ವಸ್ತುನಿಷ್ಠ ವರದಿಗಳಿಗಿಂತ ಸುಳ್ಳು ಸುದ್ದಿ ಮೇಲೆ ಜನರ ಗಮನ ಹೆಚ್ಚು: ಕುಮಾರಸ್ವಾಮಿ

Update: 2019-10-26 17:38 GMT

ಬೆಂಗಳೂರು, ಅ.26: ಪ್ರಸ್ತುತ ದಿನಗಳಲ್ಲಿ ವಸ್ತುನಿಷ್ಠ ವರದಿಗಳು ಕಣ್ಮರೆಯಾಗುತ್ತಿರುವ ವಾತಾವರಣ ಸೃಷ್ಟಿಯಾಗಿದೆ. ವಸ್ತುನಿಷ್ಠ ವರದಿಗಳಿಗಿಂತ ಸುಳ್ಳು ಸುದ್ದಿಗಳ ಮೇಲೆ ಜನರ ಗಮನ ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬಹುರೂಪಿ ಪುಸ್ತಕ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಪತ್ರಕರ್ತ ಆರ್.ಟಿ. ವಿಠ್ಠಲಮೂರ್ತಿ ಅವರ ‘ಇದೊಂಥರ ಆತ್ಮಕಥೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ. ಸಮಾಜದಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ ಹೆಚ್ಚಾಗಿದ್ದು, ಸತ್ಯ, ನಿಷ್ಠೆಯುಳ್ಳ ವರದಿಗಳನ್ನು ಮಾಡುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಜನತೆಗೆ ವಾಸ್ತವದ ಸುದ್ದಿಗಳನ್ನು ಬಿತ್ತರಿಸಬೇಕಾಗಿದೆ ಎಂದು ಹೇಳಿದರು.

ಪತ್ರಿಕೋದ್ಯಮ ವ್ಯಾಪಾರೀಕರಣವಾಗುತ್ತಿದೆ. ಮೌಲ್ಯಾಧಾರಿತ ಸತ್ಯ ದೂರವಾಗುತ್ತಿದೆ. ಈ ಹಿಂದೆ ಇದ್ದಂತ ಮಾಧ್ಯಮದ ಗೌರವ, ಆಸಕ್ತಿ, ಭಯ, ಭಕ್ತಿ ಇಂದು ಉಳಿದಿಲ್ಲ. ಮಾಧ್ಯಮದವರು ಕಾವಲುಗಾರರಾಗಿ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದ ಅವರು, ಇವತ್ತಿನ ಜನಾಂಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹೀಗಾಗಿ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು. ವಿಶೇಷವಾಗಿ ರಾಜಕಾರಣಿಗಳು ದಿನ ಪತ್ರಿಕೆ ಓದಬೇಕು ಎಂದರು. ಮಹಾತ್ಮಾ ಗಾಂಧೀಜಿ ಅವರು ಸ್ರಾತಂತ್ರಕ್ಕಾಗಿ ಹೋರಾಡಿ ಸ್ವದೇಶಿ ವಸ್ತುಗಳನ್ನು ಉತ್ಪಾದಿಸುವ ಬಗ್ಗೆ ದೊಡ್ಡ ಹೋರಾಟವನ್ನೇ ಮಾಡಿದರು. ಆದರೆ ಇಂದಿನ ಪ್ರಧಾನಿಯವರು ಸ್ವದೇಶಿ ವಸ್ತುಗಳ ಉಪಯೋಗದ ಬಗ್ಗೆ ಮಾತನಾಡುತ್ತಿದ್ದಾರೆ. ಹಾಲನ್ನು ಬೇರೆ ರಾಷ್ಟ್ರದಿಂದ ಪಡೆಯಲು ಒಪ್ಪಂದ ಮಾಡಲು ಮುಂದಾಗುತ್ತಿರುವುದಕ್ಕೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ದೇಶದ ಉತ್ಪನ್ನದಲ್ಲಿ ರೈತರಿಗೆ ಅತಿಹೆಚ್ಚು ಆದಾಯ ತರುತ್ತಿರುವ ಹಾಲು ಉತ್ಪಾದನೆಯ ಬಗ್ಗೆ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.

ಲೇಖಕ ಆರ್.ಟಿ. ವಿಠ್ಠಲಮೂರ್ತಿ ಮಾತನಾಡಿ, ಕಳೆದ 30 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಾಗ ವಿಧಾನಸೌಧಕ್ಕೆ ಹೋಗುವಂತೆ ಮಾಡಿದ್ದು ಪತ್ರಕರ್ತರು ಹಾಗೂ ಪತ್ರಿಕೋದ್ಯಮ, ಸುಮಾರು 12 ಜನ ಮುಖ್ಯಮಂತ್ರಿಗಳನ್ನು ನೋಡುವ ಭಾಗ್ಯ ನನ್ನದಾಗಿದೆ. ನಾನು ನನ್ನ ವೃತ್ತಿಯಲ್ಲಿ ತಪ್ಪುಮಾಡಿಲ್ಲ ಅಂತಲ್ಲ. ತಪ್ಪುಮಾಡಿಕೊಂಡೆ ಬಂದಿದ್ದೇನೆ. ಆದರೆ, ತಪ್ಪುಮಾಡಿದಾಗಲೆ ನನಗೆ ತಿದ್ದಿಕೊಳ್ಳಲು ಸಾಧ್ಯವಾಗಿದೆ ಎಂದರು.

ಸಾಹಿತಿ ಡಾ.ವಿಜಯಾ ಮಾತನಾಡಿ, ಪತ್ರಕರ್ತರಿಗೆ ಶತ್ರುಗಳು ಇರಬೇಕು. ಅಗಲೇ ಅವರು ನಿಜವಾದ ಪತ್ರಕರ್ತರಾಗಿ ಗುರುತಿಸಿಕೊಳ್ಳಲು ಸಾಧ್ಯ. ವಾಸ್ತವ ಅಂಶಗಳನ್ನು ಪತ್ರಕರ್ತರು ಎತ್ತಿ ಹಿಡಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನದ ಜಿ.ಎನ್. ಮೋಹನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News