ಬಂಡಾಯ ಕಲಿಸಿದ ಜೀವನ ಪಾಠ!

Update: 2019-10-26 13:39 GMT

ಆಗಷ್ಟೇ ಸೆಮಿನರಿಯ 2ನೇ ವರ್ಷಕ್ಕೆ ಕಾಲಿಟ್ಟಿದ್ದೆ. ಅಷ್ಟೊತ್ತಿಗಾಗಲೇ ಸೆಮಿನರಿಯ ವಾತಾವರಣಕ್ಕೆ ಒಗ್ಗಿಕೊಂಡಿದ್ದ ನನಗೆ ಒಂದೆರಡು ಪದ ಇಂಗ್ಲಿಷ್ ಮಾತಾಡುವಷ್ಟರಲ್ಲಿ ಯೌವನದ ಮದ ನೆತ್ತಿಗೇರಿತ್ತು. ಯೌವನವೇ ಹಾಗೆ ಕಣ್ರಿ! ಒಂಥರಾ ಹುಚ್ಚು ಕುದುರೆಯ ಹಾಗೆ ಲಂಗುಲಗಾಮಿಲ್ಲದೆ ಎತ್ತೆಂದರತ್ತ ಓಡುತ್ತಿರುತ್ತದೆ. ಮಿತಿ ಮೀರುವ ಹೊತ್ತಿಗೆ ಲಗಾಮು ಹಾಕುವವರಿಲ್ಲದಿದ್ದರೆ ಬದುಕು ಮೂರಾಬಟ್ಟೆ ಆಗೋದಂತೂ ಗ್ಯಾರಂಟಿ.

ಅದು ಶೈಕ್ಷಣಿಕ ವರ್ಷದ ಪ್ರಾರಂಭ. ನಮ್ಮ ಸೆಮಿನರಿಯ ಕೆಲವು ಪಾದ್ರಿಗಳಿಗೆ ವರ್ಗವಾಗಿ ಮತ್ತೂ ಕೆಲವು ಪಾದ್ರಿಗಳು ಅವರ ಸ್ಥಾನಗಳನ್ನು ತುಂಬುತ್ತಿದ್ದರು. ವರ್ಗವಾದ ಪಾದ್ರಿಗಳಲ್ಲಿ ನಮ್ಮ ಸೆಮಿನರಿಯ ಅಡ್ಮಿನಿಸ್ಟ್ರೇಟರ್ ಫಾದರ್ ಕ್ಲಮೆಂಟ್ ಕೂಡ ಇದ್ದರು. ಕ್ಲಮೆಂಟ್ ತೀರಾ ಸರಳ ಸ್ವಭಾವದ, ಥೇಟ್ ಮಂಗಳೂರು ಗ್ರಾಮೀಣ ಸೊಗಡಿನ ವ್ಯಕ್ತಿ. ಇದ್ದವರಲೆಲ್ಲಾ ಇವರೇ ನನಗೆ ಅಚ್ಚುಮೆಚ್ಚು. ಇವರ ಸ್ಥಾನಕ್ಕೆ ಅಂದು ಬಂದವರೇ ಮಂಗಳೂರಿನವರೇ ಆದ ಫಾದರ್ ಸೈಮನ್.

ನಮ್ಮ ಕ್ರೈಸ್ತ ಪಾದ್ರಿಗಳಲ್ಲಿ ಅದರಲ್ಲೂ ಆಗಷ್ಟೇ ಗುರುದೀಕ್ಷೆ ಸ್ವೀಕರಿಸಿ, ತಮ್ಮ ಮೊದಲ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಯುವಪಾದ್ರಿಗಳಲ್ಲಿ ಒಂದು ರೀತಿಯ ಹುಮ್ಮಸ್ಸಿರುತ್ತದೆ. ಇವರ ಜವಾಬ್ದಾರಿ ಗುರುಮಠದ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವುದಾದರಂತೂ, ಅವರ ಹುಮ್ಮಸ್ಸಿನ ಜೊತೆ ಜೊತೆಗೆ ಎಲ್ಲವೂ ತಮ್ಮ ಆದೇಶದಂತೆ, ಯಾವುದೇ ಕೊಂಕಿಲ್ಲದೆ ನಡೆಯಬೇಕೆಂಬ ಇರಾದೆ ಇರುತ್ತದೆ. ಅದೊಂದು ರೀತಿಯ ಪರ್ಫೆಕ್ಷನಿಸ್ಟ್ ಮನೋಭಾವ. ಆರಂಭದಲ್ಲಿ ಉತ್ತುಂಗದಲ್ಲಿರುವ ಈ ಮನೋಭಾವ ಕ್ರಮೇಣ ವಯಸ್ಸು ಮಾಗಿದಂತೆ ಹದವಾಗಿ ಬಿಡುತ್ತದೆ.

ಫಾದರ್ ಕ್ಲಮೆಂಟರ ಸ್ಥಾನಕ್ಕೆ ಹೊಸದಾಗಿ ನೇಮಕಗೊಂಡಿದ್ದ ಫಾದರ್ ಸೈಮನ್ ಕೂಡ ಯುವ ಪಾದ್ರಿಯೇ. ಅವರ ಕಟ್ಟುನಿಟ್ಟಿನ ಸ್ವಭಾವದ ಹಿಂದೆ ನಮ್ಮನ್ನು ಶಿಸ್ತಿನ ಹುಡುಗರನ್ನಾಗಿ ಮಾಡುವ ಒಳ್ಳೆಯ ಉದ್ದೇಶವಿದ್ದರೂ, ಅವರು ಶಿಸ್ತುಕ್ರಮಗಳನ್ನು ಜಾರಿಗೊಳಿಸುತ್ತಿದ್ದ ಪರಿ ನನಗೆ ಒಂದಿಷ್ಟೂ ಹಿಡಿಸಲಿಲ್ಲ. ನನಗೆ ಮಾತ್ರವಲ್ಲ ನನ್ನ ಓರಗೆಯ ಅನೇಕ ಹುಡುಗರಿಗೂ ಅವರ ಈ ಒಂದು ನಿಯಮ ಸುತಾರಾಂ ಇಷ್ಟವಿರಲಿಲ್ಲ. ಈ ನಡುವೆ ನಡೆದ ಆ ಒಂದು ಘಟನೆ ನನ್ನ ಸೆಮಿನರಿ ಜೀವನದುದ್ದಕ್ಕೂ ನಾನೊಬ್ಬ ರೆಬೆಲ್ ಎನ್ನುವ ಹಣೆಪಟ್ಟಿ ಅಂಟಿಸಿ ಬಿಟ್ಟಿತ್ತು.

ಫುಟ್ಬಾಲ್ ಆಡಿ, ಸ್ನಾನ ಮುಗಿಸಿ, ಆರು ಗಂಟೆಗೆ ಸರಿಯಾಗಿ ಸ್ಟಡಿ ಹಾಲಿನಲ್ಲಿ ಎಲ್ಲರೂ ತಮ್ಮ ಟೇಬಲ್ಲುಗಳಲ್ಲಿ ಓದುತ್ತಾ ಕುಳಿತಿರಬೇಕು. ಇದು ಸೆಮಿನರಿಯ ಅತಿ ಮುಖ್ಯ ನಿಯಮಗಳಲ್ಲೊಂದು. ನಮ್ಮ ಸೆಮಿನರಿಯಲ್ಲಿ ಪ್ರಾರ್ಥನೆ ಹಾಗೂ ಓದುವ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇರಲಿಲ್ಲ. ಹೀಗಿರ ಬೇಕಾದರೆ ಒಂದು ದಿನ ನಾನು ಸ್ನಾನ ಮುಗಿಸಿ ಕೆಳಗಿನ ಸ್ಟಡಿ ಹಾಲಿಗೆ ಬರುವಷ್ಟರಲ್ಲಿ ಒಂದು ನಿಮಿಷ ತಡವಾಗಿತ್ತು. ಗಮನಿಸಿ! ಕೇವಲ ಒಂದು ನಿಮಿಷ ತಡವಾಗಿತ್ತು. ಮೆಟ್ಟಿಲುಗಳ ಬಳಿಯೇ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಫಾದರ್ ಸೈಮನ್, ನಾನು ಕೆಳಗಿಳಿದು ಬರುವಾಗ ತಡೆದು

‘‘ಅಜಯ್, ಈಗ ಟೈಮೆಷ್ಟು?’’ ಎಂದು ಕೇಳಿದರು. ನಾನು ವಿಚಲಿತನಾಗದೆ

‘‘ಆರು ಗಂಟೆ ಒಂದು ನಿಮಿಷ ಫಾದರ್’’ ಎಂದೆ.

‘‘ಯು ನೋ ವಾಟ್ ಇಸ್ ದ ಪನಿಷ್ಮೆಂಟ್ ಫಾರ್ ಬಿಇಂಗ್ ಲೇಟ್? You know what is the punishment for being late"

"I don't know Father! ಕೇವಲ ಒಂದು ನಿಮಿಷ ಲೇಟ್ ಆಗಿದೆ ಎಂದೆ. ನನ್ನ ಧ್ವನಿಯಲ್ಲಿ ನನ್ನದೇನೂ ತಪ್ಪಿಲ್ಲ ಎಂಬ ಅಹಂ ಇತ್ತು.

"Kneel down Here” (ಇಲ್ಲೇ ಮಂಡಿಯೂರು) ಎಂದರು ಫಾದರ್ ಸೈಮನ್. ಅಷ್ಟೊತ್ತಿಗಾಗಲೇ ನನ್ನ ಈ ದುರ್ವರ್ತನೆಯಿಂದ ಕುಪಿತರಾಗಿದ್ದರು.

ಸಮಯಕ್ಕೆ ಮುಂಚಿತವಾಗಿ ಬಂದು ತಮ್ಮ ಟೇಬಲ್ಲುಗಳಲ್ಲಿ ಕುಳಿತಿದ್ದ ನನ್ನ ಸಹಪಾಠಿಗಳು, ಮೆಟ್ಟಿಲುಗಳ ಬಳಿ ನಡೆಯುತ್ತಿದ್ದ ನಾಟಕವನ್ನು ಕಿಟಕಿಗಳ ಮೂಲಕ ಕಣ್ತುಂಬಿಕೊಳ್ಳುತ್ತಿದ್ದರು. ಅವರಿಗೆ ಇದೊಂದು ಬಿಟ್ಟಿ ಮನರಂಜನೆ. ಆದರೆ ನನಗೆ ಇದು ನನ್ನ ಮರ್ಯಾದೆಯ ಹಾಗೂ ಅದಕ್ಕಿಂತ ಮಿಗಿಲಾಗಿ ಸ್ವಾಭಿಮಾನದ ಪ್ರಶ್ನೆ. ಆ ಕ್ಷಣದಲ್ಲಿ ಮೆಟ್ಟಿಲುಗಳ ಬಳಿ, ಅದರಲ್ಲೂ ಓಡಾಡುವ ಜಾಗದಲ್ಲಿ ಹೀಗೆ ಎಲ್ಲರ ಮುಂದೆ ಮೊಣಕಾಲೂರುವ ಶಿಕ್ಷೆಯೆಂದರೆ ಯಾರಿಗೆ ತಾನೇ ಸಹಿಸಲಾದೀತು? ಒಂದೂ ಕ್ಷಣ ಯೋಚಿಸದೆ...

‘‘ಸಾಧ್ಯವಿಲ್ಲ ಫಾದರ್! ನಾನು ಮೊಣಕಾಲೂರುವುದಿಲ್ಲ’’ ಎಂದು ಫಾದರ್ ಸೈಮನ್‌ರ ಮುಖದ ನೇರಕ್ಕೆ ಹೇಳಿಬಿಟ್ಟೆ.

‘‘ನಾನೊಬ್ಬ ಪಾದ್ರಿ ಎನ್ನುವ ಕನಿಷ್ಠ ಗೌರವವೂ ನಿನಗಿಲ್ಲ’’ ಎಂದು ಗದರಿದರು ಫಾದರ್ ಸೈಮನ್.

"I cannot Father! ಯಾವುದೇ ಕಾರಣಕ್ಕೂ ನಿಮ್ಮ ಶಿಕ್ಷೆಯನ್ನು ಸ್ವೀಕರಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿಬಿಟ್ಟೆ.

ನನ್ನ ಬಳಿ ವಾದಿಸುವುದು ವ್ಯರ್ಥವೆಂದು ತಿಳಿದ ಫಾದರ್ ಸೈಮನ್, ನೀನು ಮೊಣಕಾಲು ಹಾಕಲೇಬೇಕೆಂದು ಹೇಳಿ ಹೊರಟು ಹೋದರು. ಆಗ ನನಗೆ ಮುಂದೇನು ಮಾಡಬೇಕೆಂಬ ಪ್ರಶ್ನೆ ಎದುರಾಯಿತು. ಫಾದರ್ ಸೈಮನ್ ಇದ್ದಿದ್ದರೆ ಅವರೊಡನೆ ವಾದಿಸಿಯಾದರು ಇದರ ಬಗ್ಗೆ ಒಂದು ತಾರ್ಕಿಕ ಅಂತ್ಯಕ್ಕೆ ಬರಬಹುದಿತ್ತು.ಆದರೆ ಅವರ ನಿರ್ಗಮನ ನನಗ್ಯಾವುದೇ ಆಯ್ಕೆಯನ್ನು ಉಳಿಸಿರಲಿಲ್ಲ.

ತುಸುಹೊತ್ತು ಯೋಚಿಸಿದ ನಂತರ ನನಗೆ ಹೊಳೆದದ್ದು ಫಾದರ್ ಆ್ಯಂಟನಿ ಕೊರೆಯ. (ಸೆಮಿನೆರಿಯ ರೆಕ್ಟರ್. ಇತ್ತೀಚೆಗಷ್ಟೇ ನಿಧನರಾದರು). ಸೀದಾ ಅವರ ಕೋಣೆಯತ್ತ ನಡೆದೆ. ವರಾಂಡದಲ್ಲಿ ಕುಳಿತು ಓದುವುದರಲ್ಲಿ ಮಗ್ನರಾಗಿದ್ದ ಅವರು, ನನ್ನನ್ನು ಕಂಡೊಡನೆಯೇ ‘‘ಯೆಸ್, ಅಜಯ್’’ ಎಂದಾಗ ನಾನು ಒಂದೇ ಉಸಿರಿನಲ್ಲಿ ನಡೆದ ಘಟನೆಯನ್ನು ವಿವರಿಸಿ, ನನಗೆ ಫಾದರ್ ಸೈಮನ್’ರ ಶಿಕ್ಷೆ ಸ್ವೀಕರಿಸಲಾಗುವುದಿಲ್ಲ ಎಂತಲೂ, ಅವರ ವರ್ತನೆ ತೀರಾ ಅತಿರೇಕದ್ದೆಂದು ಹೇಳಿದೆ. ಅದಾಗಲೇ ಪ್ಯಾರಾಲಿಸಿಸ್ ಅಟ್ಯಾಕ್ ಆಗಿ, ಕೊಂಚ ಕೊಂಚವಾಗಿ ಚೇತರಿಸಿಕೊಳ್ಳುತ್ತಿದ್ದ ಅವರು ಸೌಮ್ಯ ಚಿತ್ತರಾಗಿ...

‘‘ನೋಡು, ಅಜಯ್! ನಾನೀಗ ಯಾರ ಪರವೂ ನಿಲ್ಲಲಾಗುವುದಿಲ್ಲ. (Because I'm Sick!) ಸೆಮಿನರಿಯ ಆಡಳಿತವನ್ನೆಲ್ಲಾ ಸೈಮನ್ ನೋಡಿಕೊಳ್ಳುತ್ತಿದ್ದಾರೆ. ಯಾವುದೋ ಟೆನ್ಷನ್‌ನಲ್ಲಿ ಅವರು ಹಾಗೆ ಹೇಳಿರಬಹುದು. (“Please listen to what he says'') ಎಂದು ಬಿಟ್ಟರು. ಅಲ್ಲಿಗೆ ನನ್ನ ಪಾಲಿಗೆ ಉಳಿದಿದ್ದ ಕಟ್ಟಕಡೆಯ ಬಾಗಿಲೂ ಬಂದಾಯಿತು. ಮತ್ತೊಮ್ಮೆ ಮುಂದೇನು ಮಾಡುವುದು ಎಂಬ ಗೊಂದಲಮಯ ಸ್ಥಿತಿಗೆ ಬಿದ್ದೆ. ಆದದ್ದು ಆಗಲಿ ಎಂದು ನಿಶ್ಚಯಿಸಿ, ಸೀದಾ ಹೋಗಿ ಸ್ಟಡಿ ಹಾಲಿನ ನನ್ನ ಟೇಬಲಿನಲ್ಲಿ ಕುಳಿತುಕೊಂಡೆ. ನಂತರ ರಾತ್ರಿ ಎಂಟು ಗಂಟೆಗೆ ಊಟಕ್ಕೆ ಬಂದಾಗ ರೆಫೆಕ್ಟರಿಯಲ್ಲಿ ಫಾದರ್ ಸೈಮನ್ ಮತ್ತು ಫಾದರ್ ಕೊರೆಯಾರ ನಡುವೆ ಅದೇನು ಚರ್ಚೆಯಾಯಿತೋ ತಿಳಿದಿಲ್ಲ. ಆದರೆ ಫಾದರ್ ಸೈಮನ್ ನನ್ನ ಜೀವನದಲ್ಲಿ ಒಬ್ಬ ವಿದ್ಯಾರ್ಥಿ ಒಬ್ಬ ಪಾದ್ರಿಯ ಬಗ್ಗೆ ರೆಕ್ಟರ್ ಬಳಿ ದೂರು ಹೇಳಿದ್ದು ಇದೇ ಮೊದಲು ಎಂದರಂತೆ. ಆಗ ಶುರುವಾದದ್ದೇ ನನ್ನ ಮತ್ತು ಫಾದರ್ ಸೈಮನ್’ರ ನಡುವಿನ ಸಂಘರ್ಷ.

ಪಲೋಟಿ ಹೋಂನಲ್ಲಿದ್ದ ಆ ಮೂರೂ ವರ್ಷಗಳಲ್ಲೂ ನಮ್ಮ ಮಧ್ಯೆ ಆಗ್ಗಿಂದಾಗ್ಗೆ ಶೀತಲ ಸಮರಗಳಾಗುತ್ತಿದ್ದವು. ಆ ಮೂರನೇ ವರ್ಷದ ಕೊನೆಕೊನೆಗೆ ನನಗೆ ಫಾದರ್ ಸೈಮನ್ ಎಂತಹ ಧೀಮಂತ ವ್ಯಕ್ತಿ ಎಂದು ತಿಳಿದದ್ದು. ಅದೆಷ್ಟೇ ವಾಗ್ವಾದಗಳಾದರೂ ಪ್ರೊಮೋಷನ್ ವಿಚಾರ ಬಂದಾಗ ನನ್ನ ಪರವಾಗಿ ನಿಂತವರು ಇದೇ ಫಾದರ್ ಸೈಮನ್ ವಿನಃ ನನ್ನ ಜೊತೆಯೇ ನಗುನಗುತಲಿದ್ದು ನಂತರ ಬೆನ್ನಿಗೆ ಚೂರಿ ಹಾಕಿದ ವ್ಯಕ್ತಿಗಳಲ್ಲ. ನಾನು ಮೂರು ವರ್ಷ ಮುಗಿಸಿ, ನನ್ನ ನಾಲ್ಕನೇ ವರ್ಷದ ವ್ಯಾಸಂಗಕ್ಕೆ(ನೋವಿಶಿಯೇಟ್) ಕಾಲಿಟ್ಟಾಗ ತಿಳಿದಿದ್ದು ನಾನಿಷ್ಟು ಜನ ಮಿತ್ರರೆಂದು ತಿಳಿದ ವ್ಯಕ್ತಿಗಳು ನನ್ನ ಹಿತಶತ್ರುಗಳಾಗಿ ನನ್ನ ಬೆನ್ನಿಗೇ ಚೂರಿ ಹಾಕಿದ್ದು ಹಾಗೂ ನಾನು ಯಾರನ್ನು ನನ್ನ ವೈರಿಗಳೆಂದು ತಿಳಿದು, ಅವರನ್ನು ಕಂಡಾಗ ಮುಖ ಸಿಂಡರಿಸುತ್ತಿದ್ದೆನೋ ಅವರೇ ನನ್ನ ನಿಜವಾದ ಮಿತ್ರರೆಂದು.

ನಾನು ಸೆಮಿನರಿಯಿಂದ ಹೊರಬಂದು ಮೂರು ವರ್ಷಗಳೇ ಕಳೆದಿವೆ. ಫಾದರ್ ಸೈಮನ್ ಕುಮಟಾದಲ್ಲಿದ್ದಾರೆ. ಅಲ್ಲಿಗೆ ಹೋದಾಗಲೆಲ್ಲ ಸ್ವಂತ ಅಣ್ಣನಂತೆ ಉಪಚರಿಸುತ್ತಾರೆ. ಕಿರಿಯರು ಮಾಡುವ ತಪ್ಪುಗಳನ್ನೆಲ್ಲಾ ಮನಪೂರ್ವಕವಾಗಿ ಕ್ಷಮಿಸಿ, ಆ ಘಟನೆಗಳು ನಡೆದೇ ಇಲ್ಲವೇನೊ ಎಂಬಷ್ಟರ ಮಟ್ಟಿಗೆ ಆಪ್ತರಾಗಿ ಬಿಡುತ್ತಾರೆ. ಇದು ಫಾದರ್ ಸೈಮನ್‌ರ ವ್ಯಕ್ತಿತ್ವ. ಉಳಿದಂತೆ ನನ್ನ ಬಗ್ಗೆ ಹೇಳುವುದಾದರೆ ಈಗಲೂ ನಾನು ರೆಬೆಲ್ಲೇ. ಆದರೆ ಸಿಲ್ಲಿ ವಿಷಯಗಳಲ್ಲಲ್ಲ. ಅರ್ಥಾಥ್ ಸಿಲ್ಲಿ ವಿಚಾರಗಳ ಗೋಜಿಗೆ ಹೋಗುವುದನ್ನೂ ಮರೆತಿದ್ದೇನೆ. ಧನ್ಯಾತ್ಮಕವಾದುದನ್ನು ಒಪ್ಪಿಕೊಂಡು ಜೀವನ ಸಾಗಿಸುವ ಪಾಠವನ್ನು ಬದುಕು ಕಲಿಸಿದೆ, ಕಲಿಸುತ್ತಿದ್ದೆ, ಕಲಿಸುತ್ತಲೇ ಇರುತ್ತದೆ. ಬದುಕಿನ ಅನುಭವಗಳನ್ನು ಕೊಂಡುಕೊಳ್ಳಲು ಮುಗಿಬೀಳುವವರ ನಡುವೆ, ಆ ರಸಾನು ಭವಗಳೇ ನಮಗೆ ಉಚಿತವಾಗಿ ದೊರೆಯುತ್ತಿರುವ ಈ ವಿಷಮ ಕಾಲಘಟ್ಟದಲ್ಲಿ ನಾವೆಷ್ಟು ಧನ್ಯರು! ಅಲ್ಲವೇ?

Writer - ಅಜಯ್ ರಾಜ್ ಅಬ್ರಹಾಂ

contributor

Editor - ಅಜಯ್ ರಾಜ್ ಅಬ್ರಹಾಂ

contributor

Similar News