ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ಶ್ರೀಕಾಂತ್, ಕಶ್ಯಪ್

Update: 2019-10-24 03:52 GMT

ಪ್ಯಾರಿಸ್, ಅ.23: ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಪಾರುಪಲ್ಲಿ ಕಶ್ಯಪ್ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದರು.

ಇಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ 55 ನಿಮಿಷಗಳ ಹೋರಾಟದಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ 21-15, 7-21, 14-21 ಅಂತರದಿಂದ ಸೋತಿದ್ದಾರೆ.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕಶ್ಯಪ್ ಹಾಂಕಾಂಗ್‌ನ ಕಾ ಲಾಂಗ್ ಅಂಗುಸ್ ವಿರುದ್ಧ 11-21, 9-21 ಗೇಮ್‌ಗಳ ಅಂತರದಿಂದ ಸುಲಭವಾಗಿ ಶರಣಾದರು.

ಭಾರತದ ಇನ್ನೋರ್ವ ಶಟ್ಲರ್ ಸಮೀರ್ ವರ್ಮಾ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 22-20, 18-21, 18-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಎರಡನೇ ಸುತ್ತಿಗೆ ತೇರ್ಗಡೆಯಾಗಿರುವ ಶುಭಾಂಕರ್ ಡೇ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರ. ಡೇ 2ನೇ ಸುತ್ತಿನಲ್ಲಿ ಇಂಡೋನೇಶ್ಯದ ಶೆಸರ್ ಹಿರೆನ್ ರುಸ್ಟಾವಿರೊರನ್ನು ಎದುರಿಸಲಿದ್ದಾರೆ.

ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಸವಾಲು ಮೊದಲ ಸುತ್ತಿನಲ್ಲೇ ಕೊನೆಗೊಂಡಿತು. ಸಾತ್ವಿಕ್ ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ, ಪ್ರಣವ್ ಚೋಪ್ರಾ ಹಾಗೂ ಎನ್.ಸಿಕ್ಕಿ ರೆಡ್ಡಿ ಮೊದಲ ಸುತ್ತಿನಲ್ಲಿ ಎಡವಿದರು.

ರಾನಿಕ್‌ರೆಡ್ಡಿ ಹಾಗೂ ಪೊನ್ನಪ್ಪ 4ನೇ ಶ್ರೇಯಾಂಕದ ಕೊರಿಯಾದ ಸೆಯೊ ಸೆವುಂಗ್ ಹಾಗೂ ಚಾಯೆ ಯುಜಂಗ್ ವಿರುದ್ಧ 17-21, 18-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಇಂಗ್ಲೆಂಡ್‌ನ ಕ್ರಿಸ್ ಅಡ್‌ಕಾಕ್ ಹಾಗೂ ಗ್ಯಾಬ್ರಿಯಲ್ ಅಡ್‌ಕಾಕ್ ಜೋಡಿ ಚೋಪ್ರಾ ಹಾಗೂ ರೆಡ್ಡಿ ಜೋಡಿಯನ್ನು 13-21, 18-21 ಗೇಮ್‌ಗಳ ಅಂತರದಿಂದ ಸೋಲಿಸಿ ಟೂರ್ನಿಯಿಂದ ಹೊರಗಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News