×
Ad

ಬೆಂಗಳೂರು: ರಸ್ತೆ ಗುಂಡಿಯಲ್ಲಿ ಸಿಎಂ, ಮೇಯರ್, ಆಯುಕ್ತರ ಫೋಟೋ ಇಟ್ಟು ಪೂಜೆ !

Update: 2019-10-24 23:34 IST

ಬೆಂಗಳೂರು ಅ.24: ರಸ್ತೆ ಗುಂಡಿಗಳಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರಾಣಕ್ಕೆ ಸಂಚಕಾರ ಉಂಟಾಗುತ್ತಿದೆ. ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿ ಸರಿಪಡಿಸಿ ಎಂದು ಕನ್ನಡ ಪರ ಸಂಘಟನೆಗಳು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಾಯಂಡಹಳ್ಳಿ ಜಂಕ್ಷನ್ ಬಳಿ ಕನ್ನಡ ಪರ ಸಂಘಟನೆಗಳು ರಸ್ತೆ ಗುಂಡಿಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೇಯರ್ ಗೌತಕುಮಾರ್ ಜೈನ್, ಆಯುಕ್ತ ಅನಿಲ್ ಕುಮಾರ್ ಫೋಟೋಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿ, ರಾಜ್ಯ ಸರಕಾರ ಹಾಗೂ ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿದರು.

ಉದ್ಯೋಗಿಗಳು, ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಓಡಾಡುವ ಬಿಟಿಎಂ ಲೇಔಟ್, ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಯದೇವ ವತ್ತ, ಆವಿ ಜಂಕ್ಷನ್ ಮುಂತಾದ ಕಡೆ ರಸ್ತೆಗಳು ಹಾಳಾಗಿದ್ದು, ಶೀಘ್ರ ದುರಸ್ತಿ ಮಾಡಿಸಬೇಕೆಂದು ರಾಮಲಿಂಗಾರೆಡ್ಡಿ ಅವರು ಸರಕಾರಕ್ಕೆ ಮನವಿ ಮಾಡಿದ್ದರು. ಸಹ ಯಾವುದೇ ರೀತಿಯ ಕೆಲಸಗಳು ಆಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಇಂತಹ ಘಟನೆಗಳು ನಡೆಯಬಾರದು. ಕೂಡಲೇ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಬಿಬಿಎಂಪಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News