ಇತಿಹಾಸವನ್ನು ಪುನರ್‌ಲೇಖಿಸುವ ಹಿಂದುತ್ವದ ವ್ಯರ್ಥ ಪ್ರಯತ್ನ

Update: 2019-10-26 18:25 GMT

ಭಾರತೀಯ ನಾಗರಿಕತೆಯನ್ನು ಇನ್ನಷ್ಟು ಪ್ರಾಚೀನ ಕಾಲಕ್ಕೆ ತಳ್ಳುವ ಮೂಲಕ ಅದು ಇನ್ನಷ್ಟು ಪ್ರಾಚೀನವೆಂದು ಕಾಣುವಂತೆ ಮಾಡಲು ಪ್ರಯತ್ನಿಸುವುದರಲ್ಲಿ ಬಹಳಷ್ಟು ಶ್ರಮ ವ್ಯರ್ಥವಾಗುತ್ತದೆ. ಇಲ್ಲಿರುವ ಸಮಸ್ಯೆ ಎಂದರೆ ಭಾರತೀಯ ಜ್ಞಾನ ಪರಂಪರೆಗಳನ್ನು ವಿಶ್ವ ತತ್ವಜ್ಞಾನದ ವ್ಯಾಪಕವಾದ ಚೌಕಟ್ಟಿನಲ್ಲಿಟ್ಟು ನೋಡಲು ನಿರಾಕರಿಸುವುದು.


‘‘ಇತಿಹಾಸವನ್ನು ಪುನಃ ಬರೆಯಬೇಕು, ರೀರೈಟ್ ಮಾಡಬೇಕು’’ ಎಂದು ಗೃಹ ಸಚಿವ ಅಮಿತ್ ಶಾ ಅವರು ಕರೆ ನೀಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಪ್ರತಿಯೊಂದು ಸರಕಾರವು ತನ್ನ ಆಡಳಿತ ಕ್ರಮಕ್ಕೆ ಗತಕಾಲದ ಅಂಗೀಕಾರದ ಮುದ್ರೆಯನ್ನು ಬಯಸುತ್ತದೆ. ಇದಕ್ಕೆ ಬಿಜೆಪಿ ಸರಕಾರವೂ ಅಪವಾದವಲ್ಲ. ಇತಿಹಾಸದ ಪುನರ್ ಲೇಖನವು ‘ಭಾರತೀಯ ದೃಷ್ಟಿಕೋನ’ದಿಂದ ಆಗಬೇಕೆಂದು ಕೂಡ ಶಾ ಹೇಳಿದರು. ಬಿಜೆಪಿಯ ಲೋಕದೃಷ್ಟಿ ಮಾತ್ರ ‘ಭಾರತೀಯ’ ಎಂದು ಕರೆಸಿಕೊಳ್ಳಲು ಅರ್ಹ ಎಂಬ ಅಭಿಪ್ರಾಯ ಅವರ ಮಾತಿನಲ್ಲಿದೆ.

ಆದರೆ ಸತ್ಯ ಇದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಧಾರ್ಮಿಕ ಘರ್ಷಣೆ ಭಾರತದ ಇತಿಹಾಸದ ಕೇಂದ್ರ ಬಿಂದು ಎಂಬಂತೆ ವಸಾಹತುಶಾಹಿ ಇತಿಹಾಸಕಾರರು ಬರೆದರು. ಇದನ್ನು ಒಪ್ಪದ ತಾರಾ ಚಂದ್ ಬಹಳ ಹಿಂದೆಯೇ ಇತಿಹಾಸವನ್ನು ಸೃಜನಾತ್ಮಕವಾಗಿ ಪುನರ್‌ಲೇಖಿಸುವ ಪ್ರಯತ್ನ ಮಾಡಿದರು. ಅಲ್ಲದೆ, ಆಗ ಜಾಡುನಾಥ್ ಸರ್ಕಾರ್ ಮತ್ತು ಆರ್.ಸಿ.ಮಜುಂದಾರ್ ಅವರಂತಹ ಇತರ (ಕನ್ಸರ್ವೇಟಿವ್) ಸಾಂಪ್ರದಾಯಿಕ ಇತಿಹಾಸಕಾರರೂ ಇದ್ದರು. ಇವರು ಕೂಡ ‘‘ಭಾರತೀಯ ದೃಷ್ಟಿಕೋನ’’ದಿಂದ ಇತಿಹಾಸವನ್ನು ಪುನರ್‌ಲೇಖಿಸಲು ಪ್ರಯತ್ನಿಸಿದರು.
1970ರ ದಶಕದಲ್ಲಿ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ಬರೆದ ಇತಿಹಾಸ ಭಾರತದ ಅಧಿಕೃತ ಇತಿಹಾಸದ ಭಾಗವಾಯಿತು. 1950ರ ದಶಕದಲ್ಲಿ ಡಿ.ಡಿ.ಕೊಸಂಬಿ ಈ ರೀತಿಯ ಇತಿಹಾಸ ಲೇಖಕರಲ್ಲಿ ಅಗ್ರಗಣ್ಯರಾಗಿದ್ದರು.

ಈಗ ಶಾ ಅವರು ಬಿಜೆಪಿಯ ದೃಷ್ಟಿಕೋನಕ್ಕೆ ಅನುಗುಣವಾಗಿ ಭಾರತದ ಗತಕಾಲದ ಇತಿಹಾಸವನ್ನು ಬರೆಯಬೇಕು ಎನ್ನುತ್ತಿದ್ದಾರೆ.
ಆದರೆ ಇದು ಹೇಳಿದಷ್ಟು ಸುಲಭದ ಕೆಲಸವಲ್ಲ. ಎರಡು ದಶಕಗಳ ಹಿಂದೆ ಮಾಜಿ ಮಾನವ ಸಂಪನ್ಮೂಲ ಸಚಿವ ಮುರಳಿ ಮನೋಹರ ಜೋಷಿಯವರು ಕೂಡ ಇದೇ ರೀತಿಯ ದೃಷ್ಟಿಕೋನದಿಂದ ಇತಿಹಾಸ ಬರೆಸುವ ಪ್ರಯತ್ನ ಮಾಡಿದ್ದರು. ಆದರೆ ಭೌತವಿಜ್ಞಾನದ ಓರ್ವ ಪ್ರಾಧ್ಯಾಪಕರಾಗಿದ್ದ ಅವರು ಸಹಜ (ನ್ಯಾಚುರಲ್) ವಿಜ್ಞಾನಗಳ ಮಸೂರದ ಮೂಲಕ ಇತಿಹಾಸವನ್ನು ನೋಡುತ್ತಾ ಒಂದು ‘ಇತ್ಯಾತ್ಮವಾದಿ’ (ಪಾಸಿಟಿವಿಸ್ಟ್) ಬೋನಿಗೆ ಬಿದ್ದರು. ಹೀಗೆ, ಅವರು ತಾನು ‘‘ಇತಿಹಾಸದ ತಪ್ಪುಗಳ ಸರಿಪಡಿಸುವಿಕೆ’’ಗೆ (ರೆಕ್ಟಿಫಿಕೇಶನ್) ಪ್ರಯತ್ನಿಸುತ್ತಿದ್ದೇನೆ ಎಂದರು.
ಮಾರ್ಕ್ಸ್‌ವಾದಿ ನಿಲುವಿನಿಂದ ಬರೆಯಲಾದ ಒಂದು ಇತಿಹಾಸ ಸರಿಪಡಿಸುವಿಕೆಗೆ ಕಾದಿತ್ತು ಎಂಬಂತೆ ಅವರು ಮಾತಾಡಿದ್ದರು. ಆದರೆ ಅವರ ಅರೆ ಮನಸ್ಸಿನ ಪ್ರಯತ್ನ ಫಲ ನೀಡಲಿಲ್ಲ. ಯಾಕೆಂದರೆ ಇತಿಹಾಸ ಯಾವತ್ತೂ ‘ವಸ್ತುನಿಷ್ಠ’ವಲ್ಲ. ಜೋಷಿಯವರು ಒಂದು ಬದಲಿ ಹಿಂದುತ್ವ ದೃಷ್ಟಿಕೋನದ ಇತಿಹಾಸ ಬರೆಯಲು ಬೇಕಾದ ನೆಲೆಯನ್ನು ಸೃಷ್ಟಿಸಲು ವಿಫಲರಾದರು.

ಈ ಅರ್ಥದಲ್ಲಿ ಶಾ ಅವರು ಜೋಷಿಯವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ಆದರೂ ಕೂಡ ಈಗ ಇರುವ ಇತಿಹಾಸಕ್ಕೆ ಒಂದು ಬದಲಿ ಇತಿಹಾಸ ಬರೆಯುವುದು ಹಿಂದುತ್ವಕ್ಕೆ ಸುಲಭವಾಗುವುದಿಲ್ಲ ಎನ್ನಲು ಗಣನೀಯ ಪ್ರಮಾಣದ ಪುರಾವೆ ಇದೆ. ಮೊದಲನೆಯದಾಗಿ, ಒಂದು ಬದಲಿ ಇತಿಹಾಸವನ್ನು ಬರೆಯಲು ಬೇಕಾಗುವಂತಹ ಸಾಮರ್ಥ್ಯವಿರುವ ಇತಿಹಾಸಕಾರರು ಹಿಂದುತ್ವದ ಬಳಿ ಬೆರಳೆಣಿಕೆಯಷ್ಟೇ ಮಂದಿ ಇದ್ದಾರೆ. ಇದಕ್ಕೆ ಕಾರಣಗಳಿವೆ: ಉನ್ನತ ದರ್ಜೆಯ, ಟಾಪ್‌ವಿಶ್ವವಿದ್ಯಾನಿಲಯಗಳು ಸಾಮಾನ್ಯವಾಗಿ ಉದಾರವಾದಿ (ಲಿಬರಲ್) ಅಥವಾ ಎಡಪಂಥೀಯ ಅಧ್ಯಯನ ನೆಲೆಗಳು. ಹೀಗಾಗಿ ಬಹಳ ಪ್ರತಿಭಾವಂತರು ಹಿಂದುತ್ವದಿಂದ ದೂರ ಸರಿಯುತ್ತಾರೆ. ಹಿಂದುತ್ವದ ಅದರದೇ ಆದ, ಯೋಚನಾ ರೀತಿ, ಒರಿಯನ್‌ಟೇಶನ್ ಇನ್ನೊಂದು ಕಾರಣ. ಅಂದರೆ, ಹಿಂದುತ್ವದ ಸೈದ್ಧಾಂತಿಕ ವಿಶ್ವದಿಂದ ಮೂಡಿ ಬರುವ ನಾಯಕರು ವಿಜ್ಞಾನ, ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರವನ್ನು ಜಾಗತಿಕ ವಿದ್ವತ್‌ವಲಯದ (ಅಕಡೇಮಿಯಾ) ಮಸೂರದ ಮೂಲಕ ವೀಕ್ಷಿಸಲು ಸಿದ್ಧರಿದ್ದಾರಾದರೂ, ಇತಿಹಾಸ ಬರವಣಿಗೆಯ ಕ್ಷೇತ್ರದಲ್ಲಿ ಮಾತ್ರ ಅವರು ಸ್ವಾಯತ್ತೆಯನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಇದು ಒಂದು ಮೆಚ್ಚತಕ್ಕ ತತ್ವವೇ ಆಗಿರಬಹುದು. ಆದರೆ ಆಧುನಿಕ ವಿಜ್ಞಾನವನ್ನು ಪ್ರಾಚೀನ ಕಾಲದಲ್ಲಿ ಇಟ್ಟು ನೋಡುವ ಒಂದು ಹಿಮ್ಮುಖ ಚಲನೆಯ ಸಮಸ್ಯೆ ಇಲ್ಲಿ ಕಾಣಿಸುತ್ತದೆ.

ಭಾರತೀಯ ನಾಗರಿಕತೆಯನ್ನು ಇನ್ನಷ್ಟು ಪ್ರಾಚೀನ ಕಾಲಕ್ಕೆ ತಳ್ಳುವ ಮೂಲಕ ಅದು ಇನ್ನಷ್ಟು ಪ್ರಾಚೀನವೆಂದು ಕಾಣುವಂತೆ ಮಾಡಲು ಪ್ರಯತ್ನಿಸುವುದರಲ್ಲಿ ಬಹಳಷ್ಟು ಶ್ರಮ ವ್ಯರ್ಥವಾಗುತ್ತದೆ. ಇಲ್ಲಿರುವ ಸಮಸ್ಯೆ ಎಂದರೆ ಭಾರತೀಯ ಜ್ಞಾನ ಪರಂಪರೆಗಳನ್ನು ವಿಶ್ವ ತತ್ವಜ್ಞಾನದ ವ್ಯಾಪಕವಾದ ಚೌಕಟ್ಟಿನಲ್ಲಿಟ್ಟು ನೋಡಲು ನಿರಾಕರಿಸುವುದು. ಉದಾಹರಣೆಗೆ, ಒಂದು ಅನುಮಾನಾಸ್ಪದ ‘ವೈಮಾನಿಕ ಶಾಸ್ತ್ರ’ದ ಆಧಾರದಲ್ಲಿ ನಮ್ಮ ದೇಶದಲ್ಲಿ ಪ್ರಾಚೀನ ಕಾಲದಲ್ಲಿ ವಿಮಾನ ಇತ್ತು ಎನ್ನುವುದು; ಪ್ರಾಚೀನ ಭಾರತದಲ್ಲಿ ಆಧುನಿಕ ವಿಜ್ಞಾನ ಅಸ್ತಿತ್ವದಲ್ಲಿತ್ತು ಎಂದು ವಾದಿಸಲು ಮಹಾಭಾರತ ಮತ್ತು ರಾಮಾಯಣದಲ್ಲಿ ಬರುವ ಕೆಲವು ಘಟನೆಗಳನ್ನು ನಿಜವೆಂದು ಬಿಂಬಿಸಲು ಪ್ರಯತ್ನಿಸುವುದು ಅಥವಾ ಗೋಮೂತ್ರದಿಂದ ಔಷಧೀಯ ಪರಿಣಾಮಗಳಾಗುತ್ತವೆಂದು ವಾದಿಸುವುದು -ಇಂತಹ ವಾದಗಳು ಹಿಂದುತ್ವದ ಮಾತುಗಳನ್ನು ಸ್ವೀಕಾರಾರ್ಹ ಅಕಡಮಿಕ್ ಜ್ಞಾನದಿಂದ ಇನ್ನಷ್ಟು ದೂರಕ್ಕೆ ಕೊಂಡೊಯ್ಯುತ್ತವೆ. ಆದರೂ ಹಿಂದುತ್ವವಾದಿಗಳು ಇಂತಹ ನಿಲುವುಗಳಿಗೆ, ವಾದಗಳಿಗೆ ಅಂಟಿಕೊಂಡು ಇವುಗಳನ್ನು ತಳ್ಳಿಹಾಕಲು ಒಂದು ಪಾಶ್ಚಾತ್ಯ ಅಥವಾ ಉದಾರವಾದಿ ಒಳಸಂಚು ನಡೆದಿದೆ ಎಂದು ಆರೋಪಿಸುತ್ತಾರೆ.

 ಹಿಂದುತ್ವ ವಿಶ್ವದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಅಕಡಮಿಕ್ ಚರ್ಚೆಗಳಲ್ಲಿ ಗಂಭೀರವಾಗಿ ತೊಡಗುತ್ತಾರೆ ಎಂಬುದು ವಾಸ್ತವದ ಸಂಗತಿ. ಶಾರವರು ಗುಪ್ತ ಸಾಮ್ರಾಜ್ಯದ ಕುರಿತು ನಾವು ಇನ್ನಷ್ಟು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು. ಆದರೆ ಒಬ್ಬ ದೊರೆಯನ್ನು ಇನ್ನೊಬ್ಬ ದೊರೆಗಿಂತ ಮೇಲು ಎಂದು ಬಿಂಬಿಸುವುದರಿಂದಷ್ಟೇ ಇತಿಹಾಸದ ಬದಲಿ ದೃಷ್ಟಿ ಮೂಡಿ ಬರುವುದಿಲ್ಲ. ಇದು ಸಾಧ್ಯವಾಗಬೇಕಾದರೆ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಹೊಸ ವರ್ಗೀಕರಣಗಳು, ಕೆಟಗರಿಗಳು, ದೃಷ್ಟಿಕೋನಗಳು ಬೇಕಾಗುತ್ತವೆ; ಇನ್ನಷ್ಟು ಆಳವಾದ ವ್ಯಾಪಕವಾದ ಐತಿಹಾಸಿಕ ಅಧ್ಯಯನಗಳು ಬೇಕಾಗುತ್ತವೆ ಮತ್ತು ಇವುಗಳೆಲ್ಲವೂ ಭಾರತೀಯ ಪರಂಪರೆಗಳೊಳಗಿನಿಂದಲೇ ಮೂಡಿಬರಬೇಕಾಗುತ್ತದೆ. ಇದಕ್ಕಾಗಿ ಪರಂಪರೆಗಳನ್ನು ಹೊಸದಾಗಿ ಓದಬೇಕಾಗುತ್ತದೆ. ಇಂದಿನ ಸಮಕಾಲೀನ ಅಧ್ಯಯನಗಳನ್ನು ತ್ಯಜಿಸಿಬಿಡುವುದರಿಂದ ಇದು ಸಾಧ್ಯವಾಗುವುದಿಲ್ಲ. ಬದಲಾಗಿ ಈ ಅಧ್ಯಯನಗಳನ್ನು ಹೊಸ ಒಳನೋಟಗಳಿಂದ ಮೀರುವುದರಿಂದ ವಿಸ್ತಾರವೂ, ವ್ಯಾಪಕವೂ ಆದ ಭಾರತೀಯ ಪರಂಪರೆಗಳಿಂದ ಒಳನೋಟಗಳನ್ನು ಪಡೆಯುವುದರಿಂದ ಸಾಧ್ಯವಾಗುತ್ತದೆ.

ಬಿಜೆಪಿ ಚುನಾವಣಾ ರಾಜಕಾರಣವನ್ನು ಕರಗತ ಮಾಡಿಕೊಂಡಿದೆ; ಆದರೆ ಅದು ಅಕಡಮಿಯಾದ ಭಾಷೆಯನ್ನು ಇನ್ನಷ್ಟೇ ಅರ್ಥ ಮಾಡಿಕೊಳ್ಳಬೇಕಾಗಿದೆ.

(ವಿಕಾಸ್ ಪಾಠಕ್ ಚೆನ್ನೈಯ ಏಶ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಪ್ರಾಧ್ಯಾಪಕರಾಗಿದ್ದಾರೆ)
  

Writer - ವಿಕಾಸ್ ಪಾಠಕ್

contributor

Editor - ವಿಕಾಸ್ ಪಾಠಕ್

contributor

Similar News