ವುಶು ವಿಶ್ವ ಚಾಂಪಿಯನ್‌ಶಿಪ್: ಬಂಗಾರ ಗೆದ್ದ ಪ್ರವೀಣ್

Update: 2019-10-24 02:47 GMT

ಶಾಂಘೈ,ಅ.23: ಪ್ರವೀಣ್ ಕುಮಾರ್ ವುಶು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಬುಧವಾರ 48 ಕೆಜಿ ವಿಭಾಗದಲ್ಲಿ ಫಿಲಿಪ್ಪೈನ್ಸ್ ನ ರಸೆಲ್ ಡಿಯಾಝ್‌ರನ್ನು ಮಣಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದರು.

15ನೇ ಆವೃತ್ತಿಯ ವಿಶ್ವ ವುಶು ಚಾಂಪಿಯನ್‌ಶಿಪ್‌ನ ಪುರುಷರ ಸಾಂಡಾ ಸ್ಪರ್ಧೆಯಲ್ಲಿ ಪ್ರವೀಣ್‌ಕುಮಾರ್ ಅವರು ಡಿಯಾಝ್‌ರನ್ನು 2-1 ಅಂತರದಿಂದ ಮಣಿಸಿದರು.

ಪ್ರವೀಣ್ ಸೆಮಿ ಫೈನಲ್ ಪಂದ್ಯದಲ್ಲಿ ಉಝ್ಬೇಕಿಸ್ತಾನದ ಖಸನ್ ಇಕ್ರೊಮೊವ್‌ರನ್ನು 2-0 ಅಂತರದಿಂದ ಸೋಲಿಸುವುದರೊಂದಿಗೆ ಫೈನಲ್ ಪ್ರವೇಶಿಸಿದ್ದರು.

2017ರಲ್ಲಿ ಪೂಜಾ ಕಡಿಯನ್ ವಿಶ್ವ ವುಶು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. ಮಹಿಳೆಯರ 75 ಕೆಜಿ ಸಾಂಡಾ ಇವೆಂಟ್‌ನಲ್ಲಿ ರಶ್ಯದ ಎವ್‌ಜಿನಿಯಾ ಸ್ಟೆಪನೋವಾರನ್ನು ಮಣಿಸಿದ್ದರು.

ವುಶು ಸಾಂಡಾ ಒಂದು ಮಾರ್ಷಲ್ ಆರ್ಟ್ ಆಗಿದ್ದು, ಇದರಲ್ಲಿ ಕ್ಲೋಸ್ ರೇಂಜ್ ಪಂಚ್‌ಗಳು ಹಾಗೂ ಕಿಕ್‌ಗಳು ಸಹಿತ ಫುಲ್ ಕಾಂಟ್ಯಾಕ್ಟ್ ಕಿಕ್ ಬಾಕ್ಸಿಂಗ್ ಕೂಡ ಸೇರಿದೆ.

ಚಾಂಪಿಯನ್‌ಶಿಪ್‌ನಲ್ಲಿ ಪೂನಂ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ವೈ.ಸನಥಾಯ್ ದೇವಿ ಬೆಳ್ಳಿ ಪದಕ ಜಯಿಸಿದ್ದಾರೆ. ವಿಕ್ರಾಂತ್ ಬಲಿಯಾನ್ ಕಂಚಿನ ಪದಕ ಗೆದ್ದುಕೊಂಡರು. ಸಾಂಡಾ ಇವೆಂಟ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಜಯಿಸಿರುವ ಭಾರತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚಾಂಪಿಯನ್‌ಶಿಪ್‌ನಲ್ಲಿ ಇರಾನ್ ಹಾಗೂ ಚೀನಾ ಮೊದಲೆರಡು ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News