ಕೃಷಿಮೇಳ-2019: ಜನರನ್ನು ಆಕರ್ಷಿಸುತ್ತಿರುವ ಜಾನುವಾರುಗಳ ಪ್ರದರ್ಶನ

Update: 2019-10-26 16:50 GMT

ಬೆಂಗಳೂರು, ಅ.26: ಕೃಷಿಮೇಳ-2019 ಹಲವು ಆವೃತ್ತಿಗಳಲ್ಲಿ ಜನರನ್ನು ಸೆಳೆಯುತ್ತಿದ್ದು, ಇಲ್ಲಿನ ಜಾನುವಾರುಗಳು ಪ್ರಮುಖ ಆಕರ್ಷಣೆಯಾಗಿದೆ. ಹಸುಗಳು, ಹಂದಿಗಳು, ಕುರಿ, ಕೋಳಿ, ಮೊಲ ಸೇರಿದಂತೆ ಹಲವು ಜಾನುವಾರುಗಳು ರೈತರನ್ನು, ಕೃಷಿಕರನ್ನು ಸೆಳೆಯುತ್ತಿವೆ.

ಅರ್ಧ ಟನ್ ತೂಗುವ, ದಪ್ಪಚರ್ಮದ ಹಂದಿಗಳನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. ಮತ್ತೊಂದು ಕಡೆ ಬೃಹದಾಕಾರದ ದೇವಣಿ ಹಸು, ಆಕರ್ಷಕ ಕೊಂಬುಗಳಿರುವ ಕಾಂಕ್ರೇಜ್ ದನ, ದಷ್ಟ ಪುಷ್ಟವಾದ ಡಾರ್ಪರ್ ತಳಿಯ ಕುರಿಗಳು, ಮುದ್ದು ಮುದ್ದಾದ ಮೊಲಗಳು, ಗುಂಡು ಗುಂಡಗಿನ ಬಂಡೂರು ತಳಿಯ ಕುರಿಗಳು ಜನರನ್ನು ಆಕರ್ಷಿಸುತ್ತಿವೆ.

ನಗರ ನಿವಾಸಿಗಳಿಗೆ ತರಹೇವಾರಿ ಜಾನುವಾರುಗಳನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶವನ್ನು ಕೃಷಿಮೇಳ ಕಲ್ಪಿಸಿದೆ. ಹೆದರುತ್ತಲೇ ದನಗಳ ಮೈಸವರುತ್ತಾ, ಅವುಗಳಿಗೆ ಹುಲ್ಲು ಹಾಕುತ್ತಾ, ಅವು ಕೊಂಬು ಅಲ್ಲಾಡಿಸಿದಾಗ ದೂರ ಓಡುತ್ತಾ, ಸೆಲ್ಫಿ ತೆಗೆದುಕೊಳ್ಳುತ್ತಾ ಜನ ಸಂಭ್ರಮಿಸಿದರು.

ಸ್ವರ್ಣಭೂಮಿ ಟ್ರಸ್ಟ್‌ ನಿಂದ ದೇವಣಿ, ಮಲೆನಾಡು ಗಿಡ್ಡ ಮುಂತಾದ ದೇಸಿ ತಳಿಯ ಹಸುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹಾಲು, ಗೋಮೂತ್ರ, ಸೆಗಣಿಯಿಂದ ತಯಾರಿಸಲಾದ ಉತ್ಪನ್ನಗಳು ಮಾರಾಟಕ್ಕಿಡಲಾಗಿದೆ. ಇದೇ ಟ್ರಸ್ಟ್‌ನಿಂದ ಗೋ ಅರ್ಕ, ಹಲ್ಲುಜ್ಜುವ ಪುಡಿ, ಊದು ಬತ್ತು, ಸೆಗಣಿ ಗಣಪತಿ, ವಿಭೂತಿ ಹೀಗೆ ಹಲವು ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಮಂಡ್ಯದ ಕಲ್ಲಹಳ್ಳಿಯ ಪಟೇಲ್ ಶಿವರುದ್ರೇಗೌಡರು ಹಳ್ಳಿಕಾರ್ ತಳಿಯ ಹಸುಗಳನ್ನು ಕೃಷಿಮೇಳಕ್ಕೆ ತಂದಿದ್ದಾರೆ. ಈ ತಳಿಯ ಹೋರಿಗಳು ಉಳುಮೆಗೆ ಹೇಳಿ ಮಾಡಿಸಿದವು. ಕೃಷಿಕನ ಮಾತನ್ನು ಬಲುಬೇಗ ಅರ್ಥ ಮಾಡಿಕೊಳ್ಳುತ್ತವೆ. ಸಣ್ಣ ಮುಖ, ಸಣ್ಣ ಬಾಲ, ಕೋಲುಮುಖ ಉದ್ದದೇಹದ ಈ ತಳಿ ರಾಜ್ಯದಲ್ಲಿ ವ್ಯಾಪಕವಾಗಿ ಕೃಷಿ ಕಾರ್ಯಕ್ಕೆ ಬಳಕೆಯಾಗುತ್ತಿವೆ. ಇದು ಜೋಡಿ, ಮೂರೂವರೆ ಲಕ್ಷದಷ್ಟು ಬೆಲೆಯಿದೆ.

ಸಾನಿಯನ್, ಶಾಮಿ, ಅವಾಸಿ, ಜಮುನಾಪಾರಿ ಮುಂತಾದ ಚಿತ್ತಾಕರ್ಷಕ ಕುರಿಗಳು ಹೆಚ್ಚು ಆಕರ್ಷಣೆಯಾಗಿದ್ದು, ಅತಿಹೆಚ್ಚು ಡಾರ್ಪರ್ ತಳಿಯ ಕುರಿ ಜನರನ್ನು ಸೆಳೆಯುತ್ತಿದ್ದವು. ರೈತರು ಕುರಿಗಳನ್ನು ಸಾಕುವ ಬಗೆ, ಎಷ್ಟು ತೂಕ ಬರುತ್ತದೆ, ಮರಿಗಳು ಎಲ್ಲಿ ಸಿಗುತ್ತವೆ ಎಂಬೆಲ್ಲಾ ಮಾಹಿತಿಯನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News