×
Ad

ಬಿಬಿಎಂಪಿ ಗೂಡ್ಸ್ ಆಟೋ ಪಲ್ಟಿ: ಪೌರ ಕಾರ್ಮಿಕ ಸಾವು, ಮೂವರಿಗೆ ಗಾಯ

Update: 2019-10-24 17:42 IST

ಬೆಂಗಳೂರು, ಅ.24: ಬಿಬಿಎಂಪಿಯ ಗೂಡ್ಸ್ ಆಟೋ ಆಯತಪ್ಪಿ ಬಿದ್ದ ಪರಿಣಾಮ ಕಸ ಸಂಗ್ರಹಿಸುತ್ತಿದ್ದ ಪೌರಕಾರ್ಮಿಕ ಮೃತಪಟ್ಟು, ಆತನ ಪತ್ನಿ ಸೇರಿ ಮೂವರು ಗಾಯಗೊಂಡಿರುವ ಘಟನೆ ಕುಮಾರಸ್ವಾಮಿ ಲೇಔಟ್‌ನ ತುರಹಳ್ಳಿ ಅರಣ್ಯದ ಬಳಿ ನಡೆದಿದೆ.

ಪಂತರಪಾಳ್ಯದ ಅಂಬೇಡ್ಕರ್ ನಗರದ ಮುನಿಸ್ವಾಮಿ (40) ಮೃತಪಟ್ಟವರು. ಗಾಯಗೊಂಡಿರುವ ಅವರ ಪತ್ನಿ ಕೃಷ್ಣವೇಣಿ (30), ಚಂದ್ರ ಹಾಗೂ ಹರಿಜನ ಮಹೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಮಾರಸ್ವಾಮಿ ಲೇಔಟ್‌ನ ಕಸ ಸಂಗ್ರಹಿಸಿಕೊಂಡು ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ತುರಹಳ್ಳಿ ಅರಣ್ಯದ ಬಳಿಯ ಬಲ ತಿರುವಿನಲ್ಲಿ ನಿಯಂತ್ರಣ ತಪ್ಪಿ ಆಟೋ ಉರುಳಿ ಬಿದ್ದಿದೆ. ಆಟೋದ ಹಿಂದೆ ನಿಂತಿದ್ದ ಮುನಿಸ್ವಾಮಿ, ಕೃಷ್ಣವೇಣಿ, ಚಂದ್ರ ಹಾಗೂ ಹರಿಜನ ಮಹೇಶ ಕೆಳಗೆ ಬಿದ್ದಿದ್ದು, ಮುನಿಸ್ವಾಮಿ ಮೇಲೆ ಆಟೋ ಬಿದ್ದಿದ್ದರಿಂದ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಕೃಷ್ಣವೇಣಿಗೆ ಗಂಭೀರ ಗಾಯಗಳಾಗಿದ್ದರೆ, ಚಂದ್ರ ಹಾಗೂ ಹರಿಜನ ಮಹೇಶ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತ ನಡೆದ ನಂತರ ಚಾಲಕ ಸಂಪತ್‌ ಕುಮಾರ್ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News