ಗಂಭೀರ ಅಪರಾಧ ಪ್ರಕರಣ: ರೌಡಿಗೆ ಗುಂಡೇಟು, ಬಂಧನ

Update: 2019-10-26 12:24 GMT

ಬೆಂಗಳೂರು, ಅ.26: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ರೌಡಿ ಹರೀಶ್‌ನನ್ನು ಪಿಸ್ತೂಲಿನಿಂದ ಗುಂಡು ಹೊಡೆದು, ಬಂಧಿಸುವಲ್ಲಿ ಪೀಣ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ನಂದಿನಿ ಲೇಔಟ್‌ನ ವಿದ್ಯಾನಂದ ನಗರದ ನಿವಾಸಿ ಹರೀಶ್(23), ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಆ.30 ರಂದು ಪೀಣ್ಯದ ದಾಸರಹಳ್ಳಿ ಬಳಿ ಅಂಗಡಿಯೊಂದಕ್ಕೆ ನುಗ್ಗಿದ ಆರೋಪಿ ಮಾಲಕನ ಮೇಲೆ ಹಲ್ಲೆ ನಡೆಸಿ, ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಶೋಧ ನಡೆಸಿದ್ದರು.

ಅಲ್ಲಿಂದ ತಲೆಮರೆಸಿಕೊಂಡಿದ್ದ ಆರೋಪಿ ಹರೀಶ್, ಶುಕ್ರವಾರ ತಿರುಪತಿಯಲ್ಲಿರುವ ಬಗ್ಗೆ ಮಾಹಿತಿಯಾಧರಿಸಿ ಬಂಧಿಸಲಾಗಿದೆ. ಆದರೆ, ಕೃತ್ಯವೆಸಗಿದ ಸ್ಥಳದ ಮಹಜರುಗಾಗಿ ಕರೆದುಕೊಂಡು ವಾಪಸ್ ಬರುವಾಗ ಇಲ್ಲಿನ ಅಬ್ಬಿಗೆರೆಯ ಕೆರೆಯಂಗಳದ ಬಳಿ ಮೂತ್ರ ವಿಸರ್ಜನೆಯ ನೆಪ ಮಾಡಿದ್ದಾನೆ ಎನ್ನಲಾಗಿದೆ.

ಆತನನ್ನು ಕೆಳಗಿಳಿಸಿ ಪೊಲೀಸ್ ಸಿಬ್ಬಂದಿಗಳಾದ ಲಕ್ಷ್ಮೀ ನಾರಾಯಣ ಹಾಗೂ ರವಿ ಹಿಂದೆ ಹೋಗಿದ್ದು, ಸ್ವಲ್ಪ ದೂರ ಹೋದ ನಂತರ ಅವರಿಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ. ಆದರೂ, ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಸ್ವಯಂರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಅದು ಬಲಗಾಲಿಗೆ ತಗಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಆರೋಪಿ ವಿರುದ್ಧ ವಿವಿಧ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 10 ಪ್ರಕರಣಗಳು ದಾಖಲಾಗಿದ್ದವು. ಆರೋಪಿಯ ಅಪರಾಧ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು. ಹಲವು ಬಾರಿ ಜೈಲಿಗೆ ಹೋಗಿ ಬಿಡುಗಡೆಯಾಗಿದ್ದರೂ ಮತ್ತೆ ಹಳೇ ಚಾಳಿ ಮುಂದುವರೆಸಿದ್ದ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News