ಕೃಷಿ ಮೇಳ-2019 ವಿಶೇಷ: ನೀರುಳಿಸುವ ‘ಡೀಪ್ ಡ್ರಿಪ್ ಇರಿಗೇಷನ್’ಗೆ ಮನಸೋತ ರೈತರು

Update: 2019-10-25 18:19 GMT

ಬೆಂಗಳೂರು, ಅ.25: ನಗರದ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಮರಗಳಿಗೆ ಅವುಗಳ ತಾಯಿ ಬೇರನ್ನು ಗುರುತಿಸಿ ಅದಕ್ಕೆ ತಕ್ಕಂತೆ ನೀರು ಒದಗಿಸಬಹುದಾದ ನೂತನ ಡೀಪ್ ಡ್ರಿಪ್ ಇರಿಗೇಷನ್ ಪದ್ಧತಿ ಪ್ರದರ್ಶಿಸಿದ್ದು, ರೈತರನ್ನು ಸೆಳೆಯುತ್ತಿದೆ. ಈ ಪದ್ಧತಿಯು ದ್ರಾಕ್ಷಿ ಬೆಳೆಯಿಂದ ಆರಂಭಗೊಂಡು, ತೆಂಗಿನಮರದವರೆಗೆ ಎಲ್ಲ ಮರಗಳಿಗೂ ಅನುಕೂಲಕರ. ಈ ಪದ್ಧತಿಯನ್ನು ಅಳವಡಿಸಿಕೊಂಡರೆ, ಸಾಮಾನ್ಯ ಡ್ರಿಪ್ ಇರಿಗೇಷನ್ ಪದ್ಧತಿಯಲ್ಲಿ ಬಳಸುವ ನೀರಿಗಿಂತ ಶೇ.50ರಷ್ಟು ನೀರು ಉಳಿತಾಯ ಮಾಡಬಹುದಾಗಿದೆ.

ಎಕ್ಸ್‌ಝಾ ಗ್ರೀನ್ ಸಲ್ಯೂಷನ್ಸ್ ಎಲ್‌ಎಲ್‌ಪಿ ಸಂಸ್ಥೆಯು ಡೀಪ್ ಡ್ರಿಪ್ ಇರಿಗೇಷನ್ ಪದ್ಧತಿಯನ್ನು ಪರಿಚಯಿಸಿದೆ. ಸುಮಾರು ಒಂದೂವರೆ ಅಡಿ ಉದ್ದದ ಕೊಳವೆಯಾಕಾರದ ಸ್ಟೈಕ್‌ಗಳನ್ನು ಮರದ ಕೆಳಗಡೆ ಸುತ್ತಿಗೆಯಲ್ಲಿ ಒಡೆದು ಭೂಮಿಗೆ ಹೂಳಬೇಕು. ಮರದ ಗಾತ್ರದ ಮೇರೆಗೆ ಒಂದರಿಂದ 5 ಸ್ಟೈಕ್‌ಗಳನ್ನು ಹೂಳಬೇಕು. ಸುತ್ತಲೂ ಡ್ರಿಪ್ ಇರಿಗೇಷನ್ ಪೈಪ್‌ನಲ್ಲಿ ಈ ಸ್ಟೈಕ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿರುತ್ತದೆ. ಈ ಸ್ಟ್ರೈಕ್‌ಗಳಿಗೆ ಅಲ್ಲಲ್ಲಿ ರಂಧ್ರಗಳನ್ನು ಮಾಡಲಾಗಿದ್ದು, ಮೇಲ್ಭಾಗವನ್ನು ಮುಚ್ಚಳದಿಂದ ಮುಚ್ಚಲಾಗಿರುತ್ತದೆ. ನೀರು ಮರದ ಬೇರಿಗೆ ಅಗತ್ಯವಿದ್ದಾಗ ತಾನಾಗಿಯೇ ಹೀರಿಕೊಳ್ಳುತ್ತದೆ. ಅಗತ್ಯವಿರುವಷ್ಟು ನೀರನ್ನು ಮಾತ್ರ ಹೀರಿಕೊಳ್ಳುವುದರಿಂದ ನೀರು ವ್ಯರ್ಥವಾಗುವುದಿಲ್ಲ.

ಸಾಮಾನ್ಯವಾಗಿ ರೈತರು ಮರದ ಬುಡಕ್ಕೆ ನೀರು ಹರಿಸಿ ಬುಡದಲ್ಲಿ ನಿಲ್ಲಿಸುತ್ತಾರೆ. ಇದು ತಪ್ಪು ವಿಧಾನ. ಇದರಿಂದ ಮೂಲ ಬೇರಿಗೆ ನೀರು ಹೋಗದೆ, ಅದು ಆವಿಯಾಗಿ ಹೋಗುತ್ತದೆ. ಹೀಗಾಗಿ ಬೇರಿಗೇ ತಲುಪಸಿದರೆ ಒಳಿತು. ಅದು ಡೀಪ್ ಡ್ರಿಪ್ ಇರಿಗೇಷನ್ ಪದ್ಧತಿಯಿಂದ ಸಾಧ್ಯವಾಗುತ್ತದೆ ಎಂದು ಸಂಸ್ಥೆಯ ಸಿಇಒ ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.

ಡೀಪ್ ಡ್ರಿಪ್ ಇರಿಗೇಷನ್ ಪದ್ಧತಿಯಿಂದ ಕಳೆ ಬೆಳೆಯುವುದಿಲ್ಲ. ನೀರು ಹರಿಸುವ ಸಮಯ ಉಳಿಯುತ್ತದೆ. ಮಣ್ಣಿನ ಮೇಲ್ಭಾಗದಲ್ಲಿ ನೀರು ಕಾಣುವುದಿಲ್ಲ. ಬೇರು ಮತ್ತು ಮಣ್ಣಿಗೆ ಗಾಳಿ ಒದಗಿಸುತ್ತದೆ. ಸಾಯುವ ಗಿಡಗಳಿಗೆ ಹಾಗೂ ಬರಪೀಡಿತ ಪ್ರದೇಶದಲ್ಲಿ ಬಹಳ ಉಪಯೋಗ, ಮಣ್ಣು ಕುಸಿತವೂ ಉಂಟಾಗುವುದಿಲ್ಲ. ಇದರ ಬಗ್ಗೆ ರೈತರು ವಿಶೇಷವಾಗಿ ಮೇಳದಲ್ಲಿ ಮಾಹಿತಿ ಪಡೆಯುತ್ತಿದ್ದರು.

Writer - - ಬಾಬುರೆ​ಡ್ಡಿ ಚಿಂತಾಮಣಿ

contributor

Editor - - ಬಾಬುರೆ​ಡ್ಡಿ ಚಿಂತಾಮಣಿ

contributor

Similar News