ಇವಿಎಂ ಗಳ ಬಗ್ಗೆ ಅನುಮಾನ ಹೆಚ್ಚಾಗುತ್ತಲೇ ಇದೆ: ಸಿದ್ದರಾಮಯ್ಯ

Update: 2019-10-24 12:17 GMT

ಬೆಂಗಳೂರು, ಅ. 24: ‘ವಿದ್ಯುನ್ಮಾನ ಮತಯಂತ್ರ(ಇವಿಎಂ) ತಿರುಚಲು ಸಾಧ್ಯವಿದೆ ಎಂಬುದರ ಕುರಿತು ಜನರಲ್ಲಿ ಸಂಶಯವಿದ್ದು, ಅದನ್ನು ಹೋಗಲಾಡಿಸಲು ಹಳೆಯ ಬ್ಯಾಲೆಟ್ ಪೇಪರ್ ಪದ್ಧತಿಯನ್ನೇ ಪುನಃ ಜಾರಿಗೆ ತರಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇವಿಎಂ-ವಿವಿಪ್ಯಾಟ್ ತಿರುಚಲು ಸಾಧ್ಯ’ ಎಂಬ ‘ವಾರ್ತಾಭಾರತಿ’ ಪತ್ರಿಕೆ ಮುಖಪುಟದಲ್ಲಿಂದು ಪ್ರಕಟಿಸಿರುವ ದಿ ಕ್ವಿಂಟ್ ಡಾಟ್ ಕಾಂ ತನಿಖಾ ವರದಿಯನ್ನು ಉಲ್ಲೇಖಿಸಿದರಲ್ಲದೆ, ಪತ್ರಿಕೆಯನ್ನು ಪ್ರದರ್ಶಿಸಿದರು.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ, ವಿವಿಪ್ಯಾಟ್‌ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸುವುದಿಲ್ಲ. ಆದರೆ, ಇವಿಎಂಗಳ ಬಗ್ಗೆ ಜನರಲ್ಲಿನ ಅನುಮಾನ ಸೃಷ್ಟಿಯಾಗಿದೆ. ಇವಿಎಂ ತಿರುಚಲು ಸಾಧ್ಯವಿದೆ ಎಂಬ ಸಂಶಯವನ್ನು ದೂರಮಾಡಬೇಕಿದೆ. ಆ ದೃಷ್ಟಿಯಿಂದ ಇವಿಎಂ, ವಿವಿಪ್ಯಾಟ್ ಬದಲಿಗೆ ಹಳೆಯ ಪದ್ಧತಿಯಂತೆ ಬ್ಯಾಲೆಟ್ ಪೇಪರ್ ಜಾರಿಗೆ ತರುವ ಮೂಲಕ ಸಂಶಯಗಳನ್ನು ದೂರ ಮಾಡಲು ಸಾಧ್ಯ. ಆ ಮೂಲಕ ಚುನಾವಣಾ ಪದ್ಧತಿಯಲ್ಲಿ ಪಾರದರ್ಶಕತೆ ತರಲು ಸಾಧ್ಯವಿದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರತಿಪಾದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News