ಕೋಲ್ಕತಾದಲ್ಲಿ ಹಗಲು-ರಾತ್ರಿ ಟೆಸ್ಟ್ ಆಯೋಜಿಸಲು ಬಿಸಿಸಿಐಗೆ ಆಸಕ್ತಿ

Update: 2019-10-29 04:55 GMT

ಹೊಸದಿಲ್ಲಿ, ಅ.28: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮುಂಬರುವ ಸರಣಿಯ ಎರಡನೇ ಟೆಸ್ಟ್‌ನ್ನು ಹಗಲು ರಾತ್ರಿ ಟೆಸ್ಟ್ ಆಗಿ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಯಸಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಿಳಿಸಿದೆ.

  ಕೋಲ್ಕತಾದ ಈಡನ್ ಗಾರ್ಡನ್ಸ್ ಭಾರತದ ಮೊದಲ ಹಗಲು-ರಾತ್ರಿ ಟೆಸ್ಟ್‌ನ್ನು ಆಯೋಜಿಸಬಹುದು. ಆದರೆ, ಇದಕ್ಕೆ ಬಿಸಿಬಿ ಇನ್ನೂ ಒಪ್ಪಿಗೆ ನೀಡಿಲ್ಲ. ಅವರು (ಬಿಸಿಸಿಐ) ಪ್ರಸ್ತಾಪಿಸಿದ್ದಾರೆ (ಹಗಲು-ರಾತ್ರಿ ಟೆಸ್ಟ್) ಮತ್ತು ಸ್ವಲ್ಪ ಯೋಚಿಸಿದ ನಂತರ ನಾವು ಅವರಿಗೆ ತಿಳಿಸುತ್ತೇವೆ ಎಂದು ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಯ ಅಧ್ಯಕ್ಷ ಅಕ್ರಮ್ ಖಾನ್ ರವಿವಾರ ಸುದ್ದಿಗಾರರಿಗೆ ತಿಳಿಸಿದರು.

ನಾವು ಪತ್ರವನ್ನು ಸ್ವೀಕರಿಸಿದ್ದೇವೆ ಮತ್ತು ಈ ನಿಟ್ಟಿನಲ್ಲಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಆದರೆ ನಾವು ಅದನ್ನು (ಇನ್ನೂ) ಚರ್ಚಿಸಿಲ್ಲ. ನಮ್ಮ ನಿರ್ಧಾರದ ಬಗ್ಗೆ ಒಂದು ಅಥವಾ ಎರಡು ದಿನಗಳಲ್ಲಿ ನಾವು ಅವರಿಗೆ ತಿಳಿಸುತ್ತೇವೆ ಎಂದು ಅವರು ಹೇಳಿದರು.

ಹೊಸದಾಗಿ ಚುನಾಯಿತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಈ ಹಿಂದೆ ಭಾರತದ ನಾಯಕ ವಿರಾಟ್ ಕೊಹ್ಲಿ ಒಪ್ಪುವುದಾದರೆ ಬಾಂಗ್ಲಾದೇಶ ರಣಿಯಲ್ಲಿಯೇ ಭಾರತ ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್ ಆಡಬಹುದು ಎಂದು ಹೇಳಿದ್ದಾರೆ.

ಮೊದಲ ಟೆಸ್ಟ್ ನವೆಂಬರ್ 14 ರಂದು ಇಂದೋರ್‌ನಲ್ಲಿ ಪ್ರಾರಂಭವಾಗಲಿದ್ದು, ಎರಡನೇ ಟೆಸ್ಟ್ ನವೆಂಬರ್ 22 ರಿಂದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ. ಆಟಗಾರರ ಮತ್ತು ತಂಡದ ನಿರ್ವಹಣೆಯ ಒಪ್ಪಿಗೆ ಪಡೆದ ನಂತರವೇ ಮಂಡಳಿಯು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಬಿಸಿಬಿ ಮುಖ್ಯಸ್ಥ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ. ಮೊದಲಿಗೆ ನಾವು ಅದರ ಬಗ್ಗೆ ಆಟಗಾರರು ಮತ್ತು ತಂಡದ ನಿರ್ವಹಣೆಯ ಸದಸ್ಯರ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕಾಗಿದೆ. ಇದು ಸಂಪೂರ್ಣವಾಗಿ ತಾಂತ್ರಿಕ ವಿಷಯವಾಗಿದೆ ಎಂದು ಅವರು ತಿಳಿಸಿದರು.

 ಪ್ರವಾಸ ಸರಣಿಯು ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯೊಂದಿಗೆ ಪ್ರಾರಂಭವಾಗುತ್ತದೆ, ಅದರಲ್ಲಿ ಮೊದಲನೆಯ ಪಂದ್ಯ ನವೆಂಬರ್ 3 ರಂದು ನಡೆಯಲಿದೆ. ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬಾಂಗ್ಲಾದೇಶದ ಮೊದಲ ಪಂದ್ಯವಾಗಿದೆ.

ಆಸ್ಟ್ರೇಲಿಯದ ಬಳಿಕ ಭಾರತದಲ್ಲಿ ಪ್ರಯೋಗ

 ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಹಗಲು-ರಾತ್ರಿ ಟೆಸ್ಟ್ ಗೆ ಬಾಂಗ್ಲಾದೇಶವನ್ನು ಆಹ್ವಾನಿಸುವ ಮೂಲಕ ಭಾರತ ಬದಲಾವಣೆ ಹಾದಿಯತ್ತ ಮಹತ್ವದ ಹೆಜ್ಜೆ ಇಟ್ಟಿದೆ.

 ಮೊದಲ ಹಗಲು-ರಾತ್ರಿ ಟೆಸ್ಟ್ 2015 ರಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ನಡುವೆ ನಡೆದಿದ್ದು, ಪಾಕಿಸ್ತಾನ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಝಿಂಬಾಬ್ವೆ ಕೂಡ ಮುಂದಿನ ನಾಲ್ಕು ವರ್ಷಗಳಲ್ಲಿ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಲಿದೆ.

ಭಾರತವು ಬದಲಾವಣೆಯಲ್ಲಿ ಭಾಗವಹಿಸುವುದನ್ನು ವಿರೋಧಿಸಿತ್ತು. ಅದು 2016 ರಲ್ಲಿ ದುಲೀಪ್ ಟ್ರೋಫಿಯಲ್ಲಿ ಈ ಪರಿಕಲ್ಪನೆಯನ್ನು ಪ್ರಯೋಗಿಸಿತ್ತು. ಆದರೆ ಬಳಿಕ ಪ್ರಗತಿ ಕಾಣಲಿಲ್ಲ. ಈಗ ಭಾರತ ತಂಡದಲ್ಲಿರುವ ಕೆಲವು ಆಟಗಾರರು ದುಲೀಪ್ ಟ್ರೋಫಿಯಲ್ಲಿ ಗುಲಾಬಿ ಬಣ್ಣದ ಚೆಂಡಿನಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಅವರಲ್ಲಿ ಮಾಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ಹನುಮ ವಿಹಾರಿ, ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಸೇರಿದ್ದಾರೆ. 2016 ರಲ್ಲಿ ದುಲೀಪ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಈ ಪರಿಕಲ್ಪನೆಯನ್ನು ಜಾರಿಗೆ ತಂದಾಗ ಚೇತೇಶ್ವರ ಪೂಜಾರ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News