ಅ.29ರಂದು ಯುರೋಪಿಯನ್ ಸಂಸದೀಯ ನಿಯೋಗದಿಂದ ಕಾಶ್ಮೀರ ಭೇಟಿ

Update: 2019-10-28 13:57 GMT

ಹೊಸದಿಲ್ಲಿ,ಅ.28: ಐರೋಪ್ಯ ಒಕ್ಕೂಟದ 27 ಸಂಸದರನ್ನೊಳಗೊಂಡ ನಿಯೋಗವೊಂದು ವಸ್ತುಸ್ಥಿತಿಯ ಪರಿಶೀಲನೆಗಾಗಿ ಮಂಗಳವಾರ ಕಾಶ್ಮೀರಕ್ಕೆ ಭೇಟಿ ನೀಡಲಿದೆ.

ಸೋಮವಾರ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರನ್ನು ಭೇಟಿಯಾಗಿ ಕಾಶ್ಮೀರ ಮತ್ತು ಸಂವಿಧಾನದ ವಿಧಿ 370ರ ರದ್ದತಿಯ ಬಳಿಕ ಅಲ್ಲಿನ ಸ್ಥಿತಿಯ ಕುರಿತು ಚರ್ಚಿಸಿತು. ನಿಯೋಗಕ್ಕೆ ಅಗತ್ಯ ಮಾಹಿತಿಗಳನ್ನು ಒದಗಿಸಿದ ಮೋದಿ,ನಿಯೋಗದ ಭೇಟಿಯು ಕಾಶ್ಮೀರದ ಅಭಿವೃದ್ಧಿ ಮತ್ತು ಆಡಳಿತದ ಆದ್ಯತೆಗಳ ಬಗ್ಗೆ ಅದಕ್ಕೆ ಸ್ಪಷ್ಟ ಚಿತ್ರಣವನ್ನು ನೀಡಲಿದೆ ಎಂದು ಹೇಳಿದರು.

ನಿಯೋಗವು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನೂ ಭೇಟಿಯಾಗಿ ಚರ್ಚಿಸಿತು.

ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸಿದ್ದು ಐತಿಹಾಸಿಕ ನಿರ್ಧಾರವಾಗಿತ್ತು ಎಂದು ನಿಯೋಗವನ್ನು ಭೇಟಿಯಾದ ಬಳಿಕ ಹೇಳಿದ ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು, ಸಾಮಾನ್ಯ ಅಭಿಪ್ರಾಯಕ್ಕೆ ವಿರುದ್ಧವಾಗಿ ವಿಧಿ 370 ರ ನೆಪದಲ್ಲಿ ರಾಜ್ಯವು ಅತ್ಯಂತ ಶೋಷಣೆಗೊಳಗಾಗಿತ್ತು ಎಂದರು.

ಆ.5ರಂದು ಕೇಂದ್ರವು ಜಮ್ಮ-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ಬಳಿಕ ಪ್ರದೇಶದಲ್ಲಿ ಸಂವಹನವನ್ನು ನಿರ್ಬಂಧಿಸಲಾಗಿದೆ. 70 ದಿನಗಳ ಬಳಿಕ ಪೋಸ್ಟ್ ಪೇಡ್ ಮೊಬೈಲ್‌ಗಳು ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಪುನರಾರಂಭಿಸಲಾಗಿದೆಯಾದರೂ ಕಲಂ 144 ಸೇರಿದಂತೆ ಇನ್ನೂ ಹಲವಾರು ನಿರ್ಬಂಧಗಳು ಕಣಿವೆಯಲ್ಲಿ ಜಾರಿಯಲ್ಲಿವೆ.

ಕಳೆದ ವಾರ ಅಮೆರಿಕದ ಸಂಸದರ ಗುಂಪೊಂದು ಜಮ್ಮು-ಕಾಶ್ಮೀರದಲ್ಲಿಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಸ್ಥಳೀಯ ನಿವಾಸಿಗಳು ಮತ್ತು ರಾಜಕೀಯ ನಾಯಕರ ಬಂಧನಗಳಿಗೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ಇಲಾಖೆಯು ಭಾರತ ಸರಕಾರಕ್ಕೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿದೆ ಎಂದು ಪ್ರಭಾರ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಆಲಿಸ್ ವೆಲ್ಸ್ ಹೇಳಿದ್ದರು.

 ಮಾನವ ಹಕ್ಕುಗಳನ್ನು ಗೌರವಿಸುವಂತೆ ಮತ್ತು ಅಂತರ್ಜಾಲ ಹಾಗೂ ಮೊಬೈಲ್ ಫೋನ್ ಸೇರಿದಂತೆ ಎಲ್ಲ ಸೇವೆಗಳನ್ನು ಸಂಪೂರ್ಣವಾಗಿ ಪುನರಾರಂಭಿಸುವಂತೆ ನಾವು ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿದ್ದೇವೆ ಎಂದಿದ್ದರು.

ಜಮ್ಮು-ಕಾಶ್ಮೀರದಲ್ಲಿ ಸರಕಾರದ ಕ್ರಮವು ಭಾರತದ ಆಂತರಿಕ ವಿಷಯವಾಗಿದೆ ಎಂದು ಅಮೆರಿಕವು ಈ ಮೊದಲು ಒಪ್ಪಿಕೊಂಡಿತ್ತು. ಜಮ್ಮ-ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರಳಿಸಲು ತಾನು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಕೇಂದ್ರವೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡಿತ್ತು.

ಐರೋಪ್ಯ ಒಕ್ಕೂಟದ ಸಂಸದರ ನಿಯೋಗದ ಭೇಟಿಯ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಪುತ್ರಿ ಇಲ್ತಿಝಾ ಮುಫ್ತಿ ಅವರು,‘ “ಜನರು,ಸ್ಥಳೀಯ ಮಾಧ್ಯಮಗಳು,ವೈದ್ಯರು ಮತ್ತು ನಾಗರಿಕ ಸಮಾಜದ ಸದಸ್ಯರೊಡನೆ ಮಾತನಾಡುವ ಅವಕಾಶ ನಿಯೋಗಕ್ಕೆ ದೊರೆಯುತ್ತದೆ ಎಂದು ಆಶಿಸಿದ್ದೇನೆ. ಕಾಶ್ಮೀರ ಮತ್ತು ಜಗತ್ತಿನ ನಡುವಿನ ಕಬ್ಬಿಣದ ತೆರೆಯು ತೆರವುಗೊಳ್ಳಬೇಕಿದೆ ಮತ್ತು ಕಾಶ್ಮೀರವನ್ನು ಪ್ರಕ್ಷುಬ್ಧ ಸ್ಥಿತಿಗೆ ತಳ್ಳಿರುವುದಕ್ಕಾಗಿ ಭಾರತ ಸರಕಾರವನ್ನು ಉತ್ತರದಾಯಿಯಾಗಿಸಬೇಕು” ’ಎಂದು ಟ್ವೀಟಿಸಿದ್ದಾರೆ. ರಾಜ್ಯದಲ್ಲಿಯ ನಿರ್ಬಂಧಗಳು ಮತ್ತು ಬಂಧಿತ ನಾಗರಿಕರ ಬಿಡುಗಡೆಯ ಕುರಿತು ಕೇಂದ್ರ ಸರಕಾರವು ಸುಳ್ಳುಹೇಳುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ಮೆಹಬೂಬ ಹಾಗೂ ರಾಜ್ಯದ ಇತರ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಪುತ್ರ ಉಮರ್ ಅಬ್ದುಲ್ಲಾ ಅವರು ಆ.5ರಿಂದ ಬಂಧನದಲ್ಲಿದ್ದಾರೆ.

ಕಾಶ್ಮೀರ ಭೇಟಿಯು ಆಡಳಿತದ ಸ್ಪಷ್ಟ ಚಿತ್ರಣವನ್ನು ನಿಯೋಗಕ್ಕೆ ಒದಗಿಸಬೇಕು: ಮೋದಿ

 ಭಾರತಕ್ಕೆ ನಿಯೋಗಕ್ಕೆ ಸ್ವಾಗತ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು,ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಅದರ ಭೇಟಿಯು ಫಲಪ್ರದವಾಗಲೆಂದು ಆಶಯ ವ್ಯಕ್ತಪಡಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ಭೇಟಿಯು ಜಮ್ಮು,ಕಾಶ್ಮೀರ ಮತ್ತು ಲಡಾಖ್‌ನ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನಿಯೋಗಕ್ಕೆ ಸಾಧ್ಯವಾಗಿಸಬೇಕು ಮತ್ತು ಪ್ರದೇಶದಲ್ಲಿಯ ಅಭಿವೃದ್ಧಿ ಮತ್ತು ಆಡಳಿತ ಆದ್ಯತೆಗಳ ಬಗ್ಗೆ ಅದಕ್ಕೆ ಸ್ಪಷ್ಟ ಚಿತ್ರಣವನ್ನು ಒದಗಿಸಬೇಕು ಎಂದು ಮೋದಿ ಹೇಳಿದರು.

 ಭಯೋತ್ಪಾದಕ ಚಟುವಟಿಕೆಗಳ ಬೆಂಬಲಿಗರು ಅಥವಾ ಪ್ರಾಯೋಜಕರು ಮತ್ತು ಸರಕಾರದ ನೀತಿಯಾಗಿ ಭಯೋತ್ಪಾದನೆಯನ್ನು ಬಳಸುವವರ ವಿರುದ್ಧ ತುರ್ತು ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಮೋದಿ ನಿಯೋಗದೊಂದಿಗೆ ಚರ್ಚೆಯ ವೇಳೆ ಪಾಕಿಸ್ತಾನವನ್ನು ಹೆಸರಿಸದೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News