ವಿಶ್ವ ಮಾನವತೆ ಸಾರಿದ ಕುವೆಂಪು ವಿಚಾರಧಾರೆಗಳು

Update: 2019-10-26 13:32 GMT

ಕನ್ನಡಕ್ಕೆ ಪ್ರಥಮ ‘ಜ್ಞಾನಪೀಠ ಪ್ರಶಸ್ತಿ’ ತಂದು ಕೊಟ್ಟ ರಾಷ್ಟ್ರ ಕವಿ ಕುವೆಂಪು ಜನಿಸಿದ್ದು 1904 ಡಿ.29ರಂದು. 1929ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಮೇಜರ್ ತೆಗೆದು ಕೊಂಡು ಪದವಿ ಪಡೆದ ಅವರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿ ನಂತರ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಕೊನೆಗೆ 1956ರಲ್ಲಿ ಮೈಸೂರು ವಿವಿಯ ಉಪಕುಲಪತಿಗಳಾಗಿ ನೇಮಕಗೊಂಡರು.

20ನೇ ಶತಮಾನದ ಕನ್ನಡ ಸಾಹಿತ್ಯದ ಪ್ರಮುಖ ಕವಿಯಾಗಿ ತಮ್ಮ ಅಗಾಧ ಸಾಹಿತ್ಯ ಕೃಷಿಯಿಂದ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು. ಶ್ರೀ ರಾಮಾಯಣ ದರ್ಶನಂ ಎಂಬ ಮಹಾ ಕಾವ್ಯ ಹಾಗೂ ‘ಪಾಂಚ ಜನ್ಯ’, ’ನವಿಲು’, ‘ಕೋಗಿಲೆ’, ‘ಪಕ್ಷಿ ಕಾಶಿ’ ಹಾಗೂ ಮತ್ತಿತರ ಕವನ ಸಂಕಲನಗಳು ಹಾಗೂ ‘ಬೆರಳ್‌ಗೆ ಕೊರಳ್’, ‘ಯಮನ ಸೋಲು’, ‘ಮಹಾರಾತ್ರಿ’, ‘ಶೂದ್ರ ತಪಸ್ವಿ’ ಮುಂತಾದ ನಾಟಕಗಳು ನೆನಪಿನ ದೋಣಿ ಎಂಬ ಆತ್ಮಚರಿತ್ರೆ, ಅಲ್ಲದೇ ‘ಕಾನೂನು ಸುಬ್ಬಮ್ಮ ಹೆಗ್ಗಡತಿ’, ‘ಮಲೆಗಳಲ್ಲಿ ಮದುಮಗಳು’ ಎಂಬ ಎರಡು ಬೃಹತ್ ಕಾದಂಬರಿಗಳನ್ನು ರಚಿಸಿದ್ದಾರೆ. ಭಾಷೆ, ಜಾತಿ, ಜನಪದೀಯ ನೆಲೆಗಳನ್ನು ಮುಂದಿಟ್ಟಕೊಂಡು ತುಂಗಾನದಿ ತೀರದ ಮಲೆನಾಡಿ ನಲ್ಲಿ ನಡೆಯುವ ಘಟನಾವಳಿಗಳ ಮೂಲಕವೇ ತಮ್ಮ ಸುತ್ತಲಿನ ನಿರ್ದಿಷ್ಟ ಭೌಗೋಳಿಕ ಪರಧಿಯೊಳಗಿದ್ದ ಸಮಾಜದಲ್ಲಿ ತಮಗೆ ತಟ್ಟಿದ ಅಂಶಗಳನ್ನು ವಿವಿಧ ದೃಷ್ಟಿಕೋನಗಳಿಂದ ಪುನರಾವಲೋಕಿಸಿ ಆ ಕಾಲದ ಒಕ್ಕಲಿಗರ ಮನೋಲೋಕವನ್ನು ಒಂದು ಸಾಮುದಾಯಿಕ ಅನುಭವವಾಗಿ ಕಾಣಿಸುತ್ತಾರೆ. ಅವರ ಕಾದಂಬರಿಗಳು ಇಂದಿಗೂ ಮಹತ್ವದವೇ ಆಗಿವೆ. ಹೀಗೆ ವಿಫುಲ ಸಾಹಿತ್ಯ ಪ್ರಕಾರಗಳಲ್ಲಿ ಅಪ್ರತಿಮ ಪ್ರತಿಭೆ ಮೆರೆದಿದ್ದಾರೆ. ರಾಷ್ಟ್ರಕವಿ ಬಿರುದಲ್ಲದೇ ಅವರಿಗೆ ಸಂದ ಪ್ರಶಸ್ತಿಗಳೂ ಅಪಾರ. ‘ಕರ್ನಾಟಕ ರತ್ನ’, ಪದ್ಮ ಭೂಷಣ’, ‘ಜ್ಞಾನಪೀಠ ಪ್ರಶಸ್ತಿ’ಯಂತಹ ಪ್ರಮುಖ ಗೌರವಗಳೂ ಸಂದಿವೆ.

ಸುಮಾರು 1957ರಲ್ಲೇ ಧಾರವಾಡದಲ್ಲಿ ಜರುಗಿದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ತಮ್ಮ 44 ಪುಟಗಳ ಭಾಷಣದಲ್ಲಿ ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸಬೇಕು ವಿನಃ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಅಗತ್ಯವಿಲ್ಲ ಎಂದು ಒತ್ತಿ ಪ್ರತಿಪಾದಿಸಿದ್ದರು. ಹಾಗೇನೇ ಯುವ ಜನಾಂಗಕ್ಕೆ ಕನ್ನಡ ಪುನರುಜ್ಜೀವನಕ್ಕಾಗಿ ಸಾಹಿತ್ಯ ನಿರ್ಮಾಣ ಹಾಗೂ ಕನ್ನಡ ಭಾಷೆಗಾಗಿ ದೀಕ್ಷೆ ಕೈಗೊಳ್ಳಬೇಕು ಎಂದು ಉಪದೇಶಿಸಿದ್ದರು. ಇಂಗ್ಲಿಷಿನ ಪ್ರಾಬಲ್ಯದಿಂದ ಕನ್ನಡ ಭಾಷೆ ನಾಶವಾಗಿ ಹೋಗಬಹುದೆಂಬ ಅಪಾಯ ಅಂದೇ ಅವರು ಮನಗಂಡಿದ್ದರು. ಇತ್ತೀಚಿನ ವರದಿ ಪ್ರಕಾರ 12,000ದಷ್ಟು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿ ಹೋಗಿವೆ ಎಂಬ ನೆಪದಿಂದ ಪ್ರಾಥಮಿಕ ಹಂತದಿಂದಲೇ 1 ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ. ಮಾತೃ ಭಾಷೆಯಲ್ಲಿ ಶಿಕ್ಷಣ ಇಲ್ಲದ ಕಾರಣ ಗ್ರಾಮೀಣ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿ ಬಿಡಬಹುದಾದ ಅಪಾಯವಿದೆ. ಅಂದು ಕುವೆಂಪು ಕನ್ನಡ ಭಾಷೆಗೆ ತೋರಿದ ಕಾಳಜಿ ಇಂದಿಗೂ ಪ್ರಸ್ತುತ.

ಇನ್ನು ಯುದ್ಧದ ಭೀಕರತೆಯನ್ನು ಅನಾವರಣಗೊಳಿಸುವ ಅವರ ‘‘ಸ್ಮಶಾನ ಕುರುಕ್ಷೇತ್ರಂ’’ ನಾಟಕ ಅವರ ಕವಿ ಮನಸ್ಸು ಅದೆಂತ ದಾರ್ಶನಿಕ ಚಿಂತನೆಯನ್ನು ತನ್ನ 27ನೇ ವಯಸ್ಸಿನಲ್ಲೇ ಮಾಡಿತೆಂಬುವುದನ್ನು ತೋರಿಸಿಕೊಡುತ್ತದೆ. ನಾಟಕದ ದೃಶ್ಯ ಹೀಗಿದೆ, ‘‘18 ದಿನಗಳ ಕುರುಕ್ಷೇತ್ರ ಮಹಾ ಸಂಗ್ರಾಮದ ರೌದ್ರತೆ ಮುಗಿದಿದೆ. ಆ ಶತಯೋಜನ ವಿಸ್ತಾರದ ಕುರುಕ್ಷೇತ್ರ ಯುದ್ಧ ಭೂಮಿ ಇಂದು ಗೋಳಿಡುವ ಭೀಬತ್ಸ ಸ್ಮಶಾನ. ಅಕ್ಷೋಹಣಿ ಲೆಕ್ಕದ ಯೋಧರ, ಆನೆ-ಕುದುರೆಗಳ ಕಳೆಬರಗಳು ರಕ್ತದ ಕೆಸರಲ್ಲಿ ಮುದ್ದೆ ಮುದ್ದೆಯಾಗಿ ಕೊಳೆಯುತ್ತಾ ಬಿದ್ದಿವೆ. ಜೀವವಿನ್ನೂ ಉಳಿದಿರುವ ಭಗ್ನ ಶರೀರಗಳಿಂದ ಕ್ಷೀಣ, ಆರ್ತದ್ವನಿಗಳು, ಶವಗಳನ್ನು ತಿನ್ನಲು ಮಾಂಸಹಾರಿ ಭಕ್ಷಣೆಯ ವಿಕಾರ, ವಿನೋದ ಚೀರಾಟಗಳು ಕೇಳಿಬರುತ್ತವೆ. ದುಃಖದ ಕಡಲನ್ನು ಕುಲಕುವಂತೆ ಯುದ್ಧದಲ್ಲಿ ಮಡಿದವರ ಬಂಧುಗಳು ತಮ್ಮ ತಮ್ಮವರ ದೇಹಗಳನ್ನು ಅರಸುತ್ತಿದ್ದಾರೆ. ಅಳುವೇ ಆಳುತ್ತಿರುವ ದುಃಖದ ಸಾಮ್ರಾಜ್ಯವದು. ‘‘ಅಭಿಮಾನಧನ’’ ಎಂದುಕೊಂಡು, ಎನಿಸಿಕೊಂಡು ಮೆರೆದ ರಾಜಾಧಿರಾಜ ದುರ್ಯೋಧನ ತೊಡೆಯುಡಿದುಕೊಂಡು ನಜ್ಜುಗುಜ್ಜಾಗಿ ನರಳುತ್ತಾ ಬಿದ್ದಿದ್ದಾನೆ. ರಾಜಾಧಿರಾಜರೆಂದು ಮೆರೆಯುತಿದ್ದವರೆಲ್ಲ ಸಾವು-ಸೋಲುಗಳ ಅವಮಾನದ ನರಕದಲ್ಲಿ ಒದ್ದಾಡುತ್ತಿದ್ದಾರೆ, ಕೊನೆಯುಸಿರೆಳೆಯುತ್ತಿದ್ದಾರೆ. ಆಗ ರಂಗ ಪ್ರವೇಶ ಮಾಡುತ್ತಾನೆ ಮಾನ ಮುಖಭಾವದ ದ್ವಾಪರ ಯುಗಪುರುಷ ಇದೀಗ ಅವನ ಯುಗಾವಧಿ ಮುಗಿದು ಹೋಗಿದೆ. ಮುಂಬರುವ ಕಲಿಯುಗಾಧಿಪತಿಗೆ ಜಗತ್ ಪರಿಪಾಲನೆಯ ಹೊಣೆಯನ್ನು ವರ್ಗಾಯಿಸುವ ಸಮಯ. ಆದರೆ ದ್ವಾಪರ ಯುಗಾಧಿಪತಿಯ ಎದೆಯಲ್ಲಿ ಕಡು ವಿಷಾದ ಮಡುವು ಗಟ್ಟಿದೆ.ಒಂದು ಯುಗದ ಸಮಸ್ತ ಸಂಸ್ಕೃತಿ, ಸಿದ್ಧಿ, ಸಾಧನೆಯೆಲ್ಲಾ ಈ 18 ದಿನಗಳ ರಣ-ರಕ್ಕಸನ ಆರ್ಭಟದಿಂದ ನಾಶವಾಗಿ ಹೋಗಿದೆ. ತಾನು ಈ ಭೂಮಿಯಿಂದ ಕಾಲ್ತೆಗೆಯುವ ಮುನ್ನ ಈ ರಕ್ತದ ಹೊಳೆಯಲ್ಲಿ ಕಾಲು ತೊಳೆದು ಹೋಗುವಂತಾಯಿತೇ? ಎಂಬ ನೋವಿನ ಜತೆಗೆ ಮುಂಬರುವ ಕಲಿಯುಗಾಧಿಪತಿಗೆ ತನ್ನ ಯುಗದ ಮಹಾ ಕೃತಿಯೆಂದು ಯಾನ ವಸ್ತುವನ್ನು ವ್ಯಕ್ತಿಯನ್ನು ಒಪ್ಪಿಸಿ ಹೋಗುವುದು? ಎಂಬ ಸಂಕಟ! ಇಡೀ ಯುಗವನ್ನೇ ಬೆಳಗಬಲ್ಲ, ತೇಜಸ್ಸಿನ ಎಷ್ಟೋ ಮಹಾನ್ ವ್ಯಕ್ತಿತ್ವಗಳು ತಮ್ಮದೊಂದು ದೌರ್ಬಲ್ಯಕ್ಕೆ, ಕ್ಷುದ್ರತೆಗೆ, ಅನಿವಾರ್ಯ ಇಬ್ಬಂಧಿತ್ತನಕ್ಕೆ ಎಲ್ಲರೂ ಬಲಿಯಾಗಿ ನಾಶವಾಗಿ ಹೋಗಿದ್ದಾರೆ. ಏನುಳಿದಿದೆ ತಾನಾಳಿದ ದೀರ್ಘ ದ್ವಾಪರ ಯುಗದಲ್ಲಿ? ಕೊಳೆತ ಶವಗಳ, ಮುರಿದ ಶಸ್ತ್ರಾಸ್ತ್ರಗಳ ಅಸಹ್ಯವನ್ನು ಯಾವ ಮುಖವಿಟ್ಟು ಕಲಿ ಪುರುಷನೆ ಕೈಗಿಡಲಿ? ಎಂಬ ದಿಟ್ಟ ನಿಟ್ಟುಸುರು ಹಬೆಯುರುಬುತ್ತಿದೆ ಅವನು ನಿಡಿದಾದ ನಿಶ್ವಸನಗಳಲ್ಲಿ ಆಗ ರಂಗ ಪ್ರವೇಶ ಮಾಡುತ್ತಾನೆ ಭರವಸೆಗಳ ತವನಿಧಿಯಂತಿರುವ ತೇಜಸ್ವೀ ಕಲಿಪುರುಷ.

  ದ್ವಾಪರ ಯುಗಾಧಿಪತಿ-‘‘ಕಲಿದೇವ: ದ್ವಾಪರನು ಮುಂಬರುವ ಯುಗಪುರುಷನನ್ನು ಈ ಮಸಣದಲ್ಲಿ ಎದುರುಗೊಳ್ಳುವಂತೆ ಆಯಿತೇ? ನಿನಗೆ ಈ ಸುಡುಗಾಡಿನಲ್ಲಿ ಪಟ್ಟಾಭಿಷೇಕವಾಗುವ ಹಾಗಾಯ್ತೇ ಎಷ್ಟೋ ವರುಷಗಳಿಂದ ಗಳಿಸಿದ್ದ ಸಂಸ್ಕೃತಿಯ ಶ್ರೇಷ್ಠತೆ ಎಲ್ಲ ನಾಶವಾಗಿ ನನ್ನ ಸಾಮ್ರಾಜ್ಯ ಮರಳಿಸುವ ಸಮಯದಲ್ಲಿ ಯಾವ ಹೆಮ್ಮೆಯಲಿ ಯಾವ ಮೆಚ್ಚುಗೆಯ ವಸ್ತುವನ್ನು ಎನ್ನ ಕೃತಿ ಎಂದು ತೋರಿಸಲಿ ಅಳಿದ ವೀರ ಸೈನಿಕರ ಹೆಣಗಳನ್ನು ನಿನಗೆ ಕೊಟ್ಟು ಹೋಗಲೇ?ನಿನಗೆ ಅದ್ಯಾವ ಮಂಗಳ ಸಿರಿಯನ್ನೀಯಲಿ ಹೇಳು,’’

ಕಲಿಪುರುಷ- ‘‘ ದ್ವಾಪರ ದೇವಾ! ನೀನು ಹೀಗೇಕೆ ದುಃಖ ಪಡುತ್ತಿರುವೆ? ಶಾಂತನಾಗು ನೀನು ಕೊಟ್ಟದ್ದನ್ನೇ ಸಂತೋಷದಿಂದ ಕೈಕೊಂಡು ನನ್ನ ಕೆಲಸವನ್ನು ನಾನು ಮಾಡುವೆ. ರಸಪೂರ್ಣ ಶೂನ್ಯದಿಂದ ಮೂಡುವುದು ಈ ವಿಶ್ವ ಅದರಲ್ಲೇ ತಾನು ವಿಲೀನವಾಗಿ ಕರಗುವುದು. ಆದರೇನು? ಮರಳಿ ಬೇರೆ ಆಕೃತಿ ತಳೆದು ಬೇರೊಂದು ಕಟ್ಟಳೆಗೆ ತಲೆಬಾಗಿ ಬೇರೊಂದು ಕಾಲದಲಿ ಮೂಡುವುದು. ಲೀಲೆ ಎಂಬುದೆಲ್ಲಾ ಮೂಡುವುದು ಮುಳುಗುವುದರಲ್ಲೇ ಇದೆ. ಅದಕ್ಕೆ ಮರಗುವುದು ಏಕೆ? ಎಂದು ಹೇಳಿದಾಗ ದ್ವಾಪರ ಪುರುಷನು ತನ್ನ ಯುಗದ ತೇಜೋವಂತ ವ್ಯಕ್ತಿತ್ವಗಳಾದ ಭೀಷ್ಮ, ದ್ರೋಣ, ಕರ್ಣಾದಿಗಳು ಹಾಗೂ ದುರ್ಯೋಧನನಂತಹ ಶಿಖರ ಸ್ವಾಭಿಮಾನಿಗಳು ಮತ್ತೆ ಕಲಿಯುಗದಲಿ ಸಂಭವಿಸುತ್ತಾರೆಯೇ ಎಂದು ದ್ವಾಪರ ಪ್ರಶ್ನಿಸಿದರೆ ಅವರಿಗೂ ಮಿಗಿಲಾದವರು ಜನಿಸುತ್ತಾರೆಂದು ಕಲಿಪುರುಷನ ಭರವಸೆ. ದ್ರೋಣನಷ್ಟು ಪ್ರಾವೀಣ್ಯವಿರುವವರು ಹುಟ್ಟುತ್ತಾರೆಯೇ ಪ್ರಶ್ನಿಸಿದಾಗ ಕಲಿಪುರುಷ ಹೇಳುತ್ತಾನೆ -‘ಅಷ್ಟೇ ಯಾಕೆ? ನಿಡಿಲ್ಗಳನ್ನೇ ನಿರ್ಮಿಸುವವನು ಗ್ರಹ- ತಾರೆಗಳನ್ನು ಅಳೆದು ತೂಗುವವರು ಬರುತ್ತಾರೆ’’ ಎನ್ನುತ್ತಾನೆ ದ್ವಾಪರ. ‘‘ಆದರೆ ನಿನ್ನ ಯುಗದ ಜನರು ದೈಹಿಕವಾಗಿ ಕುಬ್ಜರಾಗಿರುತ್ತಾರೆಂದು ಶಾಸ್ತ್ರ ಸಿದ್ಧವಾಗಿರುವುದಲ್ಲ? ಅದಕ್ಕೆ ಕಲಿ ವಿವರಿಸುತ್ತಾನೆ ‘ ಹೌದು ನಿಜ, ಕುಬ್ಜರಾದರೇನು? ದೀರ್ಘ ದೇಹಗಳಾದ ಪೂರ್ವಿಕರ ಭುಜದ ಮೇಲೆ ಕುಳಿತು ಪೂರ್ವ ಯುಗಗಳ ಮನುಷ್ಯರಿಗಿಂತಲೂ ಎತ್ತರದಲ್ಲಿರುತ್ತಾರೆ. ವಿಸ್ತಾರ ದೃಷ್ಟಿಯನ್ನು ಪಡೆಯುತ್ತಾರೆ. ಕಲಿಯ ಈ ಮಾತಿನಲ್ಲಿ ಒಂದು ಪರಂಪರೆಯ ಹೆಗಲ ಮೇಲೆ ಕೂತ ಮನುಷ್ಯನಿಗೆ ತನ್ನಿಂದ ತಾನೆ ಒಂದು ಉನ್ನತಿ ಲಭ್ಯವಾಗುತ್ತದೆ ಎನ್ನುವ ಅಭಿಪ್ರಾಯ ಇಂಗಿತವಾಗಿದೆ. ಪೂರ್ವಗಾನುಭವದ ತಳಹದಿಯ ಮೇಲೆಯೇ ಬರುವ ಕಾಲದ ಭವ್ಯ ಮಂದಿರ ನಿರ್ಮಿಸುತ್ತೇನೆ ಎನ್ನುತ್ತಾನೆ ಕಲಿಪುರುಷ. ಇಲ್ಲಿಯ ‘‘ಸ್ಮಶಾನಂ ಕುರುಕ್ಷೇತ್ರಂ’’ ನಾಟಕದ ಮೂಲಕ ಅವರ ದಾರ್ಶನಿಕ ಚಿಂತನೆ ತಲೆಮಾರಿನಲ್ಲಿ ಆದ ಪರಂಪರೆಯ ಅವಸಾನ ಮತ್ತೊಂದು ತಲೆಮಾರಿನಲ್ಲಿ ಬರುವ ಬದಲಾವಣೆಯ ಬೆಳವಣಿಗೆ ಎಂಬ ಪ್ರಕ್ರಿಯೆಯ ಮೂಲಕ ನಮಗೆ ಮನಗಾಣಿಸುತ್ತಾರೆ.

ಇದೇ ವಿಚಾರವನ್ನು ಇತಿಹಾಸಕಾರ್ತಿ ರೋಮಿಲಾ ಥಾಪರ್ ಇನ್ನೊಂದು ರೀತಿಯಲ್ಲಿ ವಿಷದಪಡಿಸುತ್ತಾರೆ. ಪರಂಪರೆ ಅನ್ನುವುದು ವರ್ತಮಾನದ್ದೇ ಒಂದು ಅನ್ವೇಷಣೆ. ನಮ್ಮ ಸದ್ಯದ ಬದುಕಿನ ಅಗತ್ಯಕ್ಕೆ ತಕ್ಕಂತೆ ನಮಗೆ ಇಷ್ಟ ಕಂಡ ಯಾವುದನ್ನೇ ಎತ್ತಿ ಕೊಳ್ಳುವಂತದ್ದು. ಅದಕ್ಕೊಂದು ಅಧಿಕೃತ ಸ್ವರೂಪ ಕೊಡುವುದು. ಅದು ಬೆಳವಣಿಗೆ, ಪರಿವರ್ತನೆ ಮತ್ತು ನಾಶಗಳನ್ನು ತನ್ನ ಒಡಲಲ್ಲಿಯೇ ಕಟ್ಟಿ ಕೊಂಡಿರುವ ಒಂದು ಪ್ರಕ್ರಿಯೆ ಎನ್ನುತ್ತಾರೆ ಅವರು. ತಮ್ಮ ಕಾಲದಲ್ಲೇ ಇಂತಹ ವಿಚಾರ ಎತ್ತಿಕೊಂಡು ಬರೆದ ಕುವೆಂಪು ಅವರ ಚಿಂತನೆಗಳು ನಮಗೆ ಈಗಲೂ ಪ್ರಸ್ತುತವಾಗಿದೆ. ಭಾರತೀಯ ಯುವ ಜನಾಂಗವನ್ನು ಮತ ಧರ್ಮಗಳ ರಾಜಕೀಯ ದಾಳದಿಂದ ಹೊರಬನ್ನಿ ಎಂದು ಎಚ್ಚರಿಸಿದವರು

‘‘ಆ ಮತ, ಈ ಮತ ಹಳೆ ಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕೆ

ಓ ಬನ್ನಿ ಸೋದರರೆ ವಿಶ್ವ ಪಥಕೆ’’

ಎಂದು ಸಹಬಾಳ್ವೆಯ ಜೀವನ ದೃಷ್ಟಿ ಕಟ್ಟಿ ಕೊಡುತ್ತಾರೆ.

Writer - ಕೆ.ತಾರಾಭಟ್

contributor

Editor - ಕೆ.ತಾರಾಭಟ್

contributor

Similar News