ಆಸ್ಟ್ರೇಲಿಯದ ಟ್ವೆಂಟಿ-20 ತಂಡಕ್ಕೆ ಸ್ಮಿತ್, ವಾರ್ನರ್ ವಾಪಸ್

Update: 2019-10-26 05:50 GMT

ಅಡಿಲೇಡ್, ಅ.25: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಆಸ್ಟ್ರೇಲಿಯ ತಂಡವನ್ನು ಪ್ರಕಟಿಸಲಾಗಿದ್ದು, ಮೊದಲ ಪಂದ್ಯಕ್ಕೆ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಚುಟುಕು ಮಾದರಿ ಕ್ರಿಕೆಟ್‌ಗೆ ವಾಪಸಾಗಿದ್ದಾರೆ. ಈ ಇಬ್ಬರು ಆಟಗಾರರು ಮುಂದಿನ ವರ್ಷ ಸ್ವದೇಶದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ.

 ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಾರ್ನರ್ ಹಾಗೂ ಸ್ಮಿತ್ ಚೆಂಡು ವಿರೂಪಗೊಳಿಸಿದ ಆರೋಪದಲ್ಲಿ ಒಂದು ವರ್ಷಗಳ ಕಾಲ ನಿಷೇಧ ಎದುರಿಸಿದ್ದರು. ಇದೀಗ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ತಂಡಕ್ಕೆ ಮರು ಸೇರ್ಪಡೆಯಾಗಿದ್ದಾರೆ.

ಆಸ್ಟ್ರೇಲಿಯ ತಂಡ ಏಕದಿನ ಹಾಗೂ ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಿದ್ದರೂ ಈ ತನಕ ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸಲು ವಿಫಲವಾಗಿದೆ. 2010ರಲ್ಲಿ ಫೈನಲ್‌ಗೆ ತಲುಪಿರುವುದು ಆಸೀಸ್‌ನ ಉತ್ತಮ ಸಾಧನೆಯಾಗಿದೆ.

ಟ್ವೆಂಟಿ-20 ವಿಶ್ವಕಪ್ ಆಸ್ಟ್ರೇಲಿಯದ ಆತಿಥ್ಯದಲ್ಲಿ ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿದೆ. ಶ್ರೀಲಂಕಾ ವಿರುದ್ಧ ಸರಣಿಗೆ ಆಯ್ಕೆ ಮಾಡಿರುವ 14 ಸದಸ್ಯರ ತಂಡವನ್ನ್ನೆ ವಿಶ್ವಕಪ್‌ಗೆ ಆಯ್ಕೆ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿದೆ.

 ಆ್ಯರೊನ್ ಫಿಂಚ್ ನಾಯಕತ್ವವನ್ನು ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಚೆಂಡು ವಿರೂಪ ಘಟನೆಯಲ್ಲಿ ಭಾಗಿಯಾದ ಬಳಿಕ ಸ್ಮಿತ್‌ಗೆ ಈ ತನಕ ನಾಯಕತ್ವ ಜವಾಬ್ದಾರಿ ನೀಡಲಾಗಿಲ್ಲ.

ಸ್ಮಿತ್ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವಾರ್ನರ್ 5 ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದಾರೆ. ಆದರೆ ಅವರು ಟಿ-20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯದ ಪರ ಗರಿಷ್ಠ ಸ್ಕೋರರ್ ಆಗಿದ್ದಾರೆ.

ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಆ್ಯಂಡ್ರೂ ಟೈ, ಕೇನ್ ರಿಚರ್ಡ್‌ಸನ್ ಹಾಗೂ ಬಿಲ್ಲಿ ಸ್ಟಾನ್‌ಲೇಕ್ ಬೆಂಬಲ ನೀಡಲಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20 ಸರಣಿಗೆ ವೇಗದ ಬೌಲರ್ ಲಸಿತ್ ಮಾಲಿಂಗ್ ನಾಯಕತ್ವವಹಿಸಿಕೊಂಡಿದ್ದಾರೆ. ಹಿರಿಯ ಆಟಗಾರರಾದ ಕುಶಾಲ್ ಪೆರೇರ ಹಾಗೂ ನಿರೊಶನ್ ಡಿಕ್ವೆಲ್ಲಾ ತಂಡಕ್ಕೆ ವಾಪಸಾಗಿದ್ದಾರೆ.

ಪಾಕ್ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹೊಸ ಮುಖಗಳಾದ ಭಾನುಕ ರಾಜಪಕ್ಸ ಹಾಗೂ ಒಶಾಡ ಫೆರ್ನಾಂಡೊ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಆಸ್ಟ್ರೇಲಿಯದಲ್ಲಿ ಮಿಂಚಲು ಅವಕಾಶ ಕಲ್ಪಿಸಲಾಗಿದೆ.

►ಆಸ್ಟ್ರೇಲಿಯ ತಂಡ: ಆ್ಯರೊನ್ ಫಿಂಚ್(ನಾಯಕ), ಅಶ್ಟನ್ ಅಗರ್,ಅಲೆಕ್ಸ್ ಕಾರೆ, ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ಮೆಕ್‌ಡೆರ್ಮೊಟ್, ಕೇನ್ ರಿಚರ್ಡ್ಸ್‌ಸನ್, ಸ್ಟೀವ್ ಸ್ಮಿತ್, ಬಿಲ್ಲಿ ಸ್ಟಾನ್‌ಲೇಕ್, ಮಿಚೆಲ್ ಸ್ಟಾರ್ಕ್, ಅಶ್ಟನ್ ಟರ್ನರ್, ಆ್ಯಂಡ್ರೂ ಟೈ, ಡೇವಿಡ್ ವಾರ್ನರ್, ಆಡಮ್ ಝಾಂಪ.

►ಶ್ರೀಲಂಕಾ ತಂಡ: ಲಸಿತ್ ಮಾಲಿಂಗ(ನಾಯಕ), ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್, ದನುಷ್ಕಾ ಗುಣತಿಲಕ, ಅವಿಷ್ಕಾ ಫೆರ್ನಾಂಡೊ, ನಿರೊಶನ್ ಡಿಕ್ವೆಲ್ಲಾ, ದಸುನ್ ಶನಕ, ಶೆಹಾನ್ ಜಯಸೂರ್ಯ, ಭಾನುಕ ರಾಜಪಕ್ಸ, ಒಶಾಡ ಫೆರ್ನಾಂಡೊ, ವನಿಂದು ಹಸನರಂಗ, ಲಕ್ಷ್ಮಣ್ ಸಂಡಕನ್, ನುವಾನ್ ಪ್ರದೀಪ್, ಲಹಿರು ಕುಮಾರ, ಇಸುರು ಉದಾನ ಹಾಗೂ ಕಸುನ್ ರಜಿಥಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News