×
Ad

ಸಿ.ಟಿ.ರವಿ ಹೇಳಿಕೆ ಖಂಡಿಸಿ ಸಾಹಿತಿಗಳ ಪ್ರತಿಭಟನೆ, ಕ್ಷಮೆಯಾಚಿಸಲು ಆಗ್ರಹ

Update: 2019-10-26 23:01 IST

ಬೆಂಗಳೂರು, ಅ.26: ಸಾಹಿತಿ-ಕಲಾವಿದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಕ್ಷಮೆಯಾಚಿಸಬೇಕು ಎಂದು ಸಾಹಿತಿ-ಕಲಾವಿದರ ಬಳಗ ಆಗ್ರಹಿಸಿದೆ.

ಶನಿವಾರ ನಗರದ ಪುರಭವನದ ಮುಂಭಾಗ ಜಮಾಯಿಸಿದ ಸಾಹಿತಿ-ಕಲಾವಿದರ ಬಳಗದ ಸದಸ್ಯರು, ಸಚಿವರ ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಅಕಾಡೆಮಿಗಳಲ್ಲಿ ಅನೇಕರು ಕಲಾವಿದರು ಹಾಗೂ ಸಾಹಿತಿಗಳು ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಇತ್ತೀಚೆಗೆ ಸಚಿವ ಸಿ.ಟಿ.ರವಿ ಅವರು ಅಕಾಡೆಮಿಗಳಿಗೆ ಅಧ್ಯಕ್ಷ-ಸದಸ್ಯರ ನೇಮಕಾತಿ ಸಂಬಂಧ ಮಾತನಾಡುವಾಗ ಸಾಹಿತಿ-ಕಲಾವಿದರ ಬಗ್ಗೆ ‘ಮನೆಹಾಳರು’ ಎಂಬ ಪದ ಬಳಕೆ ಮಾಡಿದ್ದು, ಈ ಮೂಲಕ ಸಾಹಿತಿ-ಕಲಾವಿದರ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಜೆ.ಲೋಕೇಶ್, ಸಾಹಿತಿ-ಕಲಾವಿದರ ಬಗ್ಗೆ ಸಚಿವರು ಬಳಸಿರುವ ಪದ ಸರಿಯಲ್ಲ. ಕೂಡಲೇ ಈ ಬಗ್ಗೆ ಸಚಿವರು ಕ್ಷಮೆಯಾಚಿಸಬೇಕು. ಅಂತೆಯೆ ಅಕಾಡೆಮಿಗಳಿಗೆ ಅನುದಾನ ತಡೆ, ಸಾಂಸ್ಕೃತಿಕ ನೀತಿ ಜಾರಿಯಲ್ಲಿ ವಿಳಂಬ, ಶಾಸೀಯ ಭಾಷೆಗೆ ಸಂಬಂಧಿತ ಕಾರ್ಯಗಳು, ರಂಗಮಂದಿರ ನಿರ್ಮಾಣ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳು ಎದುರಿಗಿವೆ. ಮುಂದಿನ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ ಎಂದು ಹೇಳಿದರು.

ಸಮುದಾಯ ಸಂಘಟನೆಯ ಕಾರ್ಯದರ್ಶಿ ಸಿ.ಕೆ.ಗುಂಡಣ್ಣ, ಕಲಾವಿದರು ಯಾವುದೇ ಮನೆ ಒಡೆಯುವ ಕೆಲಸಗಳನ್ನು ಮಾಡಿಲ್ಲ. ಹಿಂದೆ ಅನೇಕ ಕಲಾವಿದರು ಅಕಾಡೆಮಿಗಳಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಸಚಿವರ ಹೇಳಿಕೆಯಿಂದ ಎಲ್ಲ ಕಲಾವಿದರ ಮನಸ್ಸಿಗೆ ನೋವಾಗಿದೆ. ಹಾಗಾಗಿ ಸಚಿವರು ತಮ್ಮ ಹೇಳಿಕೆ ಕುರಿತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಎಲ್.ಎನ್.ಮುಕುಂದರಾಜ್, ರಂಗಕರ್ಮಿ ಎನ್.ಮಂಗಳಾ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News