ಮೆಟ್ರೋ ನಿಲ್ದಾಣಕ್ಕೆ ಪಟಾಕಿ ತರದಂತೆ ಬಿಎಂಆರ್‌ಸಿಎಲ್ ಸೂಚನೆ

Update: 2019-10-26 18:00 GMT

ಬೆಂಗಳೂರು, ಅ.26: ಇತ್ತೀಚೆಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟಕ ವಸ್ತು ಸಿಡಿದು ಅವಘಡ ಉಂಟಾದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಮೆಟ್ರೋ ನಿಲ್ದಾಣಕ್ಕೆ ಪಟಾಕಿ ತರದಂತೆ ಸೂಚಿಸಿದೆ.

ಪಟಾಕಿ ಇಟ್ಟುಕೊಂಡಿರುವುದು ಕಂಡು ಬಂದರೆ ತಪಾಸಣೆ ವೇಳೆಯೇ ಪ್ರಯಾಣಿಕರನ್ನು ಮೆಟ್ರೋ ಸಿಬ್ಬಂದಿ ತಡೆಹಿಡಿಯಲಿದ್ದಾರೆ. ಒಂದು ವೇಳೆ ರೈಲು ಅಥವಾ ನಿಲ್ದಾಣಗಳಲ್ಲಿ ಪ್ರಯಾಣಿಕರ ಕೈಯಲ್ಲಿ ಪಟಾಕಿ ಕಂಡು ಬಂದರೆ ಸಿಬ್ಬಂದಿ ಮೇಲೂ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮೆಜೆಸ್ಟಿಕ್, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರದ ಸಂಪಿಗೆ ರಸ್ತೆ ಸೇರಿದಂತೆ ವಿವಿಧ ಮೆಟ್ರೋ ನಿಲ್ದಾಣಗಳ ಸಮೀಪ ಪಟಾಕಿ ಮಳಿಗೆಗಳಿದ್ದು, ಅಲ್ಲಿ ಪಟಾಕಿ ಕೊಂಡು ಮೆಟ್ರೋಗೆ ಬಾರದಂತೆ ನಿಲ್ದಾಣಗಳಲ್ಲಿ ಭಿತ್ತಿ ಪತ್ರ ಅಂಟಿಸಿ ಜಾಗೃತಿ ಮೂಡಿಸಲಾಗಿದೆ. ಆದರೂ ಒಂದು ವೇಳೆ ತಿಳಿಯದೆ ಪಟಾಕಿಗಳನ್ನು ತಂದರೆ ನಿರ್ದಾಕ್ಷಿಣ್ಯವಾಗಿ ಮೆಟ್ರೋ ನಿಲ್ದಾಣದಿಂದಲೇ ವಾಪಸ್ ಕಳುಹಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News