ಉತ್ತಮ ಶಾಲೆ ನಿರ್ಮಾಣದಲ್ಲಿ ಎಸ್‌ಡಿಎಂಸಿ-ಶಿಕ್ಷಕರ ಪಾತ್ರ ದೊಡ್ಡದು: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಅ.25: ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಸುರಕ್ಷಿತ ಮತ್ತು ಆನಂದದಾಯಕ ವಾತಾವರಣವನ್ನು ನಿರ್ಮಿಸಲು ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರ ಪಾತ್ರ ಹೆಚ್ಚಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ಜಿಲ್ಲಾ ಪ್ರತಿನಿಧಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನ್ಕಕೆ ಸಂಬಂಧಿಸಿದಂತೆ ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯ ಸರ್ವತೋಮುಖ ಅಭಿವೃದ್ಧಿಯ ಜವಾಬ್ದಾರಿಯನ್ನು ಎಸ್‌ಡಿಎಂಸಿ ಮತ್ತು ಶಿಕ್ಷಕರು ವಹಿಸಿಕೊಳ್ಳಲಿ. ಅದಕ್ಕೆ ಅಗತ್ಯವಿರುವ ನೆರವನ್ನು ರಾಜ್ಯ ಸರಕಾರ ನೀಡಲು ತಯಾರಿದೆ. ಈ ನಿಟ್ಟಿನಲ್ಲಿ ನ.2ರಿಂದ ನಿಯಮಿತವಾಗಿ ಎರಡು ಘಂಟೆಗಳ ಕಾಲ ಫೋನ್-ಇನ್ ಕಾರ್ಯಕ್ರಮವನ್ನು ಪ್ರಾರಂಬಿಸಲಾಗುವುದು. ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲರೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಅವರು ಹೇಳಿದರು.
ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಮಾತನಾಡಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಎಸ್‌ಡಿಎಂಸಿಗಳ ಪಾತ್ರ ದೊಡ್ಡಿದಿದೆ. ರಾಜ್ಯದಲ್ಲಿನ ಸುಮಾರ 8 ಲಕ್ಷ ಚುನಾಯಿತ ಎಸ್‌ಡಿಎಂಸಿ ಸದಸ್ಯರಿದ್ದು, ಅವರು ಆಸಕ್ತಿಯಿಂದ ಶ್ರಮಪಟ್ಟು ಕಾರ್ಯ ನಿರ್ವಹಿಸಿದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಬಹುದು ಮತ್ತು ಬಲಪಡಿಸಬಹುದು ಎಂದು ಹೇಳಿದರು. ಎನ್‌ಎಲ್ಎಸ್‌ಐಯುವಿನ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಮಾತನಾಡಿದರು. ಈ ವೇಳೆ ಮಗು ಮತ್ತು ಕಾನೂನು ಕೇಂದ್ರದ ಸಂಯೋಜಕಿ ಪ್ರೊ.ಎಲಿಜಬೆತ್ ಉಪಸ್ಥಿತರಿದ್ದರು.