×
Ad

ಸ್ನಾನದ ಕೊಠಡಿಗೆ ನುಗ್ಗಿ ಕಳವು ಪ್ರಕರಣ;12 ಮಂಗಳಮುಖಿಯರ ಬಂಧನ

Update: 2019-10-28 23:01 IST

ಬೆಂಗಳೂರು, ಅ.28: ಸ್ನಾನದ ಕೊಠಡಿಗೆ ನುಗ್ಗಿ, ಇಬ್ಬರ ಮೇಲೆ ಹಲ್ಲೆ ಮಾಡಿ ಹಣ, ಚಿನ್ನಾಭರಣ ದೋಚಿದ್ದ ಆರೋಪ ಪ್ರಕರಣ ಸಂಬಂಧ 12 ಮಂಗಳ ಮುಖಿಯರನ್ನು ಇಲ್ಲಿನ ಉತ್ತರ ವಿಭಾಗದ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸುಮಿತ್ರಾ(36), ರೇಣುಕಾ(30), ಬಬ್ಲು(23), ಅಂಜು(24), ಶೈಲು(22), ವಿನು(24), ದೀಪು(27), ಲಯ(30), ಸುಷ್ಮಿತಾ(29), ವೈಷ್ಣವಿ(23), ವೈಶು(22), ಆರತಿ(24) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಅ.25ರಂದು ಮಾರಪ್ಪನಪಾಳ್ಯದ ಉಲ್ಲಾಸ್ ಟಾಕೀಸ್ ಎದುರಿಗಿರುವ ಸ್ನಾನದ ಕೊಠಡಿಯಲ್ಲಿ ಕಾರ್ಯನಿರ್ವಹಿಸುವ ವಾಣಿಶ್ರೀ, ಪ್ರೀತಿ ಎಂಬುವರ ಮೇಲೆ ಮಂಗಳ ಮುಖಿಯವರಾದ ಸುಮಿತ್ರಾ, ರೇಣುಕಾ ಸೇರಿ ಇತರೆ 10 ಜನರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅವರ ಕೂದಲನ್ನು ಬಲವಂತವಾಗಿ ಕೊಯ್ದು ಬಿಸಾಡಿ, ಕುತ್ತಿಗೆಯಲ್ಲಿದ್ದ ಚಿನ್ನಾಭರಣ, ನಗದು, ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಇಲ್ಲಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬೆಂಗಳೂರು ನಗರ ಮಂಗಳಮುಖಿಯರ ಅಧ್ಯಕ್ಷೆ ಆಶಮ್ಮ ಎಂಬಾಕೆಯ ತಂಡದಿಂದ ಆರೋಪಿ ಸುಮಿತ್ರಾ ಬೇರೆ ಹೋಗಿದ್ದಳು. ಇದೇ ವಿಚಾರವಾಗಿ, ಅ.25ರಂದು ಗಲಾಟೆ ನಡೆದಿದ್ದು, ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಹ ದಾಖಲಾಗಿತ್ತು. ಬಳಿಕ, ಆಶಮ್ಮ ಮನೆಗೆ ನುಗ್ಗಿದ ಆರೋಪಿಗಳು, ಗಲಾಟೆ ನಡೆಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಅಲ್ಲದೆ, ಈ ಇಬ್ಬರು ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಹಂಚಿಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News