ಎಲ್ಲ ಮೂರು ಮಾದರಿ ಕ್ರಿಕೆಟ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದ ಭಾರತದ 3ನೇ ಆಟಗಾರ ರೋಹಿತ್

Update: 2019-10-24 03:51 GMT

ದುಬೈ, ಅ.23: ದಕ್ಷಿಣ ಆಫ್ರಿಕಾ ವಿರುದ್ಧದ ಸ್ಮರಣೀಯ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿ ಆರಂಭಿಕ ಆಟಗಾರನ ಪಾತ್ರದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿರುವ ಭಾರತದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ 212 ರನ್ ಗಳಿಸಿದ್ದ ರೋಹಿತ್ ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್‌ನಲ್ಲಿ 12 ಸ್ಥಾನ ಮೇಲಕ್ಕೇರಿ 10ನೇ ಸ್ಥಾನ ತಲುಪಿದರು. ಈ ಮೂಲಕ ನಾಯಕ ವಿರಾಟ್ ಕೊಹ್ಲಿ ಹಾಗೂ ನಿವೃತ್ತ ಆರಂಭಿಕ ಆಟಗಾರ ಗೌತಮ್ ಗಂಭೀರ್ ದಾಖಲೆಯನ್ನು ಮುರಿದರು.

ರಾಂಚಿಯಲ್ಲಿ 116 ರನ್ ಗಳಿಸಿದ್ದ ಅಜಿಂಕ್ಯ ರಹಾನೆ 5ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ರ್ಯಾಂಕಿಂಗ್ ಸಾಧನೆಯನ್ನು ಸರಿಗಟ್ಟಿದರು. ಈ ಮೊದಲು 2016ರ ನವೆಂಬರ್‌ನಲ್ಲಿ ರಹಾನೆ 5ನೇ ಸ್ಥಾನ ತಲುಪಿದ್ದರು. ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಬಳಿಕ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿರುವ ಭಾರತದ ಮೂರನೇ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ.

 ಕನ್ನಡಿಗ ಮಾಯಾಂಕ್ ಅಗರ್ವಾಲ್ 18ನೇ ಸ್ಥಾನ ಪಡೆದಿದ್ದಾರೆ. ಸರಣಿಯಲ್ಲಿ 529 ರನ್ ಗಳಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ 44ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಭಾರೀ ಭಡ್ತಿ ಪಡೆದಿದ್ದಾರೆ. ರೋಹಿತ್ ಏಕದಿನ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ 2018ರ ಫೆಬ್ರವರಿಯಲ್ಲಿ 2ನೇ ಸ್ಥಾನ ಪಡೆದಿದ್ದರು. 2018ರ ನವೆಂಬರ್‌ನಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಏಳನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.

  ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ಆಟಗಾರನಾಗಿದ್ದರು. ಟೆಸ್ಟ್ ಹಾಗೂ ಟಿ-20 ಅಗ್ರ ಸ್ಥಾನ ಪಡೆದಿದ್ದ ಗಂಭೀರ್ ಏಕದಿನ ಕ್ರಿಕೆಟ್‌ನಲ್ಲಿ 8ನೇ ಸ್ಥಾನ ಪಡೆದಿದ್ದರು.

ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಪಡೆದು ಸರಣಿಯನ್ನು ಕೊನೆಗೊಳಿಸಿದರು. ಶಮಿ 751 ಅಂಕ ಪಡೆದು 15ನೇ ಸ್ಥಾನ ಪಡೆದರೆ, ಯಾದವ್ 624 ಅಂಕ ಗಳಿಸಿ 24ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News