ಗುಣಮಟ್ಟದ ಶಿಕ್ಷಣವೆಂದರೆ ಪಬ್ಲಿಕ್ ಪರೀಕ್ಷೇಯೇ...

Update: 2019-10-27 13:32 GMT

ರಾಜ್ಯ ಸರಕಾರ ಏಳನೇ ತರಗತಿಗೆ ಈ ಶೈಕ್ಷಣಿಕ ವರ್ಷದಿಂದಲೇ ಪಬ್ಲಿಕ್ ಪರೀಕ್ಷೆ ನಡೆಸುವುದಾಗಿ ಆದೇಶಿಸಿದೆ. ಅದರ ಉದ್ದೇಶ ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಗುಣಮಟ್ಟ ಸುಧಾರಿಸುವುದು. ಈ ಉದ್ದೇಶವನ್ನು ಕೇಳಿದ ತಕ್ಷಣಕ್ಕೆ ಬಹುತೇಕ ಜನರಿಗೆ ಮೇಲ್ನೋಟಕ್ಕೆ ಇದು ಒಳ್ಳೆಯ ಉದ್ದೇಶವೇ ಎನಿಸಿರಬಹುದು. ಆದರೆ ಶಿಕ್ಷಣದ ಗುಟ್ಟಮಟ್ಟ ಸುಧಾರಿಸುವುದಕ್ಕೆ ಪಬ್ಲಿಕ್ ಪರೀಕ್ಷೆಯೇ ನಿಜವಾದ ಮಾರ್ಗವೇ? ಎಂಬುದನ್ನು ಸರಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ. ಮೂಲಭೂತ ಸೌಕರ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿಸಿ ಕೇವಲ ಪರೀಕ್ಷೆ ಎದುರಿಸಿ ಎಂದರೆ ಅದು ಎಷ್ಟು ಸರಿ ಎನ್ನುವುದನ್ನು ಎಲ್ಲರೂ ಒಮ್ಮೆ ಪ್ರಶ್ನಿಸಿಕೊಳ್ಳಬೇಕಾಗಿದೆ.

ಹಾಗೆ ನೋಡುವುದಾದರೆ ಪಬ್ಲಿಕ್ ಪರೀಕ್ಷೆ ಮೂಲಕ ಶಿಕ್ಷಣದ ಖಾಸಗಿಕರಣವನ್ನು ಮತ್ತಷ್ಟು ಉತ್ತೇಜಿಸಿ, ಸರಕಾರಿ ಶಾಲೆಗಳನ್ನು ಇನ್ನಷ್ಟು ಕಡೆಗಣಿಸುವ ಹುನ್ನಾರ ಇದರಲ್ಲಿ ಅಡಗಿದೆ ಎನ್ನುವುದು ನನ್ನ ಅಭಿಪ್ರಾಯ. ಪ್ರಾಥಮಿಕ ಹಂತದಲ್ಲೇ ಬೋರ್ಡ್ ಎಕ್ಸಾಂ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಸ್ಥಿತಿವಂತ ಪೋಷಕರು ಸಹಜವಾಗಿಯೇ ಎಲ್ಲಾ ಸೌಲಭ್ಯಗಳಿರುವ ಖಾಸಗಿ ಶಾಲೆಗಳತ್ತಲೇ ಇನ್ನಷ್ಟು ಮುಖ ಮಾಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲದಿದ್ದರೆ ತಮ್ಮ ಮಕ್ಕಳು ಪ್ರಾಥಮಿಕ ಹಂತದಲ್ಲೇ ಶಿಕ್ಷಣದಿಂದ ವಂಚಿತರಾಗಿ ಬಿಡುತ್ತಾರೆ ಎನ್ನುವ ಆತಂಕ ಜನರಿಗೆ ಇದ್ದೇ ಇರುತ್ತದೆ. ಹೀಗಾಗಿ ಕಷ್ಟವಾದರೂ ಸರಿ ತಮ್ಮ ಮಕ್ಕಳನ್ನು ಮೂಲಸೌಕರ್ಯವಿರುವ ಖಾಸಗಿ ಶಾಲೆಗಳಿಗೆ ದಾಖಲಿಸಬೇಕೆಂಬ ಮನೋಭಾವ ಬರದೆ ಇರದು. ಆದ್ದರಿಂದ ಪಬ್ಲಿಕ್ ಪರೀಕ್ಷೆ ಎನ್ನುವುದು ಬಡ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ಇದು ಎನ್ನುವುದರಲ್ಲಿ ಅನುಮಾನವಿಲ್ಲ. ಒಂದೆಡೆ ಸರಕಾರಗಳೇ ಸರ್ವರಿಗೂ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆ 2009 ಅನ್ನು ಜಾರಿಗೆ ತಂದಿದೆ. ಆದರೆ ಪಬ್ಲಿಕ್ ಪರೀಕ್ಷೆ ನಡೆಸುವ ಮೂಲಕ ಸರಕಾರವೇ ಈ ಕಾಯ್ದೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ. ಸರಕಾರವೇ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುವುದಾದರೆ ಇದನ್ನು ಅನುಷ್ಠಾನಕ್ಕೆ ತರುವುದಾದರೂ ಯಾರು.

ಬಹುತೇಕ ಸರಕಾರಿ ಶಾಲೆಗಳಲ್ಲಿ ಇಂದಿಗೂ ಅಗತ್ಯಕ್ಕೆ ಅನುಗುಣವಾಗಿ ತರಗತಿ ಕೊಠಡಿಗಳಿಲ್ಲ, ವಿಷಯಾಧಾರಿತ ಶಿಕ್ಷಕರಿಲ್ಲ. ಇನ್ನು ಮಕ್ಕಳ ಬುದ್ಧಿ ಮತ್ತೆಗೆ ಅನುಸಾರವಾಗಿ ಕಲಿಸುವ ವಿಧಾನವಂತು ಇಲ್ಲವೇ ಇಲ್ಲ. ಇಂತಹ ನೂರಾರು ಅಗತ್ಯತೆಗಳನ್ನು ಪೂರೈಸದೆ, ಸರಕಾರ ಕೇವಲ ಪಬ್ಲಿಕ್ ಪರೀಕ್ಷೆ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುತ್ತೇವೆ ಎನ್ನುವುದು ಸರಿಯೇ. ಮತ್ತೊಂದೆಡೆ ಎಲ್ಲ ಮೂಲಭೂತ ಸೌಕರ್ಯ ಗಳನ್ನು ಹೊಂದಿರುವ ಖಾಸಗಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಸಹಜವಾಗಿಯೇ ಪಬ್ಲಿಕ್ ಪರೀಕ್ಷೆಯನ್ನು ಎದುರಿಸಿ ಪ್ರೌಢಶಿಕ್ಷಣಕ್ಕೆ ಹೋಗುತ್ತಾರೆ. ಆದರೆ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಹಂತದಲ್ಲೇ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗೆ ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಾ... ಆ ಶಾಲೆಗಳು ಮುಚ್ಚುವ ಹಂತವನ್ನು ತಲುಪುತ್ತವೆ ಎನ್ನುವುದು ಸುಳ್ಳಲ್ಲ. ಹೀಗಾಗಿ ಪಬ್ಲಿಕ್ ಪರೀಕ್ಷೆ ಮೂಲಕ ಸರಕಾರವೇ ಶಿಕ್ಷಣದ ಮಾರಾಟವನ್ನು ಉತ್ತೇಜಿಸಲು ಮಾಡಿರುವ ಪ್ಲಾನ್ ಎನಿಸುತ್ತಿದೆ. ಹೀಗೆ ಪ್ರಾಥಮಿಕ ಹಂತದಲ್ಲೇ ಶಿಕ್ಷಣದಿಂದ ವಂಚಿತ ರಾಗುವ ವಿದ್ಯಾರ್ಥಿಗಳ ಭವಿಷ್ಯ ಶೋಚನೀಯ ಸ್ಥಿತಿಗೆ ತಲುಪಿರುವ ತಾಜಾ ಉದಾಹರಣೆಗಳು ನನ್ನ ಕಣ್ಮುಂದೆ ಇವೆ. ಸರಕಾರಿ ಶಾಲೆಯಲ್ಲೇ ಕಲಿಯುತ್ತಿದ್ದ ನನಗೆ ಐದನೇ ತರಗತಿಯಿಂದಲೇ ವಿಷಯಾಧಾರಿತ ಯಾವ ಶಿಕ್ಷಕರೂ ಇರಲಿಲ್ಲ. ಅದರಲ್ಲೂ ಹಿಂದಿ ವಿಷಯ ಬೋಧನೆಗೆ ಶಿಕ್ಷಕರೇ ಇರಲಿಲ್ಲ. 2002ರ ಶೈಕ್ಷಣಿಕ ಸಾಲಿನಲ್ಲಿ ನಾನೂ ಕೂಡ ಏಳನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಎದುರಿಸಬೇಕಾಯಿತು. ಆಗ ಅನಿವಾರ್ಯವಾಗಿ ಪಕ್ಕದ ಊರಿನ ಶಾಲೆಯ ಶಿಕ್ಷಕಿಯೊಬ್ಬರಿಗೆ ನಮ್ಮಿಂದಲೇ ಪ್ರತೀ ವಿದ್ಯಾರ್ಥಿಗೆ 5 ರೂ.ಯಂತೆ ಸಂಗ್ರಹಿಸಿ ಗೌರವಧನ ನೀಡಿ ವಾರಕ್ಕೆ ಮೂರು ತರಗತಿಗಳನ್ನು ಕೊಡಿಸಿದ್ದರು. ಆ ಬಳಿಕವಷ್ಟೇ ನಾವು ಪಬ್ಲಿಕ್ ಪರೀಕ್ಷೆಗೆ ತಯಾರಾಗಬೇಕಾಯಿತು. ಇನ್ನು ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿ ಪಬ್ಲಿಕ್ ಪರೀಕ್ಷೆಯಲ್ಲಿ ನಕಲು ಮಾಡಿಸಿ ಪಾಸಾಗುವಂತೆ ಮಾಡಲಾಯಿತು. ಇದೆಲ್ಲದರ ಹೊರತ್ತಾಗಿಯೂ ಫೇಲ್ ಆದ ನನ್ನ ಇಬ್ಬರು ಸ್ನೇಹಿತೆಯರಿಗೆ, ನಾನು 8ನೇ ತರಗತಿಗೆ ಹೋಗುತ್ತಿರುವಾಗಲೇ ವಿವಾಹ ಮಾಡಲಾಯಿತು. ಇನ್ನು ಫೇಲಾದ ನಾಲ್ಕು ಬಾಲಕರು ಶಿಕ್ಷಣದಿಂದ ಸಂಪೂರ್ಣ ಹೊರಗುಳಿದರು. ಅದರಲ್ಲಿ ಇಬ್ಬರು ಊರಿನಲ್ಲೇ ಕೂಲಿಕೆಲಸ ಮಾಡಿದರೆ, ಮತ್ತಿಬ್ಬರು ಬೆಂಗಳೂರಿಗೆ ಹೋಗಿ ಬೇಕರಿಗಳಲ್ಲಿ ಕೆಲಸಕ್ಕೆ ಸೇರಿದರು. ಇದು ಪಬ್ಲಿಕ್ ಪರೀಕ್ಷೆ ಎದುರಿಸಿದ ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿ ಅನುಭವಿಸಿದ ನನ್ನ ಅನುಭವ. ಹೀಗಾಗಿ ಪಬ್ಲಿಕ್ ಪರೀಕ್ಷೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗೆ ಉತ್ತೇಜನ ನೀಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಅನುತ್ತೀರ್ಣರಾದ ಮಕ್ಕಳು ಶಾಲೆಯನ್ನು ಬಿಡುತ್ತಾರೆ ಎನ್ನುವುದು ನಮ್ಮ ಅನುಭವಗಳಿಂದ ನಮಗೆ ತಿಳಿದಿದೆ. ಹೀಗೆ ಫೇಲ್ ಆಗುವವರಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರೇ ಹೆಚ್ಚಿನವರು. ಇದರಿಂದ ಅರ್ಧದಲ್ಲೇ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚು. ಅನಿವಾರ್ಯವಾಗಿ ಅವರೆಲ್ಲಾ ಕೌಶಲ್ಯ ರಹಿತ ಕಾರ್ಮಿಕರಾಗಿ ಬದಲಾಗುವರು. ಇದು ಕಂಟಕವಾಗಿ ಪರಿಣಮಿಸಲಿದೆ. ಎಲ್ಲಾ ಮಕ್ಕಳು ಉತ್ತಮ ರೀತಿಯಲ್ಲಿ ಕಲಿಯಲು ಇರುವ ಅಡ್ಡಿಗಳೇನು? ಎಂಬುದನ್ನು ಅರ್ಥಮಾಡಿಕೊಂಡು ನಿಗದಿತ ಕಾಲಮಿತಿಯಲ್ಲಿ ಇವನ್ನು ಇಲ್ಲವಾಗಿಸಲು ಪ್ರಯತ್ನಿಸುವುದು ಸರಿಯಾದ ವಿಧಾನ. ಪರೀಕ್ಷೆ ಹೆಚ್ಚೆಂದರೆ, ಮಕ್ಕಳು ಏನನ್ನು ಕಲಿತಿಲ್ಲವೆಂದು ಸ್ವಲ್ಪಮಟ್ಟಿಗೆ ಹೇಳಬಹುದೇ ಹೊರತು, ಮಕ್ಕಳ ಕಲಿಕೆಯನ್ನು ಸುಧಾರಿಸಲಾರವು. ಬದಲಾಗಿ ಒತ್ತಡವೊಂದನ್ನು ಒಡ್ಡಿದರೆ ಅವರು ಶಾಲಾ ಶಿಕ್ಷಣದಿಂದ ದೂರವಾಗುವ ಸಾಧ್ಯತೆಗಳೇ ಹೆಚ್ಚು ಎನ್ನುವುದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಫ್.ಸಿ ಚೇಗರೆಡ್ಡಿ ಅವರ ಅಭಿಪ್ರಾಯ.

ಇನ್ನು ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಕೆಲಸ ಮಾಡಿದ ವಿದ್ಯಾಂಕುರ ಯೋಜನೆ ಸಂಯೋಜಕ ಕಾಂತರಾಜು ಅವರು ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೌಶಲ್ಯ ತರಬೇತಿ ಯೋಜನೆಗೆ ಬೇಕಾಗಿರುವ ನಿರುದ್ಯೋಗಿಗಳನ್ನು ಸೃಷ್ಟಿಸುವ ಹುನ್ನಾರ ಈ ಪಬ್ಲಿಕ್ ಪರೀಕ್ಷೆ ಎನ್ನುವ ಭೂತದಲ್ಲಿ ಇದೆ. ಹೀಗಾಗಿ ಯಾವುದೇ ಸೌಲಭ್ಯಗಳಿಲ್ಲದೆ ಕೇವಲ ಪರೀಕ್ಷೆಗಳನ್ನು ಮಾಡುವ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತೇವೆ ಎನ್ನುವುದು ಅಸಾಧ್ಯವಾದ ಮಾತು ಎನ್ನುತ್ತಾರೆ.

ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿದ್ದರಿಂದಲೇ ಫೇಲ್ ಆಗಿದ್ದಾನೆ ಎನ್ನುವುದು ಸ್ಪಷ್ಟ. ಹೀಗೆ ಕಲಿಕೆಯಲ್ಲಿ ಹಿಂದುಳಿದು ಫೇಲ್ ಆದ ವಿದ್ಯಾರ್ಥಿಗಳು ಮತ್ತದೇ ತರಗತಿಯಲ್ಲಿ ಕುಳಿತು ಕಲಿಯುವಾಗ ಆ ವಿದ್ಯಾರ್ಥಿ ಕಲಿಕೆಗೆ ಬೇರೆ ವಿಧಾನವನ್ನೇ ನಾದರೂ ಅನುಸರಿಸುವ ಯೋಜನೆಯನ್ನು ಸರಕಾರ ರೂಪಿಸಿದೆಯೇ.? ಉದಾಹರಣೆಗೆ ಒಂದರಿಂದ ಮೂರನೇ ತರಗತಿಯವರೆಗೆ ಇದ್ದ ನಲಿ-ಕಲಿ ಬೋಧನಾ ವಿಧಾನದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಮತ್ತು ವಿಶೇಷ ಗಮನಹರಿಸಿ ಕಲಿಸುವ ನಿಯಮವಿದೆ. ಆ ಮೂಲಕ ವಿದ್ಯಾರ್ಥಿಗಳನ್ನು ಫೇಲ್ ಮಾಡದೆ ಯಾವ ಪಠ್ಯದಲ್ಲಿ ಹಿಂದುಳಿದಿದ್ದಾನೋ ಅದನ್ನು ಕಲಿಸುವ ಕೆಲಸ ನಡೆಯುತ್ತಿತ್ತು. ಅಂತಹ ವಿಧಾನವನ್ನೇನಾದರೂ ಸರಕಾರ ಪಾಲಿಸುತ್ತದೆಯೇ ಎನ್ನುವುದು ನನ್ನ ಪ್ರಶ್ನೆ.

ನಿಜವಾಗಿಯೂ ಗುಣಮಟ್ಟದ ಶಿಕ್ಷಣ ಅಂದ್ರೆ ಕೇವಲ ಪರೀಕ್ಷೆಗಳನ್ನು ಎದುರಿಸಿ ಅಂಕಗಳನ್ನು ಗಳಿಸುವುದಷ್ಟೇ ಅಲ್ಲ. ತಾನು ಪಡೆದ ಶಿಕ್ಷಣದಿಂದ ತನ್ನ ಬದುಕು ರೂಪಿಸಿಕೊಳ್ಳುವುದಕ್ಕೆ ಸಾಧ್ಯವೇ ಎನ್ನುವುದು ಶಿಕ್ಷಣದ ಗುಣಮಟ್ಟವನ್ನು ತಿಳಿಸುತ್ತದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಸಾಮಾಜಿಕ ಜವಾಬ್ದಾರಿ, ಶಿಸ್ತು, ಪರಸ್ಪರ ಬಾಂಧ್ಯವಗಳ ಬೆಲೆಯನ್ನು ಅರಿತು ನಿಜಮಾನವನಾಗಿ ಬದುಕುವುದನ್ನು ರೂಪಿಸಿಕೊಳ್ಳುವಂತೆ ಮಾಡುವುದು ಗುಣಮಟ್ಟದ ಶಿಕ್ಷಣ ಎನ್ನುವುದು ಅರ್ಥಮಾಡಿಕೊಳ್ಳಬೇಕಿದೆ. ಏನೇ ಇರಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡಲು ಹೊರಟಿರುವ ಸರಕಾರ ಫೇಲ್ ಆದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಸರಕಾರವೇ ಹೊರಬೇಕಾಗುತ್ತದೆ.

ಸುಪ್ರೀತಾ ರವಿ. ಮಡಿಕೇರಿ

Writer - ಸುಪ್ರೀತಾ ರವಿ. ಮಡಿಕೇರಿ

contributor

Editor - ಸುಪ್ರೀತಾ ರವಿ. ಮಡಿಕೇರಿ

contributor

Similar News