×
Ad

ಬೆಂಗಳೂರು: ಜೋಡಿ ಕೊಲೆ ಪ್ರಕರಣ; ದಂಪತಿ ಬಂಧನ

Update: 2019-10-27 17:55 IST

ಬೆಂಗಳೂರು, ಅ.27: ಶ್ರೀಮಂತ ವೃದ್ಧ ದಂಪತಿಯರನ್ನೇ ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ಬಂಧಿಸುವಲ್ಲಿ ಇಲ್ಲಿನ‌ ಮಹದೇವಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಅಮೃತಹಳ್ಳಿ‌ ನಿವಾಸಿಗಳಾದ ವೆಂಕಟೇಶ್ ಹಾಗೂ ಈತನ ಪತ್ನಿ ಅರ್ಪಿತಾ ಬಂಧಿತರು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಅ.17ರಂದು ಗರುಡಾಚಾರ್ ಪಾಳ್ಯದ ಚಂದ್ರೇಗೌಡ ಹಾಗೂ ಲಕ್ಷ್ಮಮ್ಮ ಎಂಬ ದಂಪತಿಯ ಹತ್ಯೆ ನಡೆದಿತ್ತು. ಪ್ರಕರಣ ಸಂಬಂಧ ಈ‌ ಇಬ್ಬರು ಆರೋಪಿಗಳನ್ನು ಬಂಧಿಸಿ ನಗದು ವಶಕ್ಕೆ ಪಡೆದಿದ್ದಾರೆ ಎಂದಯ ಅವರು ಹೇಳಿದರು ‌

ಬಂಧಿತರಾದ ವೆಂಕಟೇಶ್ ಹಾಗೂ ಅರ್ಪಿತಾ ‌ಬಜಾಜ್ ಫೈನಾನ್ಸ್ ಹಾಗೂ ಗೆಳೆಯರ ಬಳಿ ಸುಮಾರು 10 ಲಕ್ಷ ರೂ ಸಾಲ ಮಾಡಿದ್ದರು. ಈ ಸಾಲ ತೀರಿಸುವ ಜೊತೆಗೆ ಸ್ವಂತ ಕಾರನ್ನು ಖರೀದಿಸಿ, ಐಷಾರಾಮಿ ಜೀವನ ಸಾಗಿಸಲು ಅವರು ಕಳ್ಳತನ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮದುವೆ ಸಮಾರಂಭಗಳಲ್ಲಿ‌ ಮಕ್ಕಳಿಲ್ಲದ ಶ್ರೀಮಂತ ವೃದ್ಧರನ್ನು ಪರಿಚಯಿಸಿಕೊಂಡು ನಂತರ ಅವರ ಮನೆಗೆ ಹೋಗಿ ಅವರೊಂದಿಗೆ ಸ್ನೇಹ ಬೆಳೆಸಿ, ಕೆಲ ಸಮಯದ ನಂತರ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚುತ್ತಿದ್ದರು ಎನ್ನಲಾಗಿದೆ.

ಸುಮಾರು 1 ತಿಂಗಳ ಹಿಂದೆ ಸಂಬಂಧಿಕರ ಮದುವೆಗೆ ಗರುಡಚಾರ್ ಪಾಳ್ಯದ ಚಂದ್ರೇಗೌಡ ಹಾಗೂ ಲಕ್ಷ್ಮಮ್ಮ ದಂಪತಿ ಹೋಗಿದ್ದರು. ಅದೇ ಮದುವೆಗೆ ಹೋಗಿದ್ದ ಆರೋಪಿಗಳಾದ ವೆಂಕಟೇಶ್ ಹಾಗೂ ಅರ್ಪಿತ, ಲಕ್ಷ್ಮಮ್ಮ ಧರಿಸಿದ್ದ ಚಿನ್ನಾಭರಣ ಕಂಡು, ಕೊಲೆಗೆ ಸಂಚು ರೂಪಿಸಿದ್ದರು. ಬಳಿಕ ಅ.17ರಂದು, ಇವರ ಮನೆಗೆ ನುಗ್ಗಿ ಆರೋಪಿಗಳು ಗಟ್ಟಿ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತನಿಖೆಯಲ್ಲಿ ಬಯಲಾಯ್ತು ಮಂಡ್ಯ ದಂಪತಿ ಕೊಲೆ ಪ್ರಕರಣ

ಜುಲೈನಲ್ಲಿ ಮಂಡ್ಯದ ಗುಂಡೇಗೌಡ, ಲಲಿತಮ್ಮ ಕೊಲೆಯಾಗಿತ್ತು. ಆ ಕೊಲೆ ಮಾಡಿದವರು ಅವರ ಪಕ್ಕದ ಮನೆಯವರೇ ಎಂದು ನಂಬಿದ್ದ ಮಂಡ್ಯ ಕೆ.ಆರ್.ಪೇಟೆ ಟೌನ್ ಪೊಲೀಸರು ಸರಿಯಾದ ವಿಚಾರಣೆ ನಡೆಸದೆ ಅಮಾಯಕನನ್ನ ಬಂಧಿಸಿ ಜೈಲಿಗಟ್ಟಿದ್ದರು ಎಂಬ ಆರೋಪವಿದೆ. ಆದರೆ, ಮಹದೇವಪುರ ವೃದ್ಧ ದಂಪತಿ ಕೊಲೆ ಪ್ರಕರಣದಲ್ಲಿ ವೆಂಕಟೇಶ್ ಹಾಗೂ ಅರ್ಪಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಜುಲೈನಲ್ಲಿ ಮಂಡ್ಯದ ಗುಂಡೇಗೌಡ, ಲಲಿತಮ್ಮ ಕೊಲೆ ಮಾಡಿದ್ದು ತಾವೇ ಎಂದು ಒಪ್ಪಿಕೊಂದ್ದಾರೆ ಎನ್ನಲಾಗಿದೆ.

ದ.ಕನ್ನಡದಲ್ಲಿ ಸ್ನೇಹಿತ

ಆರೋಪಿಗಳು ದೋಚಿದ್ದ 305 ಗ್ರಾಂ ಚಿನ್ನಾಭರಣ ಮಾರಾಟ ಮಾಡಿ, ಬಂದ ಹಣವನ್ನು ತೆಗೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತಮಂಜಲ್ ಗ್ರಾಮದಲ್ಲಿದ್ದ ತಮ್ಮ ಸ್ನೇಹಿತ ಗೌತಮ್‍ ಎಂಬಾತನ ಮನೆಯಲ್ಲಿ ತಲೆಮರೆಸಿಕೊಂಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News