898, ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ- 080-22240736/ 9845010510, ಫೋರ್ಟಿಸ್ ಆಸ್ಪತ್ರೆ- ವಸಂತ ನಗರ-96868 60310, ರಾಜಾಜಿನಗರ- 080- 6191 4665, ನಾರಾಯಣ ನೇತ್ರಾಲಯ- 9902546046 ಮತ್ತು 9902821128 ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕ ಮಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News