ಜೈಲಿಗೆ ಹೋಗಿ ಬಂದವರಿಗೆ ಅದ್ಧೂರಿ ಸ್ವಾಗತ ದುರದೃಷ್ಟಕರ: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ
ಬಳ್ಳಾರಿ, ಅ.26: ಹಿಂದಿನ ದಿನಗಳಲ್ಲಿ ಜೈಲಿಗೆ ಹೋದವರನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಇತ್ತು. ಈಗ ಜೈಲಿಗೆ ಹೋಗಿ ಬಂದವರಿಗೆ ಅದ್ಧೂರಿಯಾಗಿ ಸ್ವಾಗತಿಸುವಂತಹ ವಾತಾವರಣ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಮಾಜ ಬದಲಾಗಬೇಕಿದೆ. ಆಗ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವೆಂದು ತಿಳಿಸಿದರು.
ಜನರಲ್ಲಿ ದುರಾಸೆ, ಅಧಿಕಾರದ ಆಸೆ ಜಾಸ್ತಿಯಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಅಂತಾರೆ. ಅಧಿಕಾರ ಬಂದ ಕ್ಷಣದಿಂದಲೇ ಭ್ರಷ್ಟಾಚಾರ ಮಾಡಲು ಆರಂಭಿಸುತ್ತಾರೆ. ಜನಪರವಾದ ವ್ಯಕ್ತಿಯನ್ನು ಗೌರವಿಸೋಣ. ಆದರೆ, ಎಂತಹದ್ದೆ ಪರಿಸ್ಥಿತಿ ಬಂದರೂ ಭ್ರಷ್ಟರನ್ನು ಪೂಜೆ ಮಾಡಬಾರದು ಎಂದು ಅವರು ಹೇಳಿದರು.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಲಿಷ್ಠ ಲೋಕಪಾಲ್ ಬಿಲ್ ಯಾರಿಗೂ ಬೇಡವಾಗಿದೆ. ನಮ್ಮನ್ನು ಆಳುತ್ತಿರುವ ವ್ಯವಸ್ಥೆಯು ಈಗಿರುವ ಎಲ್ಲ ತನಿಖಾ ಸಂಸ್ಥೆಗಳನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.